ದೊಡ್ಡ ಉಳ್ಳಾರ್ತಿ : ಮೋಟಾರ್ ಬೈಕ್‍ಗೆ ಡಿಕ್ಕಿಹೊಡೆದ ಖಾಸಗಿ ಬಸ್

ಚಳ್ಳಕೆರೆ

      ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮದ ಬಳಿ ಮೋಟಾರ್ ಬೈಕ್‍ಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಾಲಕ ಚನ್ನಗಾನಹಳ್ಳಿ ಗ್ರಾಮದ ಜಗದೀಶ್‍ನಾಯ್ಕ(26) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಸವಾರ ಶ್ರೀನಿವಾಸ್(25) ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ.

     ಮೃತ ಜಗದೀಶ್‍ನಾಯ್ಕ ಇತ್ತೀಚಿಗಷ್ಟೇ ತನ್ನ ಕಾನೂನು ಪದವಿಯನ್ನು ಮುಗಿಸಿ ವಕೀಲನಾಗಿ ತನ್ನ ಸೇವೆಯನ್ನು ಪ್ರಾರಂಭಿಸಲು ಚಿತ್ರದುರ್ಗದ ನ್ಯಾಯಾಲಯಕ್ಕೆ ತಮ್ಮ ಮೂಲ ದಾಖಲಾತಿಗಳೊಂದಿಗೆ ನೊಂದಾಣೆ ಮಾಡಿಸಲು ತೆರಳುವಾಗಿ ಚನ್ನಗಾನಹಳ್ಳಿ ಕ್ರಾಸ್‍ನಿಂದ ತನ್ನ ಬೈಕ್‍ಮೂಲಕ ದೊಡ್ಡ ಉಳ್ಳಾರ್ತಿ ರಸ್ತೆಗೆ ಬಂದು ಸೇರುವ ಸಂದರ್ಭದಲ್ಲಿ ರಭಸವಾಗಿ ಬಂದ ಖಾಸಗಿ ಬಸ್ ಇವರ ಬೈಕ್‍ಗೆ ಡಿಕ್ಕಿಹೊಡೆದು ಬೈಕ್‍ನ್ನು ಸುಮಾರು ಅಡಿಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಹಿಂಬದಿ ಕುಳಿತಿದ್ದ ಅದೇ ಗ್ರಾಮದ ಶ್ರೀನಿವಾಸನ ಎರಡೂ ಕಾಲುಗಳು ಜಖಂಗೊಂಡಿವೆ.

     ಸುದ್ದಿ ತಿಳಿದ ಕೂಡಲೇ ಜಗದೀಶನ ಪೋಷಕರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಬಸ್ ಚಾಲಕನ ಅಜಾಗರೂಕತೆಯ ಬಗ್ಗೆ ಕೆಂಡಾಮಂಡಲವಾದರು. ಅಪಘಾತ ನಡೆಸಿದ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸುದ್ದಿ ತಿಳಿದ ತಳಕು ಪೊಲೀಸರು ಗಾಯಾಳುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ಧಾರೆ.

    ಅಪಘಾತದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚನ್ನಗಾನಹಳ್ಳಿ ಗ್ರಾಮದ ಯುವಮುಖಂಡ ರಾಮಾಂಜನೇಯ, ಈ ಭಾಗದಲ್ಲಿ ನಿರಂತರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಕಾರಣ ಇಲ್ಲಿ ಓಡಾಡುವ ಎಲ್ಲಾ ವಾಹನಗಳು ವೇಗದಿಂದ ಚಲಿಸುತ್ತಿದ್ದು, ಯಾವುದೇ ನಿರ್ಬಂಧವಿರುವುದಿಲ್ಲ. ರಸ್ತೆಯೂ ಸಹ ಕಳಪೆಯಿಂದ ಕೂಡಿದ್ದು, ಅನೇಕ ಕಡೆ ತಗ್ಗುಗಳು ಇದ್ದು, ರಸ್ತೆಯ ತಿರುವಿನಲ್ಲಿ ಬೈಕ್ ಚಾಲಕರು ತೊಂದರೆ ಅನುಭವಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಕ್ಷೇತ್ರವಾದ ದೊಡ್ಡ ಉಳ್ಳಾರ್ತಿ ಭಾಗದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕಿದೆ. ಈ ಭಾಗದ ರಸ್ತೆಗಳು ಅಗಲೀಕರಣಗೊಂಡಲ್ಲಿ ಮಾತ್ರ ಇಂತಹ ಅಪಘಾತಗಳನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ. ತಳಕು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link