ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ರೂಪಿಸಿ

ದಾವಣಗೆರೆ :

    ಕೆಲವೇ ಜನ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿರುವ ಸಂಪತ್ತು ಸಮಾನವಾಗಿ ಹಂಚಿಕೆ ಆಗುವ ನಿಟ್ಟಿನಲ್ಲಿ ಇಂದು ಸಂಘಟಿತ ಹೋರಾಟ ನಡೆಸಬೇಕಾದ ಅಶವ್ಯಕತೆ ಇದೆ ಎಂದು ಮೆಡಿಕಲ್ ಸರ್ವೀಸ್ ಸೆಂಟರ್‍ನ ರಾಜ್ಯ ಕಾರ್ಯದರ್ಶಿ ಡಾ| ವಸುದೇಂದ್ರ ಅಭಿಪ್ರಾಯಪಟ್ಟರು.

    ಇಲ್ಲಿನ ರೈಲ್ವೆ ನಿಲ್ದಾಣದ ಎದುರಿನ ಭಗತ್‍ಸಿಂಗ್ ಅವರ ಪ್ರತಿಮೆ ಬಳಿ ಎಐಡಿಎಸ್‍ಓ, ಎಐಡಿವೈಓ ಹಾಗೂ ಎಐಎಂಎಸ್‍ಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶಹೀದ್ ಭಗತ್‍ಸಿಂಗ್ ಅವರ 112ನೇ ಜನ್ಮ ದಿನಾಚರಣೆಯಲ್ಲಿ ಭಗತ್‍ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

    ಭಾರತಕ್ಕೆ ಸ್ವತಂತ್ರ ದೊರೆತು 7 ದಶಕಗಳು ಕಳೆದರೂ ಸಹ ದೇಶದ 90 ರಷ್ಟು ಸಂಪತ್ತನ್ನು ಕೇವಲ 1 ರಷ್ಟು ಶ್ರೀಮಂತ ವರ್ಗದ ಮನೆತನಗಳು ನಿಯಂತ್ರಿಸುತ್ತಿದ್ದರೆ, ಇನ್ನೆಷ್ಟೋ ಲಕ್ಷಾಂತರ ಜನರು ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಎಲ್ಲರಿಗೂ ಸಂಪತ್ತು ಸಮಾನವಾಗಿ ಹಂಚಿಕೆ ಆಗುವ ನಿಟ್ಟಿನಲ್ಲಿ ಹೋರಾಟ ರೂಪಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

   ಕಳೆದ 20 ವರ್ಷಗಳಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸುಮಾರು ಮೂರುವರೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಸಾವಿರಾರು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು, ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆಂದು ಆರೋಪಿಸಿದರು.

   ಎ.ಐ.ಡಿ.ವೈ.ಓ. ಜಿಲ್ಲಾ ಸಂಘಟನಾಕಾರ ಪರಶುರಾಮ್ ಪಿ ಮಾತನಾಡಿ, ಕ್ರಾಂತಿಯ ಕಿಡಿ ಭಗತ್‍ಸಿಂಗ್ ಅವರು ಯಾವ ಆದರ್ಶ, ಆಶಯಗಳಿಗಾಗಿ ತಮ್ಮ ತ್ಯಾಗ ಮಾಡಿದರೋ ಆ ಆಶಯಗಳು ಪೂರ್ಣಗೊಂಡಿದೆಯೇ ಎಂಬುದನ್ನು ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಜನ್ಮ ದಿನವನ್ನು ಆಚರಿಸಬೇಕು ಎಂದರು.

   ದೇಶದಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣಕ್ಕೆ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಪಿಣ್ಯ ವಲಯವೊಂದರಲ್ಲಿಯೇ 10 ಸಾವಿರ ಕೈಗಾರಿಕೆಗಳು ಮುಚ್ಚಿ ಹೋಗುವ ಹಂತದಲ್ಲಿದ್ದು, ದುಡಿಯುತ್ತಿದ್ದ 12 ರಿಂದ 13 ಲಕ್ಷ ಯುವಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇನ್ನೂ 16 ರಿಂದ 20 ಲಕ್ಷ ಯುವಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

    ಹೀಗೆ ಭಾರತದಾದ್ಯಂತ ಆಟೋಮೊಬೈಲ್, ಬ್ರಿಟಾನಿಯಾ, ಪಾರ್ಲೇಜಿ ಸೇರಿದಂತೆ ಹಲವಾರು ಕೈಗಾರಿಕಾ ವಲಯಗಳಲ್ಲಿ ಲಕ್ಷಾಂತರ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ದೇಶದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಕಟ್ಟುವುದು ಭಗತ್‍ಸಿಂಗ್ ಅವರಿಗೆ ಸಲ್ಲಿಸುವ ನಿಜ ಶ್ರದ್ಧಾಂಜಲಿಯಾಗಿದೆ ಎಂದು ಹೇಳಿದರು.

    ಎ.ಐ.ಡಿ.ಎಸ್.ಓ. ಜಿಲ್ಲಾಧ್ಯಕ್ಷೆ ಸೌಮ್ಯ ಮಾತನಾಡಿ, ಪ್ರಸ್ತುತ ದಿನದಿಂದ ದಿನಕ್ಕೆ ಶಿಕ್ಷಣ, ಆರೋಗ್ಯ ಖಾಸಗೀಕರಣ ಹಾಗೂ ವ್ಯಾಪಾರೀಕರಣಗೊಳ್ಳುತ್ತಿದೆ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯ ಎಂಬುವುದು ಬಡ ಮತ್ತು ಮಧ್ಯಮ ವರ್ಗಗಳಿಗೆ ಮರಿಚಿಕೆಯಾಗಿವೆ. ಇವತ್ತಿಗೂ ಶಾಲೆಗಳನ್ನೇ ಕಾಣದ 4 ಕೋಟಿಗೂ ಹೆಚ್ಚು ಮಕ್ಕಳು ಬಾಲ ಕಾರ್ಮಿಕರಾಗಿ ದೇಶದಾದ್ಯಂತ ದುಡಿಯುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಎ.ಐ.ಎಂ.ಎಸ್.ಎಸ್. ಉಪಾಧ್ಯಕ್ಷೆ ಬನಶ್ರೀ ಮಾತನಾಡಿ, ದೇಶದ ಅಸಂಖ್ಯಾತ ಬಡವರು ದಿನದಿಂದ ದಿನಕ್ಕೆ ಕಡು ಬಡವರಾಗುತ್ತಿದ್ದಾರೆ. ಕೆಲವೇ ಶ್ರೀಮಂತರು ಆಗರ್ಭ ಶ್ರೀಮಂತರಾಗುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅಶ್ಲೀಲ ಸಿನಿಮಾ, ಫೋನೋಗ್ರಫೀ ಮಾಧ್ಯಮಗಳು ಬಿತ್ತರಿಸುವ ದೃಶ್ಯ ಮಾಧ್ಯಮಗಳಿಂದ ಮಹಿಳೆಯರ ಮೇಲಿನ ಅತ್ಯಾಚಾರದ ಅತ್ಯಂತ ಭೀಕರವಾದ ಘಟನೆಗಳು ನಮ್ಮ ಕಣ್ಣ ಮುಂದಿವೆ.

   ಇಂತಹವುಗಳನ್ನು ನೋಡಿ ನಮ್ಮ ಮನ ಕದಡುವುದಿಲ್ಲವೇ? ಇವರಿಗಾಗಿ ಏನಾದರೂ ಮಾಡೋಣ ಎನಿಸುವುದಿಲ್ಲವೇ? ಇಂತಹ ಭಾವನೆ ಮೂಡಿ ಹೋರಾಟವನ್ನು ಕಟ್ಟುವ ಸಂಕಲ್ಪ ತೊಡುವ ದಿನ ಇದಾಗಿದೆ” ಎಂದರು.ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಓ. ಜಿಲ್ಲಾ ಉಪಾಧ್ಯಕ್ಷೆ ನಾಗಜ್ಯೋತಿ, ಉಪಾಧ್ಯಕ್ಷ ಕಿರಣ್, ಜಂಟಿ ಕಾರ್ಯದರ್ಶಿ ಕಾವ್ಯ, ನಾಗಸ್ಮೀತ, ಪುಷ್ಪ, ಗುರು, ಹರಿಪ್ರಸಾದ್, ಭರತ್, ರೇಣುಕಾ, ಯತೀಂದ್ರ, ಸತೀಶ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link