ಚಿತ್ರದುರ್ಗ
ಬ್ಯಾಂಕ್‍ನಿಂದ ಸಾಲ ಪಡೆದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು, ಸಾರ್ವಜನಿಕರು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಈ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಹೇಳಿದರು.
ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕ್‍ಗಳ ಸಹಯೋಗದೊಂದಿಗೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಹಕ ಸಂಪರ್ಕ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಎಲ್ಲಾ ಬ್ಯಾಂಕ್‍ಗಳು ಒಟ್ಟಾಗಿ ಸೇರಿ ಕೇಂದ್ರ ಸರ್ಕಾರದ ಗ್ರಾಹಕರ ಔಟ್ ರೀಚ್ ಇನ್ಸಿಯೇಟೀವ್ ಕಾರ್ಯಕ್ರಮದೊಂದಿಗೆ ಗ್ರಾಹಕರಿಗೆ ಬ್ಯಾಂಕ್‍ಗಳ ಸೌಲಬ್ಯಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು
ಬ್ಯಾಂಕ್‍ಗಳ ನಿಯಮಕ್ಕೆ ಅನುಗುಣವಾಗಿ ಸಾಲ ಪಡೆದು, ಬಂದ ಹಣದಿಂದ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು, ಆರ್ಥಿಕ ಸಬಲರಾಗಬೇಕು. ಸ್ವಸಹಾಯ ಗುಂಪುಗಳಂತಹ ಸಂಘಗಳನ್ನು ಕಟ್ಟಿಕೊಂಡು, ಬ್ಯಾಂಕ್‍ಗಳಲ್ಲಿ ಸಾಲ ಪಡೆದು, ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾಗಬೇಕು ಎಂದರು
ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗುವವರ ಸಂಖ್ಯೆ ಕಡಿಮೆಯಿದ್ದು, ದೊಡ್ಡ ಕೈಗಾರಿಕೆಗಳಿಲ್ಲದೇ ನಿರುದ್ಯೋಗ ಸಮಸ್ಯೆಯೂ ಇದೆ. ಉದ್ಯೋಗವನ್ನರಸಿ ಬೇರೆಡೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯವಹಾರಿಕ ಕೌಶಲ್ಯಾಭಿವೃದ್ಧಿಗಾಗಿ ಜಿಲ್ಲೆಯಲ್ಲಿ ತರಬೇತಿ ಕೇಂದ್ರಗಳನ್ನು ಹೆಚ್ಚಿಸಿ ತರಬೇತಿ ನೀಡಿ, ಉದ್ಯಮಿಗಳಾಗುವಂತೆ ಮಾಡಲಾಗುವುದು. ಈ ಎಲ್ಲಾ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು
ಬ್ಯಾಂಕ್‍ನಿಂದ ಪಡೆದ ಸಾಲಕ್ಕೆ ಗ್ರಾಹಕರು ನಿಯಮಾನುಸಾರ ಬದ್ಧತೆಯಿಂದ ನಿಗದಿತ ಸಮಯದೊಳಗೆ ಹಿಂದುರುಗಿಸಿ, ನಿರಂತರವಾಗಿ ಬ್ಯಾಂಕ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಈ ಮೇಳಕ್ಕೆ ಜಿಲ್ಲೆಯನ್ನು ಆಯ್ಕೆ ಮಾಡಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಗೆ ಅಭಿವೃದ್ಧಿ ದೃಷ್ಠಿಯಿಂದ ಪುಷ್ಠಿ ನೀಡಿದಂತಾಗಿದೆ. ಸಾರ್ವಜನಿಕರು ಅಗತ್ಯ ಮಾಹಿತಿ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾಧಿಕಾರಿ ಆರ್ ವಿನೋತ್ ಪ್ರಿಯಾ ಹೇಳಿದರು.
ಕೆನರಾ ಬ್ಯಾಂಕ್ ಬೆಂಗಳೂರಿನ ಮಹಾ ಪ್ರಬಂಧಕ ಎನ್. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್‍ಗಳಲ್ಲಿ ಹಲವು ಬಗೆಯ ಯೋಜನೆಗಳಿದ್ದು, ಸಾರ್ವಜನಿಕರು ಅವುಗಳ ಮಾಹಿತಿ ಪಡೆದು, ಅಗತ್ಯಕ್ಕನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬೇಕು ಎಂದರು
ಕೆನರಾ ಬ್ಯಾಂಕಿನಿಂದ ಬೆಂಗಳೂರು ವಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳಿಗೆ 2 ಸಾವಿರ ರೂ. ಕೋಟಿ ಸಾಲ ನೀಡಲಾಗಿದೆ. ಕೆಲವು ಯೋಜನೆಯಗಳಲ್ಲಿ ಸಬ್ಸಿಡಿ ಮೂಲಕ ನೀಡಲಾಗುವ ಹಣದಲ್ಲಿ ಕೇವಲ ಸಬ್ಸಿಡಿಯನ್ನಷ್ಟೇ ಗ್ರಾಹಕರಿಗೆ ನೀಡಿ, ಸಾಲದ ಮೊತ್ತವನ್ನು ಬ್ಯಾಂಕ್‍ಗಳು ನೀಡದೇ ವಂಚಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ 4 ಜನ ಬ್ಯಾಂಕ್ ನೌಕರರನ್ನು ಅಮಾನತುಗೊಳಿಸಲಾಗಿದೆ ಎಂದರು
ಜಗತ್ತಿನ ಸಣ್ಣ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆ. ಆದರೆ ನಮ್ಮ ದೇಶ ಅಭಿವೃದ್ಧಿಶೀಲವಾಗಿಯೇ ಉಳಿದಿದೆ. ದೇಶದ ಅಭಿವೃದ್ದಿ ಉದ್ಯಮಶೀಲರ ಕೈಯಲ್ಲಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಗಳು ಸ್ಥಾಪಿಸಿ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ದೇಶವನ್ನು ಅಭಿವೃದ್ಧಿ ಪಡಿಸಬೇಕು. ಮುದ್ರಾ ಸಾಲ ಯೋಜನೆಯ ಕಾರ್ಯ 7 ದಿನಗಳಲ್ಲಿ, ವಿದ್ಯಾಭ್ಯಾಸ, ವಾಹನ, ಮನೆ ಸಾಲಗಳು 3 ದಿನಗಳಲ್ಲಿ ಹಾಗೂ ರೈತರ ಸಾಲವನ್ನು ಶೀಘ್ರಗತಿಯಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು. ಕೆನರಾ ಬ್ಯಾಂಕಿನ ದಾವಣಗೆರೆ ಸಹಾಯಕ ಮಹಾಪ್ರಬಂಧಕ ಹೆಚ್. ರಘುರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ರಾಜೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಘನಶ್ಯಾಂ ಆಳ್ವಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಹಾಯಕ ಮಹಾ ಪ್ರಬಂಧಕ ಎ.ಎಸ್. ನಾಯಕ್ ಸೇರಿದಂತೆ ಜಿಲ್ಲೆಯ ಇತರೆ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ