ದಾವಣಗೆರೆ
ತೀವ್ರವಾಗಿ ಕುಸಿಯುತ್ತಿರುವ ಆರ್ಥಿಕ ಬಿಕ್ಕಟ್ಟು ಖಂಡಿಸಿ ಹಾಗೂ ಜತನೆಯನ್ನು ಸಂಕಷ್ಟದ ಕೂಪಕ್ಕೆ ತಳ್ಳುತ್ತಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಸಿಪಿಐ ಹಾಗೂ ಸಿಪಿಐ(ಎಂ) ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಎಡ ಪಕ್ಷಗಳ ಕಾರ್ಯಕರ್ತರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ, ದೇಶದ ಅರ್ಥ ವ್ಯವಸ್ಥೆಯು ದಿನೇ, ದಿನೇ ಕುಸಿಯುತ್ತಿದ್ದು, ದೇಶ ಅತ್ಯಂತ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ. ನಿರುದ್ಯೋಗ ಪ್ರಮಾಣ ಕಳೆದ ಕೆಲ ದಶಕಗಳಿಗಿಂತಲೂ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದ ರೈತರು, ಕೃಷಿ ಕೂಲಿ ಕಾರ್ಮಿಕರು, ಅತಿವೃಷ್ಟಿ, ಅನಾವೃಷ್ಟಿ, ನೆರೆ ಹಾವಳಿಗೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿದ್ದರೂ ಸಹ ಕೇಂದ್ರ ಸರ್ಕಾರವು ನಮ್ಮ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡಿಲ್ಲ. ಪ್ರವಾಹ ಪೀಡಿತ ನೆರೆ ಸಂತ್ರಸ್ತರಿಗೆ ಸ್ಪಂದಿಸುವ ವ್ಯವಧಾನವೂ ಕೇಂದ್ರಕ್ಕೆ ಇಲ್ಲವಾಗಿದೆ. ರೈತರ ಸರಣಿ ಆತ್ಮಹತ್ಯೆ ಮುಂದುವರೆಯುತ್ತಿದ್ದರೂ ರೈತರ ಸಂಕಷ್ಟ ಪರಿಹರಿಸುತ್ತಿಲ್ಲ. ಆತ್ಯಹತ್ಯೆಗೆ ಪ್ರಮುಖ ಕಾರಣವಾಗಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವತ್ತಲೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ದುರಾಡಳಿತದಿಂದ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿದೆ. ತಕ್ಷಣವೇ ಉದ್ಯೋಗಾವಕಾಶ ನಿರ್ಮಾಣಕ್ಕೆ ಸಾರ್ವಜನಿಕ ಹೂಡಿಕೆ ಹೆಚ್ಚಿಸಬೇಕು. ನಿರುದ್ಯೋಗಿ ಯುವ ಜನರಿಗೆ ಭತ್ಯೆ ನೀಡಬೇಕು. 18 ಸಾವಿರ ರೂ.ಗಳನ್ನು ಕನಿಷ್ಟ ವೇತನವನ್ನಾಗಿ ನಿಗದಿ ಪಡಿಸಬೇಕೆಂದು ಅವರು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಮುಖಂಡ ಕೆ.ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ದೇಶದಲ್ಲಿ ಪ್ರಸ್ತುತ ಸಂಭವಿಸಿರುವ ಆರ್ಥಿಕ ಹಿಂಜರಿತದಿಂದ ಕಾರ್ಮಿಕರು, ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ರಂಗದಲ್ಲಿ ಶೋಷಣೆಯ ವ್ಯವಸ್ಥೆ ಹೆಚ್ಚುತ್ತಿದೆ. ವಾಹನ ಮಾರಾಟದಿಂದ ಜವಳಿ ಉದ್ದಿಮೆ, ಟೀ, ಬಿಸ್ಕಿಟ್ ವ್ಯಾಪಾರವೂ ಕುಸಿಯುವಷ್ಟರ ಮಟ್ಟಿಗೆ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ.
ಕೇಂದ್ರ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಮೊದಲು ನಿಲ್ಲಿಸಬೇಕು. ರಕ್ಷಣೆ, ಕಲ್ಲಿದ್ದಲು ವಲಯದಲ್ಲಿ ಶೇ.100 ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿರುವುದನ್ನು ರದ್ದುಗೊಳಿಸಬೇಕು. ಉದ್ಯೋಗ ಖಾತರಿ ಕೂಲಿ ಬಾಕಿ ಕೊಡಲು ಮತ್ತು ಕನಿಷ್ಟ 200 ದಿನ ಕೆಲಸ ನೀಡಲು ಕ್ರಮ ಕೈಗೊಳ್ಳಬೇಕು ಹಿರಿಯ ನಾಗರೀಕರು, ವಿಧವೆಯವರಿಗೆ ನೀಡುವ ಮಾಸಿಕ ಪಿಂಚಣಿ 3 ಸಾವಿರ ರು.ಗೆ ಹೆಚ್ಚಿಸಬೇಕು. ಬಂಡವಾಳ ಶಾಹಿ, ಕಾರ್ಪೋರೇಟ್, ಖಾಸಗೀಕರಣ ನೀತಿ ಕೈಬಿಟ್ಟು, ಜನಪರ ಆರ್ಥಿಕ ನೀತಿ ಜಾರಿಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಡ ಪಕ್ಷಗಳ ಮುಖಂಡರುಗಳಾದ ಆನಂದರಾಜ್, ಟಿ.ವಿ.ರೇಣುಕಮ್ಮ, ಎಚ್.ಜಿ.ಉಮೇಶ, ಎನ್.ಟಿ.ಬಸವರಾಜ, ಆವರಗೆರೆ ಚಂದ್ರು, ಆವರಗೆರೆ ವಾಸು, ಸುರೇಶ ಯರಗುಂಟೆ, ಕೆ.ಎಚ್.ಆನಂದರಾಜ, ಈ.ಶ್ರೀನಿವಾಸ, ರಂಗನಾಥ್, ಭರಮಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ