ಬೆಂಗಳೂರು
ಮನೆಗಳವು ವಾಹನಕಳವು ದರೋಡೆ ಇನ್ನಿತರ ಅಪರಾಧಗಳ ನಿಯಂತ್ರಣಕ್ಕೆ ನಗರದ ನಾಗರೀಕರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮನವಿ ಮಾಡಿದ್ದಾರೆ.
ಮನೆಯ ಮುಂಭಾಗದ ಬಾಗಿಲಿಗೆ ಸೇಪ್ಟಿ ಲಾಕರ್, ಅಲಾರಾಂ, ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಸೇರಿದಂತೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡರೆ, ಕಳ್ಳತನ, ಇನ್ನಿತರ ಅಪರಾಧ ಕೃತ್ಯಗಳನ್ನು ತಡೆಯಬಹುದಾಗಿದ್ದು ನಾಗರೀಕರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು
ನಗರದ ನಿಮ್ಹಾನ್ಸ್‌ನ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಕ್ಷಿಣ ವಿಭಾಗದ ಪೊಲೀಸರ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನೆಯ ಬಾಗಿಲು ಹಾಕಿಕೊಂಡು ಹೋಗುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಳ್ಳತನ, ಇನ್ನಿತರ ಅಪರಾಧ ಕೃತ್ಯಗಳು ನಡೆದ ನಂತರ, ಆರೋಪಿಗಳನ್ನು ಪತ್ತೆಹಚ್ಚುವುದಕ್ಕಿಂತ ಅಪರಾಧಗಳನ್ನು ತಡೆಯುವುದು ಅತಿಮುಖ್ಯ.ಇದನ್ನು ನಾಗರೀಕರು ಅರಿತುಕೊಳ್ಳಬೇಕು ಎಂದು ಹೇಳಿದರು.ನಾಗರೀಕರು ಎಚ್ಚರವಾಗಿದ್ದರೆ, ತಂತ್ರಜ್ಞಾನ ಬಳಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ, ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ. ಅದರಿಂದ ಪೊಲೀಸ್ ಇಲಾಖೆಗೂ ಸಹಕಾರಿಯಾಗುತ್ತದೆ. ಸಣ್ಣಪುಟ್ಟ ಘಟನೆಗಳು ನಡೆದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ, ಐದು ನಿಮಿಷಗಳ ಒಳಗೆ ಹೊಯ್ಸಳ ವಾಹನಗಳು ಸ್ಥಳಕ್ಕೆ ಬರಲಿವೆ ಎಂದರು.
ನಗರದಲ್ಲಿರುವ ೨೮೦ ಹೊಯ್ಸಳ ವಾಹನಗಳು, ನಾಗರೀಕರಿಗೆ ಉತ್ತಮ ಸೌಲಭ್ಯ ಒದಗಿಸುತ್ತಿವೆ. ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುವ ಪ್ರಸ್ತಾವನೆ ಇದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ರೋಹಿಣಿ ಕಟೋಚ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ