ಸಿಗದ ಪರಿಹಾರ : ಕಛೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ತುಮಕೂರು
   ಕುಣಿಗಲ್ ತಾಲ್ಲೂಕಿನಲ್ಲಿ ಹೇಮಾವತಿ ಚಾನಲ್ ಮಾಡುವ ನಿಟ್ಟಿನಲ್ಲಿ ಏಕಾಏಕಿ ರೈತರ ಜಮೀನಿಗೆ ಪ್ರವೇಶ ಮಾಡಿ ಯಾವುದೇ ನೋಟೀಸ್ ನೀಡದೆ , ಪರಿಹಾರ ನೀಡದೇ ಮನಸೋ ಇಚ್ಚೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಹೇಮಾವತಿ ಇಲಾಖಾ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದದ ಪಟೇಲ್ ಆರೋಪಿಸಿದರು.
     ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ಕಚೇರಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಬೇಜವಬ್ಧಾರಿ ಹೇಳಿಕೆಗಳಿಗೆ ಆಕ್ರೋಶಗೊಂಡ ರೈತರು ಕಚೇರಿಗೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕುಣಿಗಲ್ ಮೂಲಕ ಹುಲಿಯೂರುದುರ್ಗದ ವರೆಗೆ ಕುಡಿಯುವ ನೀರಿನ ಯೋಜನೆಗಾಗಿ ಮಾಡುತ್ತಿರುವ ಚಾನಲ್‍ಗಾಗಿ ರೈತರ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ಅದಕ್ಕೆ ಪರಿಹಾವೂ ನೀಡಿಲ್ಲ. ಕೇಳಲು ಕಚೇರಿಗೆ ಬಂದರೆ ಸರಿಯಾದ ಉತ್ತರವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.
       ಕಳೆದ 7 ವರ್ಷಗಳಿಂದ ಕಾಮಾಗಾರಿ ನೆಪದಲ್ಲಿ ರೈತರ ಜಮೀನುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯಾವುದೇ ಭೂಸ್ವಾಧೀನಾಧಿಕಾರಿಗಳು ಪತ್ರ ವ್ಯವಹಾರ ಮಾಡದೇ ಕೇವಲ ಮಾತುಕತೆಗಳಲ್ಲಿ ಮಾತನಾಡಿ, ರೈತರನ್ನು ಬೆದರಿಸಿ ಜಮೀನನ್ನು ವಶ ಪಡಿಸಿಕೊಂಡಿದ್ದಾರೆ. ಅಂದು ಯಾವುದೇ ರೀತಿಯ ಸರ್ವೇ ಮಾಡಿಲ್ಲ. ಜಮೀನಿನಲ್ಲಿ ಎಷ್ಟು ತೆಂಗಿನ ಮರಗಳು ಇದ್ದವು, ಇತರ ಜಾತಿಯ ಮರಗಳು ಎಷ್ಟು ಇದ್ದವು ಎಂಬುದನ್ನು ಕೂಡ ಸರಿಯಾಗಿ ಸರ್ವೇ ಮಾಡದೇ ಕಾಮಗಾರಿ ಮಾಡಿಸಿದ್ದಾರೆ. ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ನೀಡಲು ಸರ್ಕಾರದಲ್ಲಿ ಹಣ ಇರುತ್ತದೆ. ಆದರೆ ರೈತರಿಗೆ ಪರಿಹಾರ ನೀಡಲು ಮಾತ್ರ ಹಣ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
       ಈಗಾಗಲೇ ಜಮೀನು ಕಳೆದುಕೊಂಡ ರೈತರು ಬೆಂಗಳೂರಿನತ್ತ ತೆರಳಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಹೇಮಾವತಿ ಇಲಾಖೆಯ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಈ ವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ. 1200 ವರೆಗೆ 28ಎ ಪ್ರಕರಣಗಳು ವಿಚಾರಣೆಯಾಗದೇ ಹಾಗೇ ಉಳಿದಿದೆ. ಈ ಬಗ್ಗೆ ಭೂಸ್ವಾಧೀನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
      ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ತುಮಕೂರು, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ರೈತರು ಸರಿಯಾದ ಪರಿಹಾರ ಸಿಗದೆ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಕೆಲಸ ಮಾಡುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಾರೆ ಆದರೆ ರೈತರಿಗೆ ಪರಿಹಾರ ನೀಡುವಲ್ಲಿವ ವಿಳಂಭ ಧೋರಣೆ ತೋರಿಸುತ್ತಾರೆ. 10 ವರ್ಷದ ಹಿಂದೆ ಸರ್ವೇ ಮಾಡುವಾಗ ಮನೆಗಳನ್ನು ಬಿಟ್ಟಿದ್ದಾರೆ. ಕೆಲವೊಂದು ಮರಗಳನ್ನು ಬಿಟ್ಟಿದ್ದಾರೆ. ಅವರಿಗೆ ಕಂಡ ಕಂಡಲ್ಲಿ ಸರ್ವೇ ಮಾಡಿ ಅನೇಕ ರೈತರ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ. ಇದನ್ನು ಸರಿಪಡಿಸದೇ ಹೋದರೆ ಉಗ್ರವಾದ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.ಪ್ರತಿಭಟನೆ ವೇಳೆ ಮತ್ತಿಕಟ್ಟೆ ರಾಮಣ್ಣ, ಮಾಸ್ತಿಗೌಡ, ನರಸಿಂಹ, ರಾಮಣ್ಣ, ರಾಜು ವೆಂಕಟೇಶ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link