ಬೆಂಗಳೂರು:
ಮಾಜಿ ಡಿಸಿಎಂ ಜಿ.ಪರಮೇಶ್ವರ್ ಮನೆಯಲ್ಲಿ ಇಂದು ಐಟಿ ದಾಳಿ ಅಂತ್ಯವಾಗಿದ್ದು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್ಗೆ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಪರಂ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟ್ ಹೊರತುಪಡಿಸಿ ಮ್ಯಾನೇಜ್ಮೆಂಟ್ ಸೀಟ್ ಗಳು ಇರುತ್ತವೆ. ಈ ಸೀಟ್ ಗಳಿಗೆ ಕಾಲೇಜುಗಳು ಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಅಷ್ಟೇ ಅಲ್ಲದೇ ತೆರಿಗೆಯನ್ನು ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಅಕ್ಟೋಬರ್ 10ರಂದು ಮಾಜಿ ಡಿಸಿಎಂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳು ಹಾಗೂ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 15 ಜನ ಐಟಿ ಅಧಿಕಾರಿಗಳು 15 ಗಂಟೆಗಳ ಕಾಲ ನಿನ್ನೆ ಪರೀಶೀಲನೆ ನಡೆಸಿದ್ದರು. 2 ದಿನ ಬಿಟ್ಟು ಅಂದರೆ ಅ.14 ರ ಮಂಗಳವಾರ ಐಟಿ ಕಚೇರಿಗೆ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಪರಮೇಶ್ವರ್ಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿಗಳು, ಗುರುವಾರರಂದು ಬೆಳಗ್ಗೆ 7 ಗಂಟೆಗೆ ಸರ್ಚ್ ವಾರೆಂಟ್ ನೊಂದಿಗೆ ಅಧಿಕಾರಿಗಳು ಬಂದಿದ್ದಾರೆ. ನಾನು ನನ್ನ ಕ್ಷೇತ್ರದ ಕೆರೆ ತುಂಬಿದ್ದಕ್ಕೆ ಪೂಜೆಗೆ ಹೋಗಿದ್ದೆ. ಮುಗಿಸಿ ಐಬಿಯಲ್ಲಿ ಇರುವಾಗ ಮಾಹಿತಿ ಇತ್ತು. ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಬಳಿ ಸಾಕಷ್ಟು ವಾಹನಗಳು ಬಂದಿರುವ ಬಗ್ಗೆ ಮಾಹಿತಿ ಗೊತ್ತಾಯ್ತು. ಬಳಿಕ ಐಬಿಗೆ ಬಂದ ಇಬ್ಬರು ಅಧಿಕಾರಿಗಳು ಬಂದು ಸದಾಶಿವ ನಗರ ಮನೆಗೆ ಕರೆದುಕೊಂಡು ಬಂದರು ಎಂದು ದಾಳಿಯ ಬಗೆಗಿನ ಮಾಹಿತಿ ನೀಡಿದರು.
ಇನ್ನು ಸಿದ್ದಾರ್ಥ ಕಾಲೇಜು ಸಂಬಂಧಿಸಿದಂತೆ ಮಾತನಾಡಿದ ಅವರು, ಮೊದಲು ನನ್ನ ಸಹೋದರ ಕಾಲೇಜು ಜವಾಬ್ದಾರಿ ಹೊತ್ತಿದ್ದರು. ಈಗ ಕಳೆದ ಆರು ತಿಂಗಳಿಂದ ನಾನು ಜವಾಬ್ದಾರಿ ಪಡೆದಿದ್ದೇನೆ. ಕಾಲೇಜಿನಲ್ಲಿ ದಾಖಲಾತಿ ವಿಚಾರವಾಗಿ ನನಗೆ ಗೊತ್ತಿಲ್ಲ. ಕಾಲೇಜ್ ಕಡೆಯಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆಗೆ ಬರಲು ಹೇಳಿದ್ದಾರೆ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ