ತುಮಕೂರು
ರಾಜ್ಯದಲ್ಲಿ ಸಂಭವಿಸಿದ ಮಳೆ ಹಾನಿ ಸಂತ್ರಸ್ಥರಿಗೆ ಜಾತಿ ಮತದ ಬೇಧವಿಲ್ಲದೆ ಜಿಲ್ಲೆಯ ಜನತೆ ಉತ್ಸಾಹದಿಂದ ಸ್ಪಂದಿಸಿ ನಾಲ್ಕು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿರುವುದಕ್ಕೆ ರೆಡ್ಕ್ರಾಸ್ ಕೃತಜ್ಞತೆ ಸಲ್ಲಿಸುತ್ತದೆ ಎಂದು ರಾಜ್ಯ ರೆಡ್ಕ್ರಾಸ್ ಸಭಾಪತಿ ಎಸ್.ನಾಗಣ್ಣ ತಿಳಿಸಿದರು.
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಓದು, ಬರಹ ವಸ್ತುಗಳನ್ನು ಪ್ರತ್ಯೇಕವಾಗಿ ಚೀಲಗಳಲ್ಲಿ ತುಂಬಿ ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಇತರೆ ನೆರೆ ಸಂತ್ರಸ್ಥರಿಗೆ ನೀಡಲಾಯಿತು. ಬೆಳಗಾಂ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ವಿತರಿಸಲಾಯಿತು ಎಂದರು.
ಇಡೀ ದೇಶದಲ್ಲಿಯೇ ತುಮಕೂರು ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಅತಿ ಹೆಚ್ಚು ಚಿರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿರುವಂತಹ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ಅನೇಕ ದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ಸಹಾಯ ಹಸ್ತ ನೀಡಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ಡಾ.ಟಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಸೇವೆಯನ್ನು ಶ್ಲಾಘಿಸಿದರು.
ಜಿ.ಪಂ. ಸಿಇಓ ಹಾಗೂ ರೆಡ್ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾದ ಶುಭಾ ಕಲ್ಯಾಣ್ ಮಾತನಾಡಿ ಎಲ್ಲಾ ರೀತಿಯ ವಿಶೇಷ ಚೇತನರು ಸರ್ಕಾರದ ಮತ್ತು ಇತರೆ ಸಂಸ್ಥೆಗಳ ಸಹಕಾರ ಪಡೆದು ಸಮಾಜದಲ್ಲಿ ಎಲ್ಲರಂತೆ ಸರಿ ಸಮಾನರಾಗಿ ಬಾಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ ಅವರು, ನಗರದ ಹೊರವಲಯದಲ್ಲಿರುವ ಇದೇ ಸಂಸ್ಥೆ ವಾಕ್, ಶ್ರವಣದೋಷ ಶಾಲೆಯಲ್ಲಿ ನಡೆದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತಿ ವತಿಯಿಂದ ಈ ಶಾಲೆಗೆ ಒಂದು ಕೊಳವೆ ಬಾವಿಯನ್ನು ಕೊರೆಸಿ ಕೊಡುವ ಭರವಸೆ ನೀಡಿದರು.
ಪ್ರೊ.ಶ್ರೀದೇವಿ ಪಟ್ಟೆದಾರ್ ಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆಯ ಚೆಕ್ ನೀಡಿದ್ದು ಮತ್ತು ಆನಂದ್ ರಾವ್ ಅವರು ಶಾಲೆಯ ಉಪಯೋಗಕ್ಕೆ 3 ಡಸ್ಟ್ಬಿನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವುಗಳನ್ನು ಶಾಲೆಯ ಮುಖ್ಯಸ್ಥರಾದ ಪ್ರೊ.ಚಂದ್ರಣ್ಣ ಮತ್ತು ಮುಖ್ಯೋಪಾಧ್ಯಾಯರಾದ ಲಕ್ಷ್ಮೀಕಾಂತ್ ಅವರಿಗೆ ಹಸ್ತಾಂತರಿಸಲಾಯಿತು.
ಸಮಾಜ ಸೇವಕ ಪಾರಸ್ಮಲ್ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಂಡು 75 ಸಾವಿರ ರೂ.ಗಳ ದೇಣಿಗೆಯನ್ನು ಶಾಲೆಗೆ ನೀಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಹೆಚ್.ಜಿ. ಚಂದ್ರಶೇಖರ್ ಜಿಲ್ಲಾ ಅಂಗವಿಕಲರ ಪುನರ್ ವಸತಿ ಕೇಂದ್ರವು ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿ ಮತ್ತು ಭವಿಷ್ಯದಲ್ಲಿ ಅಂಗವಿಕಲರಿಗೆ ಸಮಸ್ಯೆಯಿಂದ ವಿಶೇಷವಾದ ಸೌಲಭ್ಯ ಒದಗಿಸಲು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ವಕೀಲ ಮಲ್ಲಿಕಾರ್ಜುನಯ್ಯ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸುಭಾಷಿಣಿ ರವೀಶ್ ಪ್ರಾರ್ಥಿಸಿದರೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ನಾಗಣ್ಣ ಸ್ವಾಗತಿಸಿದರು. ಸಾಗರನಹಳ್ಳಿ ಪ್ರಭು ಸರ್ವಸದಸ್ಯರ ಸಭೆಯ ಸೂಚನಾ ಪತ್ರ ಓದಿದರು. ಪ್ರೊ.ಕೆ.ಚಂದ್ರಣ್ಣ ಹಿಂದಿನ ಸಾಲಿನ ಸರ್ವಸದಸ್ಯರ ಸಭೆಯ ನಡವಳಿಕೆಗಳನ್ನು ಮಂಡಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಚಂದ್ರಿಕಾ ಶಾಲಾ ವರದಿ ಓದಿದರು. ಜಿ.ವಿ. ವಾಸುದೇವ್ ಆಯವ್ಯಯ ಮಂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ