ರೇಬಿಸ್ ಹರಡದಂತೆ ಎಚ್ಚರಿಕೆ ವಹಿಸಿ: ಎಸ್ ನಾಗಣ್ಣ

ತುಮಕೂರು

     ಮಾರಣಾಂತಿಕವಾದ ರೇಬಿಸ್ ಕಾಯಿಲೆಗೆ ಔಷಧಿ ಇಲ್ಲ. ಆದರೆ, ರೇಬಿಸ್ ಸೋಂಕಿತ ಪ್ರಾಣಿ ಕಚ್ಚಿದಾದ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ಪ್ರಕಾಶ್ ಹೇಳಿದರು.

    ನಗರದ ಪಶುಪಾಲನಾ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ಇಲಾಖೆ ಹಾಗೂ ಇನ್ನರ್‍ವೀಲ್ ಸಂಸ್ಥೆ ಇವರ ಸಹಯೋಗದಲ್ಲಿ ವಿಶ್ವ ರೆಬೀಸ್ ದಿನಾಚರಣೆ ಹಾಗೂ ಸಾಕು ಪ್ರಾಣಿಗಳಿಗೆ ಉಚಿತವಾಗಿ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ನಾಯಿ ಅಥವಾ ಪ್ರಾಣಿಗೆ ರೇಬೀಸ್ ಕಾಯಿಲೆ ಇರಬಹುದು. ಅಂತಹ ಪ್ರಾಣಿ ಕಚ್ಚಿದಾಗ ಗಾಯವನ್ನು ನೀರಿನಲ್ಲಿ ತೊಳೆಯಬೇಕು.

    ಇದರಿಂದ ಶೇಕಡ 90ರಷ್ಟು ವೈರಾಣುಗಳು ನಾಶವಾಗುತ್ತವೆ. ಆ ಗಾಯಕ್ಕೆ ಬ್ಯಾಂಡೇಜ್ ಕಟ್ಟದೆ ಗಾಳಿಯಲ್ಲಿ ಬಿಡಬೇಕು. ತಕ್ಷಣ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆದರೆ ಕಾಯಿಲೆಯಿಂದ ಗುಣಮುಖರಾಗಬಹುದು ಎಂದರು.ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಬೇಕು, ಯಾವುದೇ ಕಾಯಿಲೆ ಕಾಣಿಸಿಕೊಂಡಾಗ ಕೂಡಲೇ ಪಶುವೈದ್ಯರಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿ, ಜೊತೆಗೆ ವರ್ಷಕ್ಕೊಮ್ಮೆ ತಪ್ಪದೆ ರೆಬೀಸ್ ನಿರೋಧಕ ಲಸಿಕೆ ಹಾಕಿಸಿ ಎಂದು ಸಲಹೆ ಮಾಡಿದರು.

    ರೆಬೀಸ್ ರೋಗ ಪಕ್ಷಿಗಳು ಹಾಗೂ ಮೀನು ಹೊರತುಪಡಿಸಿ ಉಳಿದ ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ರೆಬೀಸ್ ಸೋಂಕಿತ ಪ್ರಾಣಿಗಳು ಇನ್ನೊಂದಕ್ಕೆ ಕಚ್ಚಿದಾಗ ಅದರ ಜೊಲ್ಲಿನಲ್ಲಿರುವ ವೈರಾಣುಗಳು ಕಚ್ಚಿಸಿಕೊಂಡ ಪ್ರಾಣಿಯ ರಕ್ತ, ನರದ ಮೂಲಕ ದೇಹದಲ್ಲಿ ಹರಡಿ ಕಾಯಿಲೆ ಬರುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸುತ್ತದೆ ಎಂದು ಹೇಳಿದರು.

   ರೆಬೀಸ್ ಪೀಡಿತ ಪ್ರಾಣಿ ನಿಮ್ಮ ಸಾಕು ನಾಯಿಗೆ ಕಚ್ಚಿ ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಪಾಲಕರು ತಮ್ಮ ಸಾಕು ನಾಯಿಗಳನ್ನು ಎಚ್ಚರಿಕೆ ವಹಿಸಬೇಕು ಹಾಗೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಡಾ. ಪ್ರಕಾಶ್ ಹೇಳಿದರು.ಕರ್ನಾಟಕ ರೆಡ್‍ಕ್ರಾಸ್ ಸಂಸ್ಥೆ ಸಭಾಪತಿ ಎಸ್. ನಾಗಣ್ಣನವರು ಸಾಕು ನಾಯಿಗಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಲಭಯ ರೋಗವಾದ ರೆಬೀಸ್ ಪ್ರಾಣಾಂತಿಕ. ಇದು ಹರಡದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಈಗ ಪ್ರಾಣಿಪ್ರಿಯರು ಹೆಚ್ಚಾಗಿದ್ದಾರೆ, ತಾವು ಪಾಲನೆ ಮಾಡುವ ಪ್ರಾಣಿಗಳಿಗೆ ರೆಬೀಸ್ ಹರಡದಂತೆ ಎಚ್ಚರಿಕೆ ವಹಿಸಬೇಕು. ನಾಯಿಯಂತಹ ಸಾಕು ಪ್ರಾಣಿಗಳು ಆಕಸ್ಮಿಕವಾಗಿ ಕಚ್ಚಬಹುದು ಅವುಗಳಿಗೆ ರೆಬೀಸ್ ನಿರೋಧಕ ಲಸಿಕೆ ಹಾಕಿಸಬೇಕು. ಈ ಕಾಯಿಲೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.

    ನಾಯಿಗಳು ನಿಯತ್ತಿನ ಪ್ರಾಣಿ. ಅವು ಮನೆ ಬಳಿ ಇದ್ದರೆ ನಿರಾತಂಕವಾಗಿರಬಹುದು. ಈಗ ಎಲ್ಲಡೆ ಬೀದಿ ನಾಯಿಗಳು ಹೆಚ್ಚಾಗಿವೆ. ನಾಯಿಗಳನ್ನು ಹಿಂಸಿಸಿ ಕೊಲ್ಲುವುದನ್ನು ತಡೆಯಬೇಕು. ಸಂತಾನಹರಣ ಚಿಕಿತ್ಸೆ ಮೂಲಕ ಅವುಗಳ ಸಂತತಿ ನಿಯಂತ್ರಿಸಬೇಕು ಎಂದು ನಾಗಣ್ಣನವರು ಸಲಹೆ ಮಾಡಿದರು.

    ಇನ್ನರ್‍ವೀಲ್ ಅಧ್ಯಕ್ಷೆ ಶಕುಂತಲಾ ಪ್ರಸನ್ನ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ. ನಾಗಣ್ಣ, ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಪ್ರಸನ್ನ ರೇಣುಕಾ, ವೈದ್ಯರಾದ ಡಾ. ರುದ್ರಪ್ರಸಾದ್, ಡಾ. ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link