ಪಡಸಾಲೆಯಲ್ಲಿ ಸೇವೆಗಿಂತಾ ಸಮಸ್ಯೆಗಳೇ ಹೆಚ್ಚು..!

ತುಮಕೂರು

   ಸರ್ಕಾರದ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಸರಳವಾಗಿ ಒದಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪಡಸಾಲೆ ವ್ಯವಸ್ಥೆ ಮುಂದುವರೆದಿದೆ. ತುಮಕೂರು ತಾಲ್ಲೂಕು ಕಚೇರಿಯಲ್ಲಿ ಆರಂಭಗೊಂಡ ಪಡಸಾಲೆ ಆರಂಭದಲ್ಲಿ ಶಿಸ್ತಿನಿಂದಲೇ ನಡೆಯಿತು, ಬರುಬರುತ್ತಾ ಸೇವಾವ್ಯವಸ್ಥೆ ಮಾಯವಾಗತೊಡಗಿದೆ.

     ಪಡಸಾಲೆಯಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ವೃದ್ದಾಪ್ಯ ವೇತನ, ವಿಧವಾ ವೇತನ, ಆಧಾರ್ ನೊಂದಣಿ, ತಿದ್ದುಪಡಿ ಮತ್ತಿತರ ಎಂಟು ಸೇವೆಗಳನ್ನು ಅರ್ಜಿದಾರರಿಗೆ ಒದಗಿಸಲು ಇಲ್ಲಿ ಎಂಟು ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಆರಂಭದಲ್ಲಿ ವ್ಯವಸ್ಥಿತವಾಗೇ ನಡೆಯುತ್ತಿದ್ದ ಸೇವಾ ಕಾರ್ಯ ಆಡಳಿತದ ಹಿಡಿತ ತಪ್ಪುತ್ತಾ ದಿಕ್ಕು ತಪ್ಪಿದೆ. ಎಲ್ಲವೂ ಬೇಕಾಬಿಟ್ಟಿಯಂತಾಗಿವೆ. ಸಾರ್ವಜನಿಕರಿಗಾಗಿ ಅಲ್ಲಿ ವ್ಯವಸ್ಥೆ ಮಾಡಿದ್ದ ಅನುಕೂಲಗಳೂ ಒಂದೊಂದಾಗಿ ಮಾಯವಾಗುತ್ತಿವೆ. ಈ ಎಲ್ಲಾ ಬದಲಾವಣೆಗಳು ಮಧ್ಯವರ್ತಿಗಳಿಗೆ ಅನುವು ಮಾಡಿಕೊಟ್ಟಂತಾಗಿವೆ

      ಸೇವೆ ಪಡೆಯಲು ಹಳ್ಳಿಗಳಿಂದ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಪಡಸಾಲೆ ಆವರಣದಲ್ಲಿ ಸ್ಥಾಪಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ. ಇಲ್ಲಿ ಶಿಸ್ತುಬದ್ದವಾಗಿ ಜನ ಸಾಲಿನಲ್ಲಿ ನಿಂತು ಸೇವೆ ಪಡೆಯಲು ಹಾಕಿದ್ದ ಸ್ಟೀಲ್ ರೈಲಿಂಗ್ಸ್ ಕೆಲವು ಕಳವಾಗಿವೆ, ಕೆಲವು ಅಲ್ಲೇ ಕಿತ್ತು ಬಿದ್ದಿವೆ, ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ.

       ಅರ್ಜಿದಾರರಿಗೆ ಸಮರ್ಪಕ ಸೇವೆ ದೊರೆಯುತ್ತಿದೆಯೆ ಅಥವಾ ಮಧ್ಯವರ್ತಿಗಳು ಇಲ್ಲಿ ಪ್ರವೇಶಿಸಿದ್ದಾರೆಯೆ ಎಂಬುದನ್ನು ನಿಗಾವಹಿಸಲು ಅಳವಡಿಸಿದ್ದ ಸಿಸಿ ಕ್ಯಾಮರಾಗಳು ಸ್ಥಗಿತಗೊಂಡಿವೆ. ಸೇವಾ ಕೌಂಟರ್ ಆಪರೇಟರ್ ಈ ಮೊದಲು ಧರಿಸುತ್ತಿದ್ದ ಸಮವಸ್ತ್ರ ಇಲ್ಲವಾಗಿವೆ. ಮಿನಿ ವಿಧಾನ ಸೌಧದ ಕಚೇರಿ ಆವರಣಕ್ಕೆ ಜಿಲ್ಲಾಧಿಕಾರಿ ವಾಹನ ಸೇರಿದಂತೆ ಎಲ್ಲಾ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಇದಕ್ಕಾಗಿ ವಾಹನಗಳು ಒಳ ಪ್ರವೇಶಿಸದಂತೆ ಗ್ರಿಲ್ ಅಳವಡಿಸಲಾಗಿತ್ತು. ಈಗ ಆ ತಡೆಯನ್ನು ಕಿತ್ತು ಹಾಕಲಾಗಿದ್ದು ವಾಹನಗಳು ಆವರಣದೊಳಗೆ ಬಂದು ನಿಲ್ಲುತ್ತಿವೆ. ಪಡಸಾಲೆ ಆವರಣ ಇಲಾಖೆಗಳು, ಸಿಬ್ಬಂದಿ ಹಾಗೂ ಸಾರ್ವಜನಿಕ ವಾಹನಗಳ ಪಾರ್ಕಿಂಗ್ ಆಗಿಬಿಟ್ಟಿದೆ.

      ಈ ಮೊದಲು ಸ್ವಚ್ಚವಾಗಿದ್ದ ಪಡಸಾಲೆ ಆವರಣದಲ್ಲಿ ಈಗ ಗಿಡಗೆಂಟೆ ಬೆಳೆದಿವೆ. ಸಾರ್ವಜನಿಕರು ಕುಳಿತುಕೊಳ್ಳಲು ಹಾಕಿದ್ದ ಬೆಂಚುಗಳ ಸುತ್ತ ಗಿಡ ಬೆಳೆದು ಜನ ಆ ಬೆಂಚುಗಳನ್ನು ಬಳಸದಂತಾಗಿದೆ. ಸ್ಮಾರ್ಟ್ ಸಿಟಿ, ಸ್ವಚ್ಚ ಭಾರತ್ ವ್ಯವಸ್ಥೆ ಡೀಸಿ ಕಚೇರಿ ಆವರಣದಲ್ಲೇ ಪಾಲನೆಯಾಗುತ್ತಿಲ್ಲ, ಪಡಸಾಲೆ ಆವರಣದಲ್ಲಿ ಮಳೆಗಾಲದಲ್ಲಿ ನೀರು ನಿಂತು ಕೆಸರಲ್ಲಿ ಓಡಾಡುವಂತಾಗಿದೆ.

      ತುಮಕೂರು ತಾಲ್ಲೂಕು ಕಚೇರಿಯ ಪಡಸಾಲೆ ಆರಂಭದಲ್ಲಿ ಶಿಸ್ತಿನಿಂದ ನಡೆದು ಮಾದರಿಯಾಗಿತ್ತು. ಸೇವೆ, ಸ್ವಚ್ಚತೆಗೆ ಗಮನ ಕೊಡಲಾಗಿತ್ತು. ಈಗ ಎಲ್ಲವೂ ಅವ್ಯವಸ್ಥೆ. ನಿಗಾ ವಹಿಸಬೇಕಾಗಿದ್ದ ಜಿಲ್ಲಾಧಿಕಾರಿ, ತಹಶೀಲ್ದಾರರು ನಿರ್ಲಕ್ಷ ಮಾಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

      ಹಿಂದೆ ಪಡಸಾಲೆ ಕೌಂಟರಿನಲ್ಲಿ ಅರ್ಜಿ ಕೊಟ್ಟರೆ ಅರ್ಜಿ ಸ್ವೀಕೃತವಾಗಿದೆ ಎಂಬ ಮೆಸೇಜ್ ಅರ್ಜಿದಾರರ ಮೊಬೈಲಿಗೆ ಬರುತ್ತಿತ್ತು. ಕೆಲಸ ಆದ ಕೂಡಲೇ ನಿಮ್ಮ ಕೆಲಸ ಆಗಿದೆ, ಬಂದು ದಾಖಲೆಗಳನ್ನು ಪಡೆಯಿರಿ ಎಂಬ ಮೆಸೇಜ್ ಬರುತ್ತಿತ್ತು. ಈಗ ಯಾವುದೂ ಇಲ್ಲ. ಈ ಸೇವೆಗಳು ಸಕಾಲ ಯೋಜನೆಗಳ ವ್ಯಾಪ್ತಿಯಲ್ಲಿದ್ದರೂ ಅರ್ಜಿದಾರರ ಕೆಲಸ ಸಕಾಲದಲ್ಲಿ ಆಗುತ್ತಿಲ್ಲ.

     ನಿಗಧಿತ ಕಾಲದೊಳಗೆ ಸೇವೆ ಒದಗಿಸದಿದ್ದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗೆ ದಂಡ ವಿಧಿಸಲು ಅವಕಾಶವಿದೆ. ಆದರೆ, ಇಲ್ಲಿ ಮಾನೀಟರ್ ಮಾಡುವವರು ಇಲ್ಲದ ಕಾರಣ ಸಕಾಲ ಅಕಾಲದಂತಾಗಿದೆ. ಜನ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಜೊತೆಗೆ ಇಲ್ಲಿನ ನಿರ್ಲಕ್ಷತೆ, ಅವ್ಯವಸ್ಥೆಗಳು ಮಧ್ಯವರ್ತಿಗಳು ಬಲಾಢ್ಯರಾಗಲು ಕಾರಣವಾಗಿವೆ ಎಂಬುದು ಸಾರ್ವಜನಿಕರ ದೂರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link