ಅಪೌಷ್ಟಿಕತೆಗೆ ದೇಸೀ ಪದ್ಧತಿಯೇ ಪರಿಹಾರ

ದಾವಣಗೆರೆ
    ದೇಶದಲ್ಲಿನ ಅಪೌಷ್ಟಿಕತೆ, ಹಸಿವು ನಿವಾರಣೆಗೆ ಸತ್ವಯುತ ಪಾರಂಪರಿಕ ಆಹಾರ ಪದ್ಧತಿಯೊಂದೇ ಶಾಶ್ವತ ಪರಿಹಾರ ಎಂದು ಮೈಸೂರಿನ ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಹಿರಿಯ ಪ್ರಧಾನ ವಿಜ್ಞಾನಿ ಡಾ.ಅನು ಅಪ್ಪಯ್ಯ ಅಭಿಪ್ರಾಯಪಟ್ಟರು.
     ನಗರದ ಹೊರವಲಯದಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಎಂಬಿಎ ಸಭಾಂಗಣದಲ್ಲಿ ಬುಧವಾರ ಆಹಾರ ತಂತ್ರಜ್ಞಾನ ವಿಭಾಗದಿಂದ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಮತ್ತು ಆಹಾರ ತಂತ್ರಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಹಸಿವು ಮತ್ತು ಅಪೌಷ್ಟಿಕತೆಯು ಭಾರತವನ್ನು ತೀವ್ರವಾಗಿ ಕಾಡುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಸ್ಥಳೀಯ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳದಿರುವುದೇ ಇಂತಹ ಎಲ್ಲ ಸಮಸ್ಯೆಗಳಿಗೆ ಮೂಲಕಾರಣವಾಗಿದೆ.
     ನಮ್ಮ ಪಾರಂಪರಿಕ ಆಹಾರ ಪದ್ಧತಿಯು ಆರೋಗ್ಯ ವಿಜ್ಞಾನಕ್ಕೆ ಅನುಗುಣವಾಗಿದೆ. ಈ ಆಹಾರ ಪದ್ಧತಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿ, ಕಾಳು ಮತ್ತಿತರೆ ಬೆಳೆಗಳಲ್ಲಿರುವ ಪೌಷ್ಟಿಕಾಂಶಗಳು ಆರೋಗ್ಯಕ್ಕೆ ಸಹಕಾರಿಯಾಗಿದ್ದವು. ಆದರೆ ಆಧುನಿಕತೆ ಪ್ರಭಾವ ಹಾಗೂ ಪಾಶ್ಚಿಮಾತ್ಯ ಸಂಸ್ಕøತಿಯ ಅನುಕರಣೆಯಿಂದ ಇಂದು ಫಾಸ್ಟ್ ಫುಡ್ ವ್ಯಾಮೋಹ ಹೆಚ್ಚಾಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
     ದೇಶದಲ್ಲಿ ಅಪೌಷ್ಟಿಕತೆ ಮತ್ತು ಹಸಿವು ನಿವಾರಣೆ ನಿಟ್ಟಿನಲ್ಲಿ ಮಕ್ಕಳಲ್ಲಿ ಶೈಕ್ಷಣಿಕ ಉನ್ನತಿಯ ಉದ್ದೇಶದಿಂದ ಸರ್ಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ಕನಿಷ್ಟ 500 ಕಿಲೋ ಕ್ಯಾಲೊರಿಯಷ್ಟು ಪೌಷ್ಟಿಕಾಂಶ ಒದಗಿಸಬೇಕು. ಆದರೆ ಈಗಿನ ಅನುದಾನದಲ್ಲಿ ಪ್ರತಿ ವಿದ್ಯಾರ್ಥಿಗೆ ಅಷ್ಟು ಪೋಷಕಾಂಶ ಸಿಗುತ್ತಿಲ್ಲ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಪೋಷಕಾಂಶ ಒದಗಿಸುವ ಆಹಾರವನ್ನು ಸಂಶೋಧಿಸುವ ಅಗತ್ಯವಿದೆ.
     ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಪೌಷ್ಟಿಕ ಆಹಾರ ಮತ್ತು ಪೋಷಕಾಂಶಗಳ ಸಂಶೋಧನೆಗೆ ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ್ ಮಾತನಾಡಿ, ಆಹಾರವು ಪ್ರತಿಯೊಬ್ಬರ ಹಕ್ಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಸಿವಿನಿಂದ ಬಳಲುವ ಪರಿಸ್ಥಿತಿ ಇರಬಾರದು.
 
     ಈ ಕಾರಣಕ್ಕಾಗಿಯೇ ಎಲ್ಲ ದೇಶಗಳು ಆಹಾರ ಸಂರಕ್ಷಣೆ, ಪೂರೈಕೆಗೆ ಆದ್ಯತೆ ನೀಡುತ್ತಿವೆ. ನಮ್ಮ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರವಿದ್ದರೂ, ಸಮರ್ಪಕ ನಿರ್ವಹಣೆ ಕೊರತೆಯಿಂದ ಆಹಾರ ವ್ಯರ್ಥವಾಗುತ್ತಿದೆ. ಊಟ ಮಾಡುವಾಗ ಆಹಾರವನ್ನು ತಟ್ಟೆಯಲ್ಲಿ ಉಳಿಸಿ, ಅನಗತ್ಯವಾಗಿ ವ್ಯರ್ಥ ಮಾಡುವ ಪ್ರವೃತ್ತಿ ಮೊದಲು ನಿಲ್ಲಬೇಕು. ಈ ಆಹಾರ ಜಾಗೃತಿ ಪ್ರತಿಯೊಬ್ಬರ ಮನೆ, ಮನದಿಂದಲೇ ಆರಂಭವಾಗಬೇಕು ಎಂದು ಆಶಿಸಿದರು.
      ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಹೆಚ್.ಆರ್.ಭಾರ್ಗವ್, ಪ್ರೊ.ಶಿಶುಪಾಲ, ಸಿಂಡಿಕೇಟ್ ಸದಸ್ಯ ಜನಪ್ರಕಾಶ್ ಕೊಂಡಜ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಹೆಚ್.ಎಸ್.ರವಿಕುಮಾರ ಪಾಟೀಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ.ಜೆ.ಶಂಕರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link