ತುಮಕೂರು:

ಹಾಲು ಮತ್ತು ಹಾಲು ಉತ್ಪನ್ನಗಳ ಡೈರಿ ಪದಾರ್ಥಗಳನ್ನು ದೇಶದೊಳಗೆ ಮುಕ್ತವಾಗಿ ಬಿಟ್ಟುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಇದೀಗ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದೆ. ಹಾಲು ಹಾಗೂ ಉತ್ಪನ್ನಗಳು ದೇಶದೊಳಗೆ ನುಸುಳುತ್ತಿರುವ ಜೊತೆಗೆ ತೆರಿಗೆ ಮುಕ್ತವಾಗಿ ಬರಮಾಡಿಕೊಳ್ಳುತ್ತಿರುವುದು ಸ್ಥಳೀಯ ಹಾಲು ಮಾರುಕಟ್ಟೆಯ ವ್ಯವಸ್ಥೆಯ ಮೇಲೆ ಬಹುದೊಡ್ಡ ಹೊಡೆತ ಬೀರುವ ಸಾಧ್ಯತೆಗಳಿವೆ.
12 ದೇಶಗಳಿಂದ ತೆರಿಗೆ ರಹಿತವಾಗಿ ಡೈರಿ ಪದಾರ್ಥಗಳನ್ನು ತರಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆ ನಡೆಸಿರುವುದು ಹೈನು ಉದ್ಯಮದಲ್ಲಿ ತೊಡಗಿಕೊಂಡಿರುವವರಿಗೆ ಆತಂಕ ಉಂಟು ಮಾಡಿದೆ. ವಿಶೇಷವೆಂದರೆ ಕೇಂದ್ರ ಸರ್ಕಾರದ ಈ ನಿರ್ಧಾರಗಳು ಮತ್ತು ಮಾತುಕತೆಗಳು ಹೈನೋದ್ಯಮದಲ್ಲಿ ಇರುವವರಿಗೆ ಇನ್ನು ಅಷ್ಟಾಗಿ ತಿಳಿದಿಲ್ಲ. ಮುಂದಿನ ತಿಂಗಳ ವೇಳೆಗೆ ಭಾರತವು ಇತರೆ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದ್ದು, ಈ ಒಪ್ಪಂದದ ಪ್ರಕ್ರಿಯೆಗಳು ಮುಗಿದ ನಂತರ ಈ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆತಂಕ ಎದುರಾಗಬಹುದು.
ಸರ್ಕಾರದ ಈ ನಡೆಗಳು ಈಗಾಗಲೇ ವಿವಿಧ ಹಾಲು ಒಕ್ಕೂಟಗಳಿಗೆ ತಿಳಿದಿದೆ. ಅಲ್ಲಲ್ಲಿ ವಿರೋಧಗಳು ವ್ಯಕ್ತವಾಗುತ್ತಿವೆ. ಕರ್ನಾಟಕ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಹಾಲನ್ನು ಹೊರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯು ಇದೇ ಪರಿಸ್ಥಿತಿ ಇದೆ. ಕರ್ನಾಟಕದಲ್ಲಿನ ಹಾಲು ಹೊರಗೆ ರವಾನೆಯಾಗುತ್ತಿದೆ. ಪ್ರತಿನಿತ್ಯ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಕ್ಷೀರ ಭಾಗ್ಯ ಯೋಜನೆಯಡಿ ಹಾಲು ನೀಡಿದರೂ ಇನ್ನು ಉಳಿಕೆಯಾಗುತ್ತಿದೆ.
ಇದೇ ರೀತಿ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ನಮ್ಮ ರಾಜ್ಯಗಳಲ್ಲೇ ಹಾಲಿನ ಉತ್ಪಾದನೆ ಉತ್ತಮವಾಗಿರುವಾಗ ಆಮದು ಮಾಡಿಕೊಳ್ಳುವ ಚಿಂತನೆಯಾದರೂ ಏಕೆ? ಇದರಿಂದ ಪರೋಕ್ಷವಾಗಿ
ನಮ್ಮ ರೈತರ ಮೇಲೆ ಆರ್ಥಿಕ ಹೊಡೆತ ಬೀಳುವುದಿಲ್ಲವೆ?
ತುಮಕೂರು ಜಿಲ್ಲೆಯ ಚಿತ್ರಣವನ್ನೇ ನೋಡಿದರೆ ಇಲ್ಲಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯಲ್ಲಿ 1206 ಸಂಘಗಳಿವೆ. ಒಟ್ಟು 286 ಕ್ಕೂ ಹೆಚ್ಚು ಮಹಿಳಾ ಸೊಸೈಟಿಗಳಿವೆ. ಜಿಲ್ಲಾದ್ಯಂತ ರಚನೆಯಾಗಿರುವ ಸಂಘಗಳ ಮೂಲಕ ಹಾಲು ಸಂಗ್ರಹಿಸಿ ಅಂತಿಮವಾಗಿ ಮಲ್ಲಸಂದ್ರ ಡೈರಿಗೆ ರವಾನೆಯಾಗುತ್ತದೆ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ದಿನೇದಿನೇ ಹೆಚ್ಚಳ ವಾಗುತ್ತಲೇ ಇದೆ.
ಯಾವತ್ತೂ ಹಾಲಿನ ಸಂಗ್ರಹ ಇಳಿಮುಖವಾಗಿಲ್ಲ. 2018-19ನೇ ಸಾಲಿನಲ್ಲಿ ದಿನವಹಿ ಸರಾಸರಿ 6,71,712 ಲೀಟರ್ ಹಾಲು ಶೇಕರಣೆಯಾಗಿರುತ್ತದೆ. 2019ರ ಜೂನ್ ತಿಂಗಳಲ್ಲಿ ಈ ಪ್ರಮಾಣ ಏರಿಕೆಯಾಗಿ 8,01,313 ಲೀಟರ್ ಹಾಲು ಶೇಕರಿಸಿ ದಾಖಲೆ ನಿರ್ಮಿಸಿತು. ಅನಂತರದ ತಿಂಗಳುಗಳಲ್ಲಿ ಹಾಲು ಸಂಗ್ರಹಣೆಯ ಪ್ರಮಾಣ ಅಧಿಕಗೊಳ್ಳುತ್ತಲೇ ಸಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ 1206 ಸಂಘಗಳಿಂದ ದಿನಂಪ್ರತಿ 7,73,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಒಕ್ಕೂಟದಿಂದ ಪ್ರತಿ ತಿಂಗಳು ಹಾಲು ಉತ್ಪಾದಕರಿಗೆ 65 ಕೋಟಿ ರೂ.ಗಳಷ್ಟು ಹಣ ಬಟವಾಡೆಯಾಗುತ್ತಿದೆ. ಉತ್ತಮ ಮಳೆಯಾಗುತ್ತಿದ್ದು, ರಾಸುಗಳಿಗೆ ಮೇವು ಪೂರೈಕೆಯಾಗುತ್ತಿರುವ ಕಾರಣ ಹಾಲಿನ ಉತ್ಪಾದನೆಯಲ್ಲಿ ಮತ್ತಷ್ಟು ಹೆಚ್ಚಳ ಕಾಣುವಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳವಾದಂತೆಲ್ಲಾ ಹೊರ ರಾಜ್ಯಗಳಿಗೂ ಹಾಲು ಸರಬರಾಜು ವಿಸ್ತರಣೆಯಾಗಿದೆ. ಮುಂಬೈ ನಗರಕ್ಕೂ ಹಾಲು ರವಾನೆಯಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕ್ಷೀರ ಕ್ರಾಂತಿಯ ಪರಿಣಾಮವಾಗಿ ಸತತ ಬರಗಾಲದ ದವಡೆಗೆ ಸಿಲುಕಿದ್ದ ರೈತಾಪಿ ಜನರು ಪರ್ಯಾಯವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮಳೆ ಇಲ್ಲದೆ ಮಳೆಯಾಶ್ರಿತ ಜಮೀನಿನಲ್ಲಿ ಬೆಳೆ ತೆಗೆಯಲಾರದವರು ಸಂಕಷ್ಟಕ್ಕೆ ಸಿಲುಕಿ ಸಿಗುವ ನೀರಾವರಿ ವ್ಯವಸ್ಥೆಯಲ್ಲಿ ಹೈನುಗಾರಿಕೆಯ ಮೊರೆ ಹೋಗಿ ತಮ್ಮ ಬದುಕನ್ನು ಕಟ್ಟಿಕೊಂಡ ಅನೇಕ ಸಂಸಾರಗಳು ನಮ್ಮ ಕಣ್ಮುಂದೆ ಸಿಗುತ್ತವೆ. ಹಾಲಿನ ಉತ್ಪಾದನೆಯಿಂದಲೇ ಅದೆಷ್ಟೋ ಕುಟುಂಬಗಳು ಬದುಕಿನ ದಾರಿ ಕಂಡುಕೊಂಡಿವೆ.
ತುಮಕೂರು ಜಿಲ್ಲೆ ಮಾತ್ರವಲ್ಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರು ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆ ಮೊರೆ ಹೋಗಿದ್ದಾರೆ. ಪ್ರೋತ್ಸಾಹ ಧನದ ಮೂಲಕ ಸರ್ಕಾರಗಳು ಹಾಲು ಉತ್ಪಾದಕರ ಕೈಹಿಡಿಯುತ್ತಾ ಬಂದಿವೆ. ಹೈನುಗಾರಿಕೆ ದಿನೇದಿನೇ ಬಲವರ್ಧನೆಯಾಗುತ್ತಿರುವ ಈ ದಿನಗಳಲ್ಲಿ ಹೊರಗಿನಿಂದ ಹೈನುಗಾರಿಕೆಯ ಉತ್ಪನ್ನಗಳು ಆಮದು ಮಾಡಿಕೊಂಡರೆ ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ದಿಕ್ಕಾಪಾಲಾಗುವ ಸಂಭವ ಇರುತ್ತದೆ. ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಬೆಲೆಗೆ ಹೋಲಿಸಿದರೆ ತೆರಿಗೆ ರಹಿತ ಹಾಲಿನ ಬೆಲೆ ಒಂದು ಲೀಟರ್ಗೆ ಐದೊ, ಹತ್ತೋ ರೂಪಾಯಿ ಕಡಿಮೆಯಾಗುತ್ತದೆ. ಇದು ಕೆಎಂಎಫ್ ಸೇರಿದಂತೆ ಎಲ್ಲ ಜಿಲ್ಲೆಗಳ ಹಾಲು ಉತ್ಪಾದನಾ ಘಟಕಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಹಾಲು ಒಕ್ಕೂಟಗಳು ಅತಂತ್ರ ಸ್ಥಿತಿಗೆ ತಲುಪುವ ಅಪಾಯಗಳು ಇಲ್ಲದಿಲ್ಲ. ಇದರ ಜೊತೆಗೆ ಪಶು ಸಂಗೋಪನೆಯನ್ನು ನೆಚ್ಚಿಕೊಂಡು ಬರುತ್ತಿರುವ ರೈತರ ಬದುಕು ಮೂರಾಬಟ್ಟೆಯಾಗಲಿದೆ.
ಜಾಗತೀಕರಣ, ಉದಾರೀಕರಣದ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಾ ಹೋದರೆ ವಿದೇಶಿ ಕಂಪನಿಗಳು ದೇಶದೊಳಗೆ ನುಸುಳುವ ಎಲ್ಲಾ ದಾರಿಗಳು ಸುಗಮವಾಗುತ್ತಿವೆ. ವಿವಿಧ ಕ್ಷೇತ್ರಗಳಿಗೆ ವಿದೇಶಿ ಕಂಪನಿಗಳು, ವಸ್ತುಗಳು ಲಗ್ಗೆ ಹಾಕುತ್ತಿವೆ. ಇದರಿಂದಾಗಿ ಸ್ಥಳೀಯ ವ್ಯಾಪಾರ ವಹಿವಾಟುಗಳ ಮೇಲೆ ಹೊಡೆದ ಬೀಳುತ್ತಿದೆ. ಅದೆಷ್ಟೋ ಸ್ಥಳೀಯ ಗೃಹ ಕೈಗಾರಿಕೆಗಳು ಮತ್ತು ಸಣ್ಣಪುಟ್ಟ ಉದ್ದಿಮೆ ವ್ಯವಹಾರಗಳು ನೆಲ ಕಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಮಾರುಕಟ್ಟೆಯನ್ನು ಪ್ರೋತ್ಸಾಹಿಸುವ ನಿರ್ಧಾರಗಳು ಹೆಚ್ಚಾಗಬೇಕು. ಈಗ ನೋಡಿದರೆ ಅಂತಹ ವ್ಯವಸ್ಥೆಗಳಿಗೆ ಬದಲಾಗಿ ಆಮದು ವ್ಯವಸ್ಥೆಯೇ ಹೆಚ್ಚಿರುವಂತೆ ಕಾಣುತ್ತಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.
ಹಾಲು ಉತ್ಪಾದನೆಯ ಸ್ಥಿತಿಯೂ ಇದೇ ಆಗಲಿದೆ. ಈಗಾಗಲೇ ಜಿಲ್ಲೆ ಮತ್ತು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸುವ ಬಗ್ಗೆ ಚರ್ಚೆಗಳು ನಡೆದಿರುವ ಹಿಂದೆಯೇ ಹಾಲು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರಕಿದರೆ ನಮ್ಮ ಗ್ರಾಮೀಣ ಸಹಕಾರಿ ವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆಗಳೇ ಹೆಚ್ಚು. ಸಹಕಾರಿ ಕ್ಷೇತ್ರ ನಮ್ಮ ನಾಡಿನಲ್ಲಿ ಇನ್ನೂ ಪರಿಪೂರ್ಣವಾಗಿ ಅಭಿವೃದ್ಧಿಕಂಡಿಲ್ಲ. ಆದರೆ ಅಭಿವೃದ್ಧಿಯ ಹಾದಿಯಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಹೈನು ಉದ್ಯಮವನ್ನೇ ತೆಗೆದುಕೊಂಡರೆ ಹಳ್ಳಿ ಹಳ್ಳಿಗಳಲ್ಲೂ ಹಾಲು ಉತ್ಪಾದನೆ ಸಹಕಾರ ಸಂಘಗಳು ತಲೆಎತ್ತಿವೆ.
ಹಸು ಸಾಕುವ, ಹಾಲು ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಹಕಾರಿ ಕ್ಷೇತ್ರದಲ್ಲಿ ಇದೊಂದು ಅದ್ಭುತ ಬೆಳವಣಿಗೆ. ಹೀಗಿರುವಾಗ ನಮ್ಮ ವ್ಯವಸ್ಥೆಯನ್ನು ಉತ್ತೇಜಿಸುವ ಬದಲು ಹೊರರಾಷ್ಟ್ರಗಳ ಉದ್ಯಮವನ್ನು ಪ್ರೋತ್ಸಾಹಿಸಿದರೆ ಸ್ಥಳೀಯ ಸಹಕಾರಿ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವುದಂತೂ ಸತ್ಯ.
ಈ ಹಿನ್ನೆಲೆಯಲ್ಲಿಯೇ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿರುವ ರಾಜ್ಯದ ಅನೇಕ ಸಂಘದ ಮಹಿಳೆಯರು ಪ್ರಧಾನಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಇಂತಹ ವ್ಯವಸ್ಥೆ ನಮಗೆ ಬೇಡ ಎನ್ನುತ್ತಿದ್ದಾರೆ. ರಾಮನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಪ್ರತಿಭಟನೆಯೂ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಹ ಇಲ್ಲಿನ ಜನರ ಭಾವನೆಯನ್ನು ಅರ್ಥಮಾಡಿಕೊಂಡು ಇಂತಹ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸ್ಥಳೀಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ.
ಮುಕ್ತ ಆಮದು ನೀತಿ ಇನ್ನೂ ಜಾರಿಯಾಗಿಲ್ಲ. ಈ ಬಗ್ಗೆ ಮಾತುಕತೆ ನಡೆದಿದೆಯಷ್ಟೆ. ಅಷ್ಟರ ವೇಳೆಗೆ ಪ್ರಧಾನ ಮಂತ್ರಿಗೆ ಇಂತಹ ಕ್ರಮಗಳು ಜಾರಿಯಾದರೆ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಈಗಾಗಲೇ ಕೆ.ಎಂ.ಎಫ್., ಅಮೂಲ್ ಸೇರಿದಂತೆ ಹಲವು ಕಡೆಗಳಿಂದ ಪ್ರಧಾನಿಗೆ ಮನವಿಗಳು ರವಾನೆಯಾಗಿವೆ. ನಾವೂ ಸಹ ಒಕ್ಕೂಟದಿಂದ ಪ್ರಧಾನಿಗೆ ಪತ್ರ ಬರೆಯಲಿದ್ದೇವೆ. ಇದನ್ನು ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಮುಕ್ತ ಆಮದು ನೀತಿ ಜಾರಿಯಾದರೆ ನಮ್ಮ ರೈತರ ಮೇಲೆ ಭಾರಿ ಪೆಟ್ಟು ಬೀಳಲಿದೆ. ಅವರ ಉತ್ಪನ್ನಗಳು ನಮ್ಮಲ್ಲಿಗೆ ಬಂದರೆ ನಮ್ಮ ಹಾಲಿನ ಪುಡಿಗೆ ಬೇಡಿಕೆ ಕಡಿಮೆಯಾಗುತ್ತದೆ. ಪರೋಕ್ಷವಾಗಿ ಹೈನು ಉದ್ಯಮದ ಮೇಲೆ ಪೆಟ್ಟು ಬೀಳಲಿದೆ.
-ಸಿ.ವಿ.ಮಹಲಿಂಗಯ್ಯ, ಅಧ್ಯಕ್ಷರು, ತುಮಕೂರು ಹಾಲು ಒಕ್ಕೂಟ.








