ಬೆಂಗಳೂರು
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿಯಲ್ಲಿದ್ದ ಒಳಬೇಗುದಿ ಇದೀಗ ಸ್ಪೋಟಗೊಂಡಿದ್ದು ಸಿಎಂ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲು ಹೋಗಿ ರಾಜ್ಯವನ್ನು ನಿರ್ಲಕ್ಷಿಸುತ್ತಿರುವ ಈ ಧೋರಣೆಯ ವಿರುದ್ಧ ಜನರೇ ತಿರುಗಿ ಬಿದ್ದು ಅಧಿಕಾರದಿಂದ ಪದಚ್ಯುತಗೊಳಿಸುತ್ತಾರೆ ಎಂದು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ನೇರವಾಗಿ ಗುಡುಗಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್,ಸಿಎಂ ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರಮೋದಿ ಟಾರ್ಗೆಟ್ ಮಾಡುತ್ತಿದ್ದಾರೆ.ಹೀಗಾಗಿ ರಾಜ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕೆಂಡಕಾರಿದರು.
ಬಿಹಾರದ ನೆರೆ ಸಂತ್ರಸ್ತರ ವಿಷಯ ಬಂದಾಗ ಪ್ರಧಾನಿ ಮೋದಿ ತಕ್ಷಣವೇ ಟ್ವಿಟ್ ಮಾಡುತ್ತಾರೆ.ಆದರೆ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ ಎಂದು ಕೆಂಡಕಾರಿದರು.ಇವರಿಗೆ ಬಿಹಾರದ ಜನರ ಬಗ್ಗೆ ಕಕ್ಕುಲತೆ ಇದೆ.ಆದರೆ ನಮ್ಮ ಜನ ಏನು ಮಾಡಿದ್ದಾರೆ?ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಇಪ್ಪತ್ತೈದು ಸಂಸದರನ್ನು ಗೆಲ್ಲಿಸಿ ಕಳಿಸಿದ್ದಾರಲ್ಲ?ಅವರೇನು ಪಾಪ ಮಾಡಿದ್ದಾರೆ?ಇವತ್ತು ಹೋದಲ್ಲಿ,ಬಂದಲ್ಲಿ ನಮ್ಮನ್ನು ಪ್ರಶ್ನಿಸುತ್ತಿದ್ದಾರಲ್ಲ?ಅವರಿಗೆ ನಾವೇನು ಉತ್ತರ ಕೊಡಬೇಕು?ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಎಂತೆಂತವರನ್ನೋ ಜನ ಮನೆಗೆ ಕಳಿಸಿದ್ದಾರೆ.ಅಂತದ್ರಲ್ಲಿ ಇವರ್ಯಾವ ಲೆಕ್ಕ?ರಾಜ್ಯದ ಬಗ್ಗೆ ಇವರು ಇದೇ ನಿರ್ಲಕ್ಷ್ಯದ ಧೋರಣೆ ಮುಂದುವರಿಸಿದರೆ ಜನರೇ ಇವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ.ಪಾಠ ಕಲಿಸುತ್ತಾರೆ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಎಲ್ಲಿದೆ?ಕರ್ನಾಟಕದಲ್ಲಿ ಮಾತ್ರ ಇದೆ.
ಇಪ್ಪತ್ತೈದು ಸಂಸದರನ್ನು ಈ ರಾಜ್ಯ ಗೆಲ್ಲಿಸಿ ಕಳಿಸಿದೆ.ಹೀಗಿರುವಾಗ ರಾಜ್ಯದ ಸಂಕಟದ ಬಗ್ಗೆ ನಮ್ಮ ಸಂಸದರು ನೇರವಾಗಿ ಪ್ರಧಾನಿಗೆ ಹೇಳಬೇಕು.ಇವರಿಗೆ ಹೇಳಲು ಸಾಧ್ಯವಿಲ್ಲದಿದ್ದರೆ ನಮ್ಮನ್ನೆಲ್ಲ ಒಂದು ನಿಯೋಗದಲ್ಲಿ ಕರೆದುಕೊಂಡು ಹೋಗಲಿ.ನಾವು ಕೇಳುತ್ತೇವೆ.ಇವತ್ತು ಹೋದಲ್ಲಿ,ಬಂದಲ್ಲಿ ಜನ ನಮ್ಮನ್ನು ನಿಲ್ಲಿಸಿ ಕೇಳುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಸಂಸದರು ಸುಮ್ಮನಿರುವುದು ಎಂದರೇನು?ಅಂತ ಪ್ರಶ್ನಿಸಿದರು.
ಇಂತಹ ನಿರ್ಲಕ್ಷ್ಯವನ್ನು ಸಹಿಸಿಕೊಂಡು ಸಂಸದರು ಸುಮ್ಮನಿರಬಾರದು.ನೇರವಾಗಿ ಪ್ರಶ್ನಿಸಬೇಕು.ಇವರನ್ನು ನಮ್ಮ ಪ್ರತಿನಿಧಿಗಳು ಎಂದು ಜನರು ಆರಿಸಿಕಳಿಸಿರುತ್ತಾರೆ ಎಂದು ಕುಟುಕಿದರು.ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಿಗೆ ನೆರವು ಬೇಕಿಲ್ಲ.ನಾವೇ ಅದನ್ನು ಹೊಂದಿಸಿಕೊಳ್ಳುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಇಂಗ್ಲೀಷ್ ಮಾತನಾಡಿದ ಮಾತ್ರಕ್ಕೆ ಅವರು ಅಂತರಾಷ್ಟ್ರೀಯ ನಾಯಕರಾಗಿ ಬಿಡುವುದಿಲ್ಲ.ಅಥವಾ ಜನರ ಸಮಸ್ಯೆ ಪರಿಹಾರವಾಗಿ ಬಿಡುವುದಿಲ್ಲ ಎಂದರು.
ಹಿರಿಯ ನಾಯಕ,ಸಚಿವ ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆಯೂ ಪರೋಕ್ಷವಾಗಿ ಕೆಂಡಕಾರಿದ ಅವರು,ಪಕ್ಷವನ್ನು ಎಸಿ ರೂಮಿನಲ್ಲಿ ಕುಳಿತು ಕಟ್ಟಲು ಸಾಧ್ಯವಿಲ್ಲ.ಸಚಿವರಾಗಿರುವವರೇ ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.ಬೇಕಿದ್ದರೆ ಇವರು ಮಂತ್ರಿಗಿರಿಗೆ ರಾಜೀನಾಮೆ ಕೊಡಲಿ.ಮಂತ್ರಿಗಳಾಗಿ ಕೆಲಸ ಮಾಡಲು ಹಲವರು ತಯಾರಿದ್ದಾರೆ.ಮಂತ್ರಿಗಳಾದ ಮೇಲೆಯೂ ಮಾತನಾಡುವುದು ಸರಿಯಲ್ಲ ಎಂದವರು ಗುಡುಗಿದರು.
ಗೂಟದ ಕಾರು ಇಟ್ಕೊಂಡು ತಿರುಗಾಡುವವರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ ಎಂದರೆ ಏನರ್ಥ?ಪಕ್ಷ ಕಟ್ಟಿದವರು ಬೇಕಾದಷ್ಟು ಜನ ಇದ್ದಾರೆ.ಇವರಿಗೆ ಅಸಮಾಧಾನವಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ.ಅರ್ಹರು ಆ ಜಾಗಕ್ಕೆ ಬಂದು ಕೂತು ಕೆಲಸ ಮಾಡುತ್ತಾರೆ ಎಂದರು.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಮಾಡಬೇಕು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವರು ಹೊಸ ಜಿಲ್ಲೆಯಾಗಬಾರದು ಎನ್ನುತ್ತಾರೆ.ಕೆಲವರು ಹೊಸ ಜಿಲ್ಲೆಯಾಗಬೇಕು ಎಂದು ಹೇಳುತ್ತಾರೆ.ಹೀಗಾಗಿ ಆ ಕುರಿತು ನಾನೇನೂ ಮಾತನಾಡುವುದಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಸಂಬಂಧ ನಾಳೆ ಸಭೆ ಕರೆದಿದ್ದಾರೆ.ಅಲ್ಲಿ ಏನು ತೀರ್ಮಾನವಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದ ಅವರು,ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾದ ಜನರ ಬಗ್ಗೆ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ವಾಗ್ಧಾಳಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ