ದಾವಣಗೆರೆ:
ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಹೇಳುವ, ಬರೆಯುವ ಪ್ರಯತ್ನ ಹೆಚ್ಚಾಗಬೇಕೆಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಆಶಿಸಿದರು.ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಬೆಂಗಳೂರಿನ ಬರಹ ಪಬ್ಲಿಷಿಂಗ್ ಹೌಸ್ ಹಾಗೂ ದಾವಣಗೆರೆ ನಗರವಾಣಿ ದಿನಪತ್ರಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಜ್ಯೋತಿ ಎನ್.ಉಪಾಧ್ಯಾಯ ಅವರ ವಿಜ್ಞಾನ ಲೇಖನಗಳ ‘ವಿಜ್ಞಾನ ವಿಸ್ಮಯಗಳು’ ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ವಿಜ್ಞಾನ ಸೇರಿದಂತೆ ಅನ್ಯ ಶಿಸ್ತಿಗೆ ಸಂಬಂಧಪಟ್ಟ ಶಬ್ದಗಳನ್ನು ಕನ್ನಡೀಕರಿಸುವ ಕೆಲಸ ಹೆಚ್ಚು, ಹೆಚ್ಚು ನಡೆಯಬೇಕೆಂದು ಹೇಳಿದರು.
ನಮ್ಮ ಜೀವನದ ಅವಿಭಾಜ್ಯ ಅಂಗವಾದ ವಿಜ್ಞಾನವನ್ನು ಕನ್ನಡದಂತಹ ಸರಳ ಭಾಷೆಯಲ್ಲಿ ಹೇಳುವುದು ಕಷ್ಟಸಾಧ್ಯ. ಆದರೆ, ಜ್ಯೋತಿ ಉಪಾಧ್ಯಾಯರಿಗೆ ಆ ಕೌಶಲ್ಯ ಸಿದ್ಧಿಸಿದೆ. ಕನ್ನಡವನ್ನು ಸಂಪತ್ಭರಿತಗೊಳಿಸುವಲ್ಲಿ ಜ್ಯೋತಿ ಅವರ ಕೊಡುಗೆಯು ಇದೆ. ಅವರು ಇನ್ನಷ್ಟು ಸಾಹಿತ್ಯ ಕೃಷಿ ನಡೆಸಲಿ ಎಂದು ಶುಭ ಹಾರೈಸಿದರು.
ಜೀವನದಲ್ಲಿ ಸಮತೋಲನ ಇರಬೇಕಾದರೆ ವಿಜ್ಞಾನ ಮತ್ತು ಕಲೆ ಎರಡೂ ಬೇಕಾಗಿದೆ. ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಬುದ್ಧಿ ಮತ್ತು ಜ್ಞಾನ, ವಿಜ್ಞಾನ ಮತ್ತು ಕಲೆ ಎರಡೂ ಅತ್ಯವಶ್ಯವಾಗಿದೆ. ವಿಜ್ಞಾನ ನಮ್ಮ ಮತಿಗೆ ಆವರಿಸಿರುವ ಮೌಢ್ಯವನ್ನು ಹೋಗಲಾಡಿಸುವ ದಿವ್ಯಾಔಷಧÀವಾಗಿದ್ದು, ವಿಜ್ಞಾನವು ಜನ-ಮನದ ಕಣ್ಣು ತೆರೆಸಲಿದೆ ಎಂದು ಹೇಳಿದರು.
ಇಂದು ಬದಲಾಗಿರುವ ವಿಜ್ಞಾನ-ತಂತ್ರಜ್ಞಾನದಿಂದ ಅಸ್ತಿತ್ವಕ್ಕೆ ಬಂದಿರುವ ಕುಲಾಂತರಿ ವಿಜ್ಞಾನವು ಬೀಜ ರಹಿತ ಹಣ್ಣು ನೀಡುವ ಮೂಲಕ ಹಣ್ಣಿನ ರುಚಿ ವೈವಿದ್ಯತೆಯನ್ನು ಕಸಿದುಕೊಂಡಿದೆ ಎಂದು ಬೇಸರಿಸಿದ ಅವರು, ನಮ್ಮ ದೇಶದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಕೂಲಿ ಮಾಡಲು ಸಜ್ಜಾಗಿ ನಿಂತಿರುವ ಸಂದರ್ಭದಲ್ಲಿ ಗುರುತು ಆಕರ್ಷಣೆಯೇ ಇಲ್ಲದ ಜಾಗಗಳ ಬಗ್ಗೆ ಸಂಶೋಧನೆ ನಡೆಸುವುದಾದರೂ ಯಾರು ಎಂದು ಪ್ರಶ್ನಿಸಿದರು.
ವಿಜ್ಞಾನದ ಹಿನ್ನೆಲೆಯಿಂದ ಅತಿ ರಂಜಕ ಕಥೆಗಳು ಸಹ ಹುಟ್ಟಿಕೊಳ್ಳಲಿವೆ. ನಮ್ಮ ಸುತ್ತ-ಮುತ್ತ ನಡೆಯುವ ವಿದ್ಯಾಮಾನಗಳ ಬಗೆಗಿನ ಕಾರ್ಯ ಮತ್ತು ಕಾರಣದ ನಡುವೆ ಇರುವ ಸಂಬಂಧವನ್ನು ಶೋಧಿಸಬೇಕಾಗಿದೆ. ವಿಜ್ಞಾನವನ್ನು ಕಲಾತ್ಮಕವಾಗಿಯೂ ನಿರೂಪಿಸಬಹುದಾಗಿದೆ. ವಿಜ್ಞಾನ ಅನುಭವನ್ನು ಉಂಟು ಮಾಡುವುದರ ಜೊತೆಗೆ ಸೃಜನಶೀಲ ಸಾಹಿತ್ಯ ಸೃಷ್ಟಿಗೂ ಪ್ರೇರಣೆ ನೀಡಲಿದೆ ಎಂದರು.
ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ, ಕಾವ್ಯ ಮೊದಲು ಆನಂದ ನೀಡಿ ಆ ನಂತರದಲ್ಲಿ ಆಲೋಚನೆಗೆ ಹಚ್ಚುತ್ತದೆ. ಆದರೆ, ವಿಜ್ಞಾನ ಮೊದಲು ಆಲೋಚನೆಗೆ ಹಚ್ಚಿ ಬಳಿಕ ಆನಂದ ಕೊಡುತ್ತದೆ. ವಿಜ್ಞಾನವನ್ನು ಕನ್ನಡದಲ್ಲಿ ಬರೆದರೆ, ಕನ್ನಡಿಗರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಹೇಳಿದರು.
ವಿಜ್ಞಾನ ಸರಿಯಾದ ಹಾದಿಯಲ್ಲಿ ಸಾಗದಿದ್ದರೆ, ಸಾಕಷ್ಟು ಅನಾಹುತ ಸಂಭವಿಸಲಿದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದ ಅವರು, ವಿಜ್ಞಾನಗಳಿಂದ ಆಗಿದ್ದ ಅನುಕೂಲಗಳು, ಈಗ ಅನಾನುಕೂಲವಾಗಿ ಮಾರ್ಪಟ್ಟಿವೆ ಎಂದು ವಿಷಾಧಿಸಿದರು.ವಿಜ್ಞಾನವನ್ನು ಮಾತೃಭಾಷೆಯಲ್ಲಿ ಬರೆದರೆ, ಹೆಚ್ಚಿನ ಸಾಧನೆ ಮಾಡಲು ಅನುಕೂಲಕರವಾಗಲಿದೆ. ಈ ನಿಟ್ಟಿನಿಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತು ಪದಾಧಿಕಾರಿಗಳು ಪ್ರಯತ್ನಶೀಲರಾಗಬೇಕೆಂದು ಕಿವಿಮಾತು ಹೇಳಿದರು.
ದಾವಣಗೆರೆ ನಗರವಾಣಿ ಉಪ ಸಂಪಾದಕ ಬಿ.ಎನ್.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಕತೃ ಜ್ಯೋತಿ ಎನ್.ಉಪಾಧ್ಯಾಯ, ಪತಿ ನಾರಾಯಣ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು. ವಾರಿಜಾ ಉಡಪ ಪ್ರಾರ್ಥಿಸಿದರು. ದೇವಿಕಾ ಸುನೀಲ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ