ತುಮಕೂರು:
ದೇಶ ಎದುರಿಸುತ್ತಿರುವ ಆರ್ಥಿಕ ಕುಸಿತದ ಬಗ್ಗೆ ಸರ್ಕಾರದ ನಿಲುವುಗಳು ಹಾಗೂ ವಿಪಕ್ಷಗಳ ಟೀಕೆ-ಟಿಪ್ಪಣಿಗಳು ಒಂದಕ್ಕೊಂದು ಗೊಂದಲ ಮೂಡಿಸುತ್ತಿವೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತುಕೊಳ್ಳುವಲ್ಲಿ ಜನಸಾಮಾನ್ಯರು ಡೋಲಾಯಮಾನ ಪರಿಸ್ಥಿತಿಗೆ ಸಿಲುಕಿದ್ದಾರೆ. ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರಗಳೆಲ್ಲವೂ ಸರಿಯಾಗಿದೆ ಎಂದು ಕೇಂದ್ರ ಸರ್ಕಾರ ಬಿಂಬಿಸುತ್ತಿದೆಯಾದರೂ, ವಿರೋಧ ಪಕ್ಷಗಳು ಹಾಗೂ ಹಲವು ಆರ್ಥಿಕ ತಜ್ಞರು ಇದನ್ನು ಒಪ್ಪುತ್ತಿಲ್ಲ. ಈ ನಡುವೆ ಜನಸಾಮಾನ್ಯರು, ಉದ್ದಿಮೆದಾರರು, ವ್ಯಾಪಾರಿಗಳು ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿ ಯಾತನೆ ಪಡುವುದಂತೂ ತಪ್ಪಿಲ್ಲ.
ಸರ್ಕಾರ, ಅದನ್ನು ಪ್ರತಿನಿಧಿಸುವ ಮಂತ್ರಿಗಳು, ಆರ್‍ಬಿಐ, ನೀತಿ ಆಯೋಗ ಈ ಎಲ್ಲ ಸಂಸ್ಥೆಗಳ ಮುಖ್ಯಸ್ಥರು ನೀಡುವ ಹೇಳಿಕೆಗಳು ಒಂದಕ್ಕೊಂದು ಹೋಲಿಕೆಯಾಗದೆ ಉದ್ದಿಮೆದಾರರು ಗೊಂದಲಕ್ಕೀಡಾಗಿದ್ದಾರೆ. ಈ ಗೊಂದಲಗಳು ಹಲವಾರು ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಸಮಸ್ಯೆಗಳನ್ನು, ಗೊಂದಲಗಳನ್ನು ನಿಸ್ಸಂದೇಹವಾಗಿ ಪರಿಹರಿಸುವ ಪ್ರಯತ್ನಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ದಿನೇ ದಿನೇ ಹಣದ ಕೊರತೆ ಎದುರಾಗುತ್ತಿದ್ದು, ಉದ್ದಿಮೆದಾರರು ತಮ್ಮ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಹೆಣಗಾಡುವ ಪರಿಸ್ಥಿತಿಯಲ್ಲಿ ಇದ್ದಾರೆ. ಹಣದ ಹರಿವು ಕಡಿಮೆಯಾದರೆ ಇಂತಹ ಪರಿಸ್ಥಿತಿ ಬರದೆ ಇನ್ನೇನಾದೀತು?
ನೀತಿ ಆಯೋಗದ ಉಪಾಧ್ಯಕ್ಷರು ಹೇಳುವ ಹಾಗೆ ಕಳೆದ 70 ವರ್ಷಗಳಲ್ಲಿ ಈ ರೀತಿಯ ಲಿಕ್ವಿಡಿಟಿ ಕ್ರೈಸಿಸ್ ಎದುರಾಗುತ್ತಿರುವುದು ಇದೇ ಮೊದಲು. ಈ ಮಾತನ್ನು ವಿತ್ತ ಸಚಿವರು ಸಾರಾಸಗಟಾಗಿ ತಳ್ಳಿ ಹಾಕಿ ಇದೊಂದು ಮಾಧ್ಯಮಗಳು ಸೃಷ್ಟಿಸಿರುವ ಊಹೆ ಎಂದರು. ಇವರಲ್ಲಿ ಯಾರ ಮಾತನ್ನು ನಂಬಬೇಕು? ದಿನಕ್ಕೊಂದು ಸುಧಾರಣಾ ನೀತಿಗಳು ಹೊರಬರುತ್ತಿರುವುದನ್ನು ನೋಡಿದರೆ ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ಅರಿವಿದೆ ಎಂದಾಯಿತು. ಆದರೂ ಅದನ್ನು ಒಪ್ಪಿಕೊಳ್ಳದ ಮೊಂಡು ವಾದವನ್ನು ಮುಂದಿಡುತ್ತಿರುವುದೇಕೆ?
ದೇಶಾದ್ಯಂತ ಸಾರ್ವಜನಿಕರಲ್ಲಿ ವಸ್ತುಗಳನ್ನು ಖರೀದಿ ಮಾಡುವ ಶಕ್ತಿ ಇಲ್ಲದಂತಾಗಿದೆ ಎಂಬ ಕೂಗು ಕೇಳಿಬಂದಾಗ ಸರ್ಕಾರ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇಂತಹ ಪ್ರಯತ್ನಗಳಿಗೆ ಮುಂದಾಗದೆ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿ, ಇದರಿಂದ ಉತ್ಪಾದಕರಿಗೆ ಉತ್ತೇಜನ ನೀಡುವ ಯೋಜನೆ ಘೋಷಿಸಲಾಯಿತು. ಉದ್ಯೋಗ ಸೃಷ್ಟಿಗೆ ಇದು ಅನುಕೂಲಕರವಾಗಬಹುದೆಂದು ಈ ನಿರ್ಧಾರ ತೆಗೆದುಕೊಂಡಿತು.
ಈ ಹೆಜ್ಜೆಯಿಂದ ಜನಸಾಮಾನ್ಯರಿಗೆ ಆಗುವ ಅನುಕೂಲವಾದರೂ ಏನು? ಇದರಿಂದ ಖರೀದಿಗೆ ಉತ್ತೇಜನ ಆಗುವುದಾದರೂ ಹೇಗೆ? ತೆರಿಗೆ ಕಡಿಮೆ ಮಾಡಿಸಿಕೊಂಡಿರುವ ಕಾರ್ಪೊರೇಟ್ ವಲಯ ತಾವು ಈಗಾಗಲೇ ಉತ್ಪಾದನೆ ಮಾಡಿರುವ ವಸ್ತು- ಸಾಮಗ್ರಿಗಳು ಬಿಕರಿಯಾಗುವುದಿಲ್ಲ ಎಂದು ಕುಳಿತಿರುವಾಗ, ಇನ್ನು ಮರು ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆಯೆ? ಈ ತೆರಿಗೆ ವಿನಾಯಿತಿಯಿಂದ ತಮ್ಮ ಸಂಸ್ಥೆ/ ಕಂಪನಿಯ ಕೆಟ್ಟಿರುವ ಬ್ಯಾಲೆನ್ಸ್ ಶೀಟ್ ಸರಿದೂಗಿಸಿಕೊಳ್ಳಬಹುದಷ್ಟೆ.
ಜನಸಾಮಾನ್ಯರಿಗೆ ನೀಡಬೇಕಾದ ರಿಯಾಯಿತಿ ಕಾರ್ಪೊರೇಟ್ ವಲಯಕ್ಕೆ ನೀಡಿ ಯಥಾಪ್ರಕಾರ ಸಾಮಾನ್ಯರ ಮೇಲೆ ತೆರಿಗೆಯ ಹೊರೆ ಮುಂದುವರೆದಿದೆ. ಕಾರ್ಪೊರೇಟ್ ವಲಯಕ್ಕೆ ನೀಡಿರುವ ಈ ರಿಯಾಯಿತಿಯಿಂದ ಒಂದು ವರ್ಷಕ್ಕೆ ಸರಿಸುಮಾರು ಒಂದೂವರೆ ಲಕ್ಷ ಕೋಟಿ ರೂ.ಗಳಷ್ಟು ಸರ್ಕಾರದ ಖಜಾನೆಗೆ ಹೊಡೆತ ಬೀಳಲಿದೆ. ಇದನ್ನು ನೋಡಿದರೆ ಈಗಾಗಲೆ ಎದುರಾಗಿರುವ ಸಮಸ್ಯೆ ಬಗೆಹರಿಸದೆ ಕೇವಲ ಸರ್ಕಾರಿ ನೀತಿಗಳನ್ನು ದೂರಲಾರಂಭಿಸಿರುವ ಕಾರ್ಪೊರೇಟ್ ವಲಯದ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ ಎಂದನ್ನಿಸುವುದಿಲ್ಲವೆ?
(ಕಾರ್ಪೊರೇಟ್ ತೆರಿಗೆಯನ್ನು ಚಾಲ್ತಿಯಲ್ಲಿರುವ ಹಳೆಯ ಉದ್ಯಮಗಳಿಗೆ ಶೇ.34.09ರಿಂದ ಶೇ.25.17ಕ್ಕೆ ಇಳಿಸಲಾಗಿದೆ. ಎಫೆಕ್ಟೀವ್ ಟ್ಯಾಕ್ಸ್, ಸರ್‍ಚಾರ್ಜ್ ಮತ್ತು ಸೆಸ್ ಒಳಗೊಂಡು ಹೊಸ ಉತ್ಪಾದನಾ ಘಟಕಗಳಿಗೆ ಶೇ.25.17ರಿಂದ ಶೇ.17.01ಕ್ಕೆ ಇಳಿಸಲಾಗಿದೆ.)
ರೈತರು, ಸಾಮಾನ್ಯರ ಕೈಗೆ ಹಣ ಸಿಗದೆ ಇದ್ದಾಗ ಖರೀದಿ ಶಕ್ತಿ ವೃದ್ದಿಯಾಗುವುದಾದರೂ ಎಲ್ಲಿಂದ? ಸರ್ಕಾರದ ನಿಯತ್ತು ಸರಿ ಇದ್ದರೂ ನೀತಿ, ಅನುಭವ ಹಾಗೂ ತಿಳಿವಳಿಕೆಯ ಕೊರತೆ ಇದ್ದಿರಬಹುದೇ? ನಿಯತ್ತು ಸರಿ ಇದ್ದಾಗ ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಹಿರಿಯರ ಸಲಹೆಗಳನ್ನು ಪಡೆಯುವುದರಲ್ಲಿ ತಪ್ಪೇನಿದೆ? ಮನಮೋಹನ ಸಿಂಗ್ ಅವರಂತಹ ಶ್ರೇಷ್ಠ ಆರ್ಥಿಕ ತಜ್ಞರು ಕೂಗಳತೆ ದೂರದಲ್ಲಿದ್ದರೂ ಅಂತಹವರ ಸಲಹೆ ಪಡೆಯಲು ಸಂಕುಚಿತ ಮನೋಭಾವವಾದರೂ ಏಕೆ? ದೇಶಕ್ಕೆ ಒಳಿತಾಗುತ್ತದೆ ಎಂದರೆ ಆರ್ಥಿಕ ತಜ್ಞರು ಯಾರಾದರೂ ಇರಲಿ ಅವರ ಸಲಹೆ-ಸೂಚನೆಗಳನ್ನು ಪಡೆಯವುದು ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಒಳಿತಾದ ಕ್ರಮವಲ್ಲವೇ?
ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯಸ್ಥೆ ಹೇಳುವ ಪ್ರಕಾರ ಭಾರತದ ಆರ್ಥಿಕತೆ ಹತ್ತು ವರ್ಷ ಹಿಂದಕ್ಕೆ ಸರಿದು ವ್ಯಾಪಾರದ ಸಕಾರಾತ್ಮಕತೆ ಸೂಚ್ಯಂಕದಲ್ಲಿ ಈಗಿರುವ ಸ್ಥಾನಕ್ಕಿಂತ ಹತ್ತು ಸ್ಥಾನ ಕೆಳಗಿಳಿದು 68 ನೆ ಸ್ಥಾನಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತದ ಹಾದಿಯಲ್ಲಿದೆ. ವಿಶ್ವದ ಶೇ.90 ರಷ್ಟು ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ವಿಶ್ವವು ಇಂತಹ ಪರಿಸ್ಥಿತಿಗೆ ತಲುಪುವ ಮುನ್ನವೆ ಭಾರತದ ಆರ್ಥಿಕತೆ ಕುಸಿತ ಕಂಡಿದೆ. ಇದನ್ನು ನೋಡಿದಾಗ ನಮ್ಮ ದೇಶ ಅನುಭವಿಸುತ್ತಿರುವ ಆರ್ಥಿಕ ಕುಸಿತಕ್ಕೆ ಭವಿಷ್ಯದಲ್ಲಿ ಇನ್ನೂ ದೊಡ್ಡ ಹೊಡೆತ ಎದುರಾಗುವ ಆತಂಕವಿದೆ.
ದೇಶದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿಕೊಳ್ಳುವ ಪ್ರಧಾನಿಯವರು ದಿನಕ್ಕೊಂದು ಆರ್ಥಿಕ ಸುಧಾರಣಾ ನೀತಿಗಳನ್ನು ಪ್ರಕಟಿಸುತ್ತಿರುವುದನ್ನು ನೋಡಿದರೆ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆಯಲ್ಲವೆ? ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಇಷ್ಟೊಂದು ಹಠ ಹಾಗೂ ಕುಬ್ಜತನವಾದರೂ ಏಕೆ? ಇದೆಲ್ಲವನ್ನೂ ಬದಿಗೊತ್ತಿ ನಮ್ಮಲ್ಲೇ ಇರುವ ವಿಶ್ವ ಮಟ್ಟದ ಆರ್ಥಿಕ ತಜ್ಞರನ್ನು ಅವರು ಯಾವುದೆ ಪಕ್ಷವಾಗಿದ್ದರೂ ಸರಿ, ಅವರೊಡನೆ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದಲ್ಲವೇ? ಇಂತಹ ಉದಾರತನದಿಂದಲೇ ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಿ ಆರ್ಥಿಕತೆಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವತ್ತ ಮನಸ್ಸು ಮಾಡುತ್ತಿಲ್ಲವೇಕೆ?
ಟಿ ಎನ್ ಮಧುಕರ್
ಸಹ ಸಂಪಾದಕರು ,ಪ್ರಜಾಪ್ರಗತಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ