ಜನಸ್ನೇಹಿ ಮಾದರಿ ಬಸ್ ನಿಲ್ದಾಣ ನಿರ್ಮಾಣ..!

ತುಮಕೂರು
ವಿಶೇಷ ವರದಿ:ರಾಕೇಶ್.ವಿ.
      ತುಮಕೂರು ನಗರದಲ್ಲಿ ಟೂಡಾ ವತಿಯಿಂದ ನಿರ್ಮಿಸಲಾದ ಅನೇಕ ಬಸ್ ನಿಲ್ದಾಣಗಳಿವೆ. ಜೊತೆಗೆ ಕೆಲವೊಂದು ಬಸ್ ನಿಲ್ದಾಣಗಳ ಜವಾಬ್ದಾರಿಯನ್ನು ಪಾಲಿಕೆಯವರು ವಹಿಸಿಕೊಂಡಿದ್ದಾರೆ. ಆದರೂ ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನೂತನವಾಗಿ ಜನಸ್ನೇಹಿ ಮಾದರಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ದು, ಇತ್ತೀಚೆಗೆ ಉದ್ಘಾಟನೆ ಕೂಡ ಆಗಿದೆ.
      ನಗರದ ತುಮಕೂರು ವಿಶ್ವವಿದ್ಯಾಲಯದ ಮುಂಭಾಗ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾದ ಮಾದರಿ ಬಸ್ ನಿಲ್ದಾಣ ನವೀನ ಮಾದರಿಯಾಗಿದ್ದು, ಸಂಪೂರ್ಣ ಜನಸ್ನೇಹಿಯಾಗಿದೆ. ಪರಿಸರಕ್ಕೆ ಹಾನಿಯಾಗದೆ, ಸೌರಶಕ್ತಿಯ ಬಳಕೆ ಮಾಡಿಕೊಂಡು ಸಂಪೂರ್ಣ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿದ್ದು, ಸುರಕ್ಷತೆಯಿಂದ ಕೂಡಿದೆ. 
ನಿರ್ಮಾಣದ ವೆಚ್ಚ
      ವಿವಿ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಮಾದರಿ ಬಸ್ ನಿಲ್ದಾಣವನ್ನು 18 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಓಡಾಡಲು ಅನುಕೂಲವಾಗುವಂತೆ ಬಟನ್ ಮಾದರಿಯ ಟ್ಯಾಕ್‍ಟೈಲ್ಸ್‍ನ್ನು ಬಳಕೆ ಮಾಡಿ ನೆಲಹಾಸು ಹಾಕಲಾಗಿದೆ. ಈ ನೆಲಹಾಸಿನಲ್ಲಿ ಓಡಾಡುವಾಗ ಜಾರದಂತೆ, ಕೋಲಿನ ಸಹಾಯದಿಂದ ನಡೆಯುವವರಿಗೆ ಹಿಡಿತ ಸಿಗುವ ರೀತಿಯಲ್ಲಿ ಹಾಕಲಾಗಿದೆ. ಇದರ ಮೇಲೆ ವಿಶೇಷಚೇತನರು, ಅಂಗವಿಕಲರು ಕೂಡ ನಿರ್ಭೀತಿಯಿಂದ ಓಡಾಡಬಹುದು. ಅಲ್ಲದೆ ಮೇಲ್ಭಾಗದಲ್ಲಿ ಎಸಿಪಿ ಶೀಟ್‍ಗಳನ್ನು ಹಾಕಲಾಗಿದ್ದು. ಈ ಶೀಟ್‍ಗಳು ಬಿಸಿಲು, ಮಳೆ ಸೇರಿದಂತೆ ಯಾವುದೇ ಹವಾಮಾನಕ್ಕೂ ಹೊಂದಿಕೊಂಡು ಹಾಳಾಗದಂತೆ ಸುರಕ್ಷಿತವಾಗಿರುತ್ತವೆ.
ಕಾಫಿ ಶಾಪ್ ನಿರ್ಮಾಣ
     ಬಸ್ ನಿಲ್ದಾಣದಲ್ಲಿ ಎಡಭಾಗದಲ್ಲಿ ಕಾಫಿ ಶಾಪ್ ಒಂದನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿ ತಂಪು ಪಾನೀಯಗಳು ದೊರೆಯುತ್ತವೆ. ಅಲ್ಲದೆ ಪುಸ್ತಕಗಳು, ಲೇಖನಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಸ್ತುಗಳು ಸೇರಿದಂತೆ ಇನ್ನಿತರ ಪಾಠೋಪಕರಣಗಳು ಅಲ್ಲಿ ದೊರೆಯುತ್ತವೆ. ಅಲ್ಲದೆ ಇಲ್ಲಿ ಕಾಫಿ ಶಾಪ್ ನಡೆಸುವವರೇ ಈ ಬಸ್ ನಿಲ್ದಾಣದಲ್ಲಿನ ಸ್ವಚ್ಛತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿದೆ. 
ಟೆಂಡರ್ ಮೂಲಕ ಮಳಿಗೆ ವಿತರಣೆ
     ಮಾದರಿ ಬಸ್ ನಿಲ್ದಾಣ ಸೇರಿದಂತೆ ಉಪ್ಪಾರಹಳ್ಳಿ ಮೇಲ್ಸೇತುವೆಯ ಕೆಳಭಾಗದಲ್ಲಿ ನಿರ್ಮಾಣ ಮಾಡಲಾದ ಹಸಿರೀಕರಣ ಹಾಗೂ ಪೆಟ್ಟಿಗೆ ಮಳಿಗೆಗಳನ್ನು ಮಹಾನಗರ ಪಾಲಿಕೆಗೆ  ಒಪ್ಪಿಸಲಾಗುವುದು. ಅದಾದ ನಂತರ ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಟೆಂಡರ್‍ನ್ನು ಕರೆದು, ಟೆಂಡರ್ ಮೂಲಕ ಈ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ.
ವಿವಿಧ ಸೌಲಭ್ಯಗಳು
      ಬಸ್ ನಿಲ್ದಾಣದಲ್ಲಿ ಉಚಿತ ಇಂಟರ್‍ನೆಟ್ ಸೌಲಭ್ಯ ದೊರೆಯುತ್ತದೆ. ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವೈಫೈ ಸೌಲಭ್ಯ ಅಳವಡಿಸಲಾಗಿದೆ. ಅಲ್ಲದೆ ಚಾರ್ಜಿಂಗ್ ಪಾಯಿಂಟ್ ಒಂದನ್ನು ಅಳವಡಿಸಲಾಗಿದ್ದು, ಅಲ್ಲಿ ಮೊಬೈಲ್, ಲ್ಯಾಪ್‍ಟಾಪ್ ಸೇರಿದಂರೆ ವಿದ್ಯುಚ್ಛಾಲಿತ ಸಾಮಗ್ರಿಗಳಿಗೆ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಮಾಹಿತಿಯ ಬೋರ್ಡ್‍ಅನ್ನು ಅಳವಡಿಸಿದ್ದು, ಅದರಲ್ಲಿ ಯಾವ ಮಾರ್ಗದಲ್ಲಿ ಯಾವ ಬಸ್ ಸಂಚರಿಸುತ್ತದೆ ಎಂಬ ಮಾಹಿತಿಯೊಂದಿಗೆ ಸಂಚಾರದ ಬಗೆಗಿನ ಹೆಚ್ಚಿನ ಮಾಹಿತಿ ಪ್ರದರ್ಶನವಾಗುತ್ತದೆ. 
ರಕ್ಷಣೆಗೆ ಆದ್ಯತೆ
    ಬಸ್ ನಿಲ್ದಾಣದಲ್ಲಿ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎರಡು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಲಿದ್ದು, ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‍ನಲ್ಲಿ ವೀಕ್ಷಿಸಲಾಗುತ್ತದೆ. ಅಲ್ಲದೆ ಬಸ್ ನಿಲ್ದಾಣದಲ್ಲಿ ಜೋಡಿಸಲಾದ ಪ್ಯಾನಿಕ್ ಬಟನ್ ಮೂಲಕ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಅದನ್ನು ಐಸಿಎಂಸಿಸಿ ಮೂಲಕ ತಕ್ಷಣ ಕಂಡು ಹಿಡಿಯಬಹುದಾಗಿದೆ. ಕಳ್ಳತನ, ದರೋಡೆಯಂತಹ ಘಟನೆಗಳು ನಡೆದಾಗ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ರವಾನೆಯಾಗುವ ಸೌಲಭ್ಯ ಅಳವಡಿಸಲಾಗಿದೆ. 
20 ಬಸ್ ನಿಲ್ದಾಣ ನಿರ್ಮಾಣ
     ತುಮಕೂರು ವಿವಿ ಬಳಿ ನಿರ್ಮಿಸಲಾದಂತಹ ಮಾದರಿ ಜನಸ್ನೇಹಿ ಬಸ್ ನಿಲ್ದಾಣದಂತೆ ನಗರದಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಅವಶ್ಯಕತೆಗಳಿಗನುಗುಣವಾಗಿ 20 ಕಡೆ ನಿರ್ಮಾಣ ಮಾಡಲಾಗುವುದು. ಉದಾಹರಣೆಗೆ ಕುಣಿಗಲ್ ರಸ್ತೆ, ಶೆಟ್ಟಿಹಳ್ಳಿ, ಸದಾಶಿವನಗರ, ಎಂಜಿ ರಸ್ತೆ ಸೇರಿದಂತೆ ಎಬಿಡಿ ( ಪ್ರದೇಶಾಭಿವೃದ್ಧಿ) ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಇದ್ದಂತಹ ಪಾಲಿಕೆಯ ಬಸ್ ನಿಲ್ದಾಣಗಳನ್ನು ಮರುನವೀಕರಣ ಮಾಡುವ ಉದ್ದೇಶ ಹೊಂದಿದ್ದು, ಅಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಅಭಿವೃದ್ಧಿ ಮಾಡಲಾಗುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap