“ ಶ್ರೀ ” ಚಿತ್ರಕ್ಕೆ ವಿದ್ಯುಕ್ತ ಚಾಲನೆ!!

ತುಮಕೂರು:

    ಕೆಲ ತಿಂಗಳ ಹಿಂದಷ್ಟೆ ಅಮ್ಮನ ಮನೆ, ತ್ರಯಂಬಕಂ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ರಾಘವೇಂದ್ರ ರಾಜ್‍ಕುಮಾರ್ ಈಗ ಮತ್ತೊಂದು ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ರಾಘಣ್ಣ ಅಭಿನಯಿಸುತ್ತಿರುವ ಹೊಸ “ಶ್ರೀ” ಎಂಬ ಹೆಸರಿನ ಚಿತ್ರವು ಆರ್ ಸ್ವಾಧೀನ್ ಕುಮಾರ್ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಗುರುವಾರ ಬೆಂಗಳೂರಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹೂರ್ತ ಸಮಾರಂಭವನ್ನು ನಡೆಸಿತು.

     ತಸ್ಮೈ ಶ್ರೀ ಗುರುವೆ ನಮಃ ಎನ್ನುವ ಉಪ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಶಿಕ್ಷಣ, ಗುರುಕುಲ, ಜೀವನದ ಮೌಲ್ಯಗಳನ್ನು ಒಳಗೊಂಡಿದೆ.ಕಿರಿತೆರೆಯ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದ್ರು ಗೌಡ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ನಾಯಕನ ತಂದೆಯಾಗಿ ಅಭಿನಯಿಸುತ್ತಿದ್ದಾರೆ.

   ಚಿತ್ರದಲ್ಲಿ ನವನಟಿ ಅನೂಪಾ ಸತೀಶ್ ನಾಯಕಿಯಾಗಿದ್ದು, ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಶೋಭರಾಜ್, ತುಮಕೂರಿನ ಟಿ.ಆರ್ ಸಂಜು, ಮಾಸ್ಟರ್ ನೀಲ್ ಮೊದಲಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಕೆಲಕಾಲ ವಾಹಿನಿಗಳಲ್ಲಿ ನಿರೂಪಕಿಯಾಗಿ ಪರ್ತಕರ್ತೆಯಾಗಿ ಕೆಲಸ ಮಾಡಿದ ಅನುಭವವಿರುವ ಅದಿತಿ ಮಹದೇವ್ ಈ ಚಿತ್ರದ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಚಿತ್ರದ ಕಥಾ ಹಂದರದ ಬಗ್ಗೆ ಮಾತನಾಡುವ ಅದಿತಿ, ಇದೊಂದು ಸಾಮಾಜಿಕ ಮೌಲ್ಯಗಳನ್ನು ಹೇಳುವ ಚಿತ್ರವಾಗಿದೆ. ತುಂಟ ಹುಡುಗನೊಬ್ಬನಿಗೆ ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಸಿಕ್ಕರೆ ಆತ ಹೇಗೆ ಬೆಳೆದು ಸಮಾಜಕ್ಕೆ ಮಾದರಿಯಾಗುತ್ತಾನೆ. ಗುರುವಿನ ಮಹತ್ವವೇನು ಅನ್ನುವುದೇ ಚಿತ್ರ ಕಥೆಯ ಸಾರ.

    ಚಿತ್ರದ ಕತೆಯನ್ನು ಸಿದ್ದಪಡಿಸುವ ವೇಳೆಯಲ್ಲಿ ಹಲವು ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿಕೊಟ್ಟು ಅಲ್ಲಿ ಮಕ್ಕಳ ಜೊತೆ ಸಮಯ ಕಳೆದು, ಗುರುಗಳ ಜತೆಗಿನ ಒಡನಾಟವನ್ನು ತಿಳಿದು ಈ ಚಿತ್ರವನ್ನು ಮಾಡುತ್ತಿದ್ದೇನೆ. ಶ್ರೀ ಶಿವಕುಮಾರ ಸ್ವಾಮೀಜಿಯವರು ಬದುಕಿದ್ದಾಗಲೇ ಮಠದಲ್ಲಿ ವಿದ್ಯಾರ್ಥಿಗಳು ಮತ್ತು ಶಿಷ್ಯರೊಂದಿಗೆ ಅವರ ಓಡಾಟದ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಚಿತ್ರದ ಉಳಿದ ಭಾಗದ ಚಿತ್ರೀಕರಣವನ್ನು ಮೂರು ಹಂತದಲ್ಲಿ ತುಮಕೂರು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುವ ಯೋಚನೆಯಿದೆ ಎಂದು ವಿವರಿಸಿದರು.

    ಆರ್. ಸ್ವಾಧೀನ್ ಕುಮಾರ್ ಚಿತ್ರ ವಿತರಕರಾಗಿದ್ದು, ಶ್ರೀ ಚಿತ್ರವು ಅವರು ನಿರ್ಮಿಸುತ್ತಿರುವ ಮೊದಲ ಚಿತ್ರವಾಗಿದೆ. ಚಿತ್ರಕ್ಕೆ ಕಮರೊಟ್ಟು ಚಕ್‍ಪೋಸ್ಟ್ ಚಿತ್ರದ ನಿರ್ದೇಶಕ ಎ ಪರಮೇಶ್ ಚಿತ್ರ ಕಥೆ ಮತ್ತು ಕ್ಯಾಮೆರಾ ವರ್ಕಿಂಗ್ ಅನ್ನು ನಿಭಾಯಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಎ.ಪಿ ಅರ್ಜುನ್, ಭರ್ಜರಿ ಚೇತನ್, ಪ್ರಜಾ ಪ್ರಗತಿ ಸಹ ಸಂಪಾದಕ ಟಿ,ಎನ್ ಮಧುಕರ್, ಮುರುಳೀಧರ್ ಹಾಲಪ್ಪ, ಗಾಯತ್ರಿ ಚಿತ್ರ ಮಂದಿರ ಮಾಲೀಕ ರುದ್ರಪ್ಪ ಮುಂತಾದವರು ಶುಭ ಹಾರೈಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ