ದಾವಣಗೆರೆ
ಸತಿ-ಪತಿ ನಡುವೆ ಪರಸ್ಪರ ಹೊಂದಾಣಿಕೆ ಇದ್ದರೆ ಮಾತ್ರ ಜೀವನದ ಬಂಡಿ ಉತ್ತಮವಾಗಿ ಸಾಗಲು ಸಾಧ್ಯ. ಆದ್ದರಿಂದ ಗಂಡ-ಹೆಂಡತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕೆಂದು ಶ್ರೀದುರ್ಗಾಂಭಿಕಾ ದೇವಸ್ಥಾನದ ಟ್ರಸ್ಟ್‍ನ ಗೌರವಾಧ್ಯಕ್ಷ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ನವ ದಂಪತಿಗಳಿಗೆ ಕರೆ ನೀಡಿದರು.
ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ದಸರಾ ಮಹೋತ್ಸವದ ಅಂಗವಾಗಿ ಶ್ರೀದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಧು-ವರರಿಗೆ ಆಶೀರ್ವಧಿಸಿ ಅವರು ಮಾತನಾಡಿದರು.
ಗಂಡ ಸಿಟ್ಟು ಮಾಡಿಕೊಂಡಾಗ ಹೆಂಡತಿ ತಾಳ್ಮೆಯಿಂದ ವರ್ತಿಸಬೇಕು. ಅಲ್ಲದೇ, ಹೆಂಡತಿ ಮುನಿಸಿಕೊಂಡಾಗ ಗಂಡ ತಾಳ್ಮೆಯಿಂದ ನಡೆದುಕೊಳ್ಳಬೇಕು. ಆಗ ಮಾತ್ರ ಸುಮಧುರ ಜೀವ ಸಾಗಿಸಲು ಸಾಧ್ಯವಾಗಲಿದೆ ಎಂದ ಅವರು, ಸತಿ-ಪತಿಗಳು ಒಂದು ಬಂಡಿಯ ಎರಡು ಚಕ್ರಗಳಿದ್ದಂತೆ. ಎರಡೂ ಚಕ್ರಗಳು ಸಮನಾಗಿ ಚಲಿಸಿದಾಗ ಬಂಡಿ ಸಲೀಸಾಗಿ ಸಾಗುತ್ತದೆ ಎಂದರು.
ಗಂಡ-ಹೆಂಡತಿ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇರಬೇಕು ಆಗ ಮಾತ್ರ ನಿಮ್ಮ ಜೀವನದ ಬಂಡಿ ಉತ್ತಮವಾಗಿ ಸಾಗಲು ಸಾಧ್ಯ ಎಂದ ಅವರು, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆ ಆಗುವುದರಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಆಶಿಸಿದರು.
ಶಿವಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11.40ರ ವೇಳೆಗೆ ಮಂಗಲ ವಾದ್ಯಗಳ ನಡುವೆ ಮಾಂಗಲ್ಯ ಧಾರಣೆಯೊಂದಿಗೆ 16 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು ಮಾಂಗಲ್ಯ ಸರ, ಬಟ್ಟೆ, ಬೆಳ್ಳಿ ಕಾಲುಂಗುರು, ಬಾಸಿಂಗವನ್ನು ವಧು- ವರರಿಗೆ ಉಚಿತವಾಗಿ ನೀಡಲಾಗಿತ್ತು. ವಿವಾಹ ಕಾರ್ಯಕ್ರಮದ ನಂತರ 108 ಕಳಸಗಳೊಂದಿಗೆ ದುರ್ಗಾದೇವಿ ಮೂರ್ತಿಯ ಮೆರವಣಿಗೆಯು ವಿಜೃಂಭಣೆಯಿಂಜ ನಗರದ ರಾಜ ಬೀದಿಗಳಲ್ಲಿ ತೆರಳಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟಿಗಳಾದ ಗೌಡ್ರ ಚನ್ನಬಸಪ್ಪ, ಎಚ್.ಬಿ. ಗೋಣೆಪ್ಪ, ಹನುಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ, ಉಮೇಶ್ ಸಾಳಂಕಿ, ಹನುಮಂತರಾವ್ ಜಾಧವ್, ಬಿ.ಎಚ್.ವೀರಭದ್ರಪ್ಪ, ಗುರುರಾಜ್ ಸೊಪ್ಪಿನವರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
