ರಾಜ್ಯದ ಕೆಲವು ಭಾಗಗಳಿಗೆ ನೆರೆ ಅಪ್ಪಳಿಸಿ ಸರಿಸುಮಾರು 60 ದಿನಗಳು ಕಳೆದು ಹೋಗಿವೆ. ನೆರೆ ಸಂತ್ರಸ್ಥರ ಆಕ್ರಂದನ ಮುಗಿಲು ಮುಟ್ಟಿದಾಗ ಪರಿಹಾರಕ್ಕೆ ಧಾವಿಸಬೇಕಿದ್ದ ಸರ್ಕಾರ, ಜನಪ್ರತಿನಿಧಿಗಳು ತಮ್ಮ ಭವಿಷ್ಯ ಸುಧಾರಿಸಿಕೊಳ್ಳುವಲ್ಲಿ ತಲ್ಲೀನರಾದರು.
ಅವರವರ ಸ್ವಹಿತಾಸಕ್ತಿಗಳಲ್ಲಿ ಮುಳುಗಿ ಹೋದರು. ನೊಂದವರ ಪರ ಸ್ಪಂದಿಸುವ ಜವಾಬ್ದಾರಿ ನಮ್ಮದೂ ಇದೆ ಅಂದುಕೊಂಡ ಈ ನಾಡಿನ ಸಾರ್ವಜನಿಕರು, ಸಂಘಟನೆಗಳು ಸಮರೋಪಾದಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟು ಅಭೂತಪೂರ್ವ ಕಾಳಜಿ ತೋರಿದರು. ಅಲ್ಲಿನ ಜನರ ನೋವು ನಿವಾರಣೆಗೆ ಇಲ್ಲಿನ ಜನರು ಸ್ಪಂದಿಸಿ ತಮ್ಮ ಜೇಬು ಖಾಲಿಯಾದರೂ ಪರವಾಗಿಲ್ಲ ಅಂದುಕೊಂಡು ಖರೀದಿಸಿದ ವಸ್ತುಗಳ ಮೇಲೆ ಶೇ.5 ರಿಂದ 28 ರವರೆಗೆ ಜಿ.ಎಸ್.ಟಿ. ನೀಡಿ ಅಲ್ಲಿಗೆ ರವಾನಿಸಿದರು.
ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ವ್ಯಾಪಾರ ವಹಿವಾಟು ಕುಸಿತ ಕಂಡಿದ್ದರೂ, ನಿರುದ್ಯೋಗದ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಅದಾವುದನ್ನೂ ಲೆಕ್ಕಿಸದೆ ಸಾಮಾನ್ಯ ಜನ, ವ್ಯಾಪಾರ ವಹಿವಾಟುದಾರರು ತೋರಿದ ಮಾನವೀಯ ಕಾಳಜಿ ಊಹಿಸಲೂ ಅಸಾಧ್ಯವಾದುದು. ಇದೇ ಕೆಲಸ ಮಾಡಬೇಕಿದ್ದ ಜವಾಬ್ದಾರಿ ಹೊತ್ತ ಸರ್ಕಾರ ಮತ್ತು ಅದರ ಪ್ರತಿನಿಧಿಗಳಿಗೆ ಇಲ್ಲದೆ ಹೋದದ್ದು ವಿಪರ್ಯಾಸವೇ ಸರಿ. ಇದು ಎಲ್ಲರಿಗೂ ನೋವುಂಟು ಮಾಡಿದ ವಿಷಯ.
ತಾವು ಕಳುಹಿಸುವ ಸಾಮಗ್ರಿಗಳು ಅಲ್ಲಿಗೆ ಸಮರ್ಪಕವಾಗಿ ವಿಲೇವಾರಿ ಆಗುವುದೋ ಇಲ್ಲವೋ ಎಂಬ ಕೊಂಚ ಅನುಮಾನವನ್ನೂ ಇಟ್ಟುಕೊಳ್ಳದೆ ನಾಡಿನ ಜನತೆ ಯಥೇಚ್ಛವಾಗಿ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದರು. ಆದರೆ ಕೇಂದ್ರ ಸರ್ಕಾರ ವೈಮಾನಿಕ ಸಮೀಕ್ಷೆ ನಡೆಸಿ ತನ್ನದೆ ತಂಡದಿಂದ ಅಧ್ಯಯನ ಮಾಡಿಸಿ ಇಷ್ಟು ದಿನಗಳು ಕಳೆದ ಮೇಲೆ ವರದಿ ಸರಿಯಿಲ್ಲ, ಅದನ್ನು ಪರಿಷ್ಕರಿಸಿ ಎಂದು ಬೇಜವಾಬ್ದಾರಿ ನಡೆ ತೋರುವುದು ಸರ್ಕಾರದ ಆಡಳಿತದ ಲಕ್ಷಣವೆ? ಕೇಂದ್ರದ ಈ ನಡೆಯೇ ರಾಜ್ಯವ್ಯಾಪಿ ಟೀಕೆಗೆ ಗುರಿಯಾಯಿತು. ಸ್ವಪಕ್ಷೀಯರೇ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಕೇಂದ್ರವೇ ಹೇಳಿದಂತೆ ವರದಿ ಸರಿಯಾಗಿಲ್ಲ ಎಂದೇ ಭಾವಿಸೋಣ. ಅಂದ ಮಾತ್ರಕ್ಕೆ ಇಲ್ಲಿ ಯಾವುದೇ ದುರಂತ ಸಂಭವಿಸಿಲ್ಲ ಎಂದರ್ಥವೇ? 38 ಸಾವಿರ ಕೋಟಿ ರೂ.ಗಳು ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಅದನ್ನು ಕಂತುಗಳ ಮೂಲಕ ಬಿಡುಗಡೆ ಮಾಡಬಹುದಿತ್ತಲ್ಲವೆ? ಆನಂತರ ನಿಧಾನವಾಗಿ ಅಂದಾಜು ಲೆಕ್ಕಗಳನ್ನು ಪರಿಶೀಲಿಸಬಹುದಿತ್ತಲ್ಲವೆ? ಜನತೆ ಇಂತಹ ಸಂಕಷ್ಟ ಪರಿಸ್ಥಿತಿಗೊಳಗಾಗಿ ಬದುಕು ಸವೆಸುತ್ತ ದಿನಗಳನ್ನು ದೂಡುತ್ತಿರುವಾಗ ವರದಿ, ಅಧ್ಯಯನದ ನೆಪ ಸರಿಯೇ? ತಾತ್ಕಾಲಿಕ ವ್ಯವಸ್ಥೆಗಳಾದರೂ ಆಗಬೇಡವೇ? ಆಕ್ರೋಶ, ಅಸಮಾಧಾನಗಳು ವ್ಯಕ್ತವಾದ ನಂತರ ರಾಜ್ಯದ ನಾಯಕರ ಮಾನ ಮರ್ಯಾದೆ ಹರಾಜಾಗಿ ಹೋದ ನಂತರ 1200 ಕೋಟಿ ರೂ. ಪರಿಹಾರ ನೀಡಿರುವುದು ಹರಸಾಹಸವೆಂದೇ ಭಾವಿಸಲಾಗುತ್ತಿದೆ.
ದಿನವೊಂದಕ್ಕೆ 3 ಹೊತ್ತು ಊಟ ಮಾಡುವ ಜಾಗದಲ್ಲಿ ಸಂತ್ರಸ್ತರು ಹಾಗೂ ಹೀಗೂ 60 ದಿನ ಕಳೆದ ನಂತರ ಕೊಂಚ ಉಸಿರಾಡುವಂತಹ ಸಂದರ್ಭ ಈಗ ಒದಗಿ ಬಂದಿದೆ. ಇಲ್ಲಿ ಸರ್ಕಾರದ ವರದಿ ವೈಜ್ಞಾನಿಕವೋ, ಅವೈಜ್ಞಾನಿಕವೋ ಎಂಬುದು ಮುಖ್ಯವಾಗಬಾರದು. ಮಾನವೀಯ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ಪರಿಗಣಿಸಬೇಕು. ಈ ನಡುವೆ ಪ್ರಧಾನಿ ಸೇರಿದಂತೆ ರಾಷ್ಟ್ರದ ಮುಖ್ಯಸ್ಥರ ಸಾಂತ್ವನದ ನುಡಿಗಳೂ ಬೇಕು.
ಆದರೆ ಜವಾಬ್ದಾರಿಯ ಅಪ್ಪುಗೆ ಸಿಗದೇ ಹೋದದ್ದು, ಅದರಲ್ಲೂ ವಿಶೇಷವಾಗಿ 25 ಸಂಸದರನ್ನು ಆರಿಸಿ ಕಳುಹಿಸಿದ ರಾಜ್ಯಕ್ಕೆ ಕೇಂದ್ರ ನೀಡಿದ ಈ ಕೊಡುಗೆ ಇದೊಂದು ಅವಮಾನವಲ್ಲದೆ ಮತ್ತೇನು? ಇಂತಹ ಇಬ್ಬಂದಿ ಧೋರಣೆಯಾದರೂ ಏಕೆ? ರಾಜ್ಯ ಮತ್ತು ಕೇಂದ್ರ ನಾಯಕರ ನಡುವೆ ಏನೇ ವೈಮನಸ್ಸು ಇದ್ದರೂ ಅದನ್ನು ಆಂತರ್ಯವಾಗಿ ಬಗೆಹರಿಸಿಕೊಳ್ಳಬಹುದಿತ್ತು. ಅದರ ಹೊರೆಯನ್ನು ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಜನರ ಮೇಲೆ ಹೊರಿಸಬಾರದು.
ಅವರ ಸಿಟ್ಟುಗಳಿಗೆ ಸಂತ್ರಸ್ತರು ಬಲಿಯಾಗಬೇಕೆ? ಸಾಮಾನ್ಯ ಜನ ಕಷ್ಟ ಅನುಭವಿಸಬೇಕೆ? ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಬಾರದೆ ಯಾವತ್ತೋ ಪರಿಹಾರ ನೀಡಿದರೆ ಜನರ ಬವಣೆ ಸುಧಾರಿಸಲು ಸಾಧ್ಯವೆ? ಪ್ರಸ್ತುತ ಕೇಂದ್ರದಿಂದ 1200 ಕೋಟಿ ರೂ. ಪರಿಹಾರ ಪಡೆಯುವಷ್ಟರಲ್ಲೇ ಹೈರಾಣಾಗಿ ಹೋಗಿರುವ ರಾಜ್ಯ ನಾಯಕರು ಇನ್ನು ಉಳಿದ ಪರಿಹಾರ ತಂದು ನೊಂದವರ, ಸಂತ್ರಸ್ತರ ಜೀವನವನ್ನು ಪುನರ್ ಕಟ್ಟಿಕೊಡುವುದಾದರೂ ಯಾವಾಗ?
ದೇಶದ ವಿವಿಧೆಡೆ ಸುಮಾರು 10 ರಾಜ್ಯಗಳಲ್ಲಿ ನೆರೆ ಹಾವಳಿ ಅತಿಯಾಗಿರುವುದರಿಂದ ಆರ್ಥಿಕ ಹಿಂಜರಿತದ ಈ ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ನಿಭಾಯಿಸುವುದು ಕಷ್ಟವೇ ಸರಿ. ಆದರೂ ಅಪಾರ ನಂಬಿಕೆ ಹಾಗೂ ಗೌರವಗಳನ್ನಿಟ್ಟು ಜನರು ಆಯ್ಕೆ ಮಾಡಿ ಕಳುಹಿಸಿದ ತಮ್ಮ ನಾಯಕರು ಇಂತಹ ಸಂದರ್ಭಗಳಲ್ಲಿ ಸಾಂತ್ವನ ಹಾಗೂ ಸಹಾಯ ಹಸ್ತ ನೀಡಬೇಕಿತ್ತು. ಜನರ ನಿರೀಕ್ಷೆಯೂ ಇದೇ ಆಗಿತ್ತು. ಕಷ್ಟ ಕಾಲದಲ್ಲಿ ಜನರ ನಡುವೆ ಇಲ್ಲದ ನಾಯಕರನ್ನು ಯಾರೂ ಬೈಯ್ಯಬಾರದು, ಜವಾಬ್ದಾರಿಯ ಹೊಣೆ ಹೊರಿಸಬಾರದು ಎಂದರೆ ಹೇಗೆ?
ಆರಿಸಿ ಕಳುಹಿಸಿರುವ ನಮ್ಮ ನಾಯಕರು ದೇವರೆಂಬಂತೆ ಅತಿಯಾದ ನಿಷ್ಠೆ ತೋರಿಸುವ ಭರದಲ್ಲಿ ನೆರೆಪೀಡಿತರನ್ನು ನಡುನೀರಿನಲ್ಲಿ ಕೈಬಿಡಬಾರದು ಅಲ್ಲವೆ? ಹೊಟ್ಟೆಗೆ ಊಟ, ನಿಲ್ಲಲು ಸೂರು ಇಲ್ಲದಿದ್ದಾಗ ಇಂತಹ ಧೋರಣೆಗಳು ಜನನಾಯಕರಿಗೆ ಮುಂಬರುವ ದಿನಗಳಲ್ಲಿ ಮುಳ್ಳಾಗಿ ಪರಿಣಮಿಸದೇ ಇರದು.
-ಸಂಪಾದಕೀಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ