ಮಿಡಿಗೇಶಿ
ಆಂಧ್ರದ ಮಡಕಶಿರಾ ತಾಲ್ಲೂಕಿನ ಹರೇಸಂದ್ರ ಗ್ರಾಮದ ಮಹಿಳೆಯೋರ್ವಳಿಗೆ ಮಧುಗಿರಿ ತಾಲ್ಲೂಕಿನ ರೆವೆನ್ಯೂ ಇಲಾಖೆ, ಅರಣ್ಯ ಇಲಾಖಾಧಿಕಾರಿಗಳವರ ಬೆಂಬಲದೊಂದಿಗೆ ಅದರಲ್ಲೂ ಅರಣ್ಯ ಇಲಾಖೆಗೆ ಸೇರಿದ ಗೋಮಾಳದ ಜಮೀನನ್ನು ಸರ್ವೆ ನಂ 46, 47, 48 ಹಾಗೂ 49 ರಲ್ಲಿನ ಮೂವತ್ತು ಎಕರೆ ಜಮೀನಿನಲ್ಲಿ 3.20 ಎಕರೆ ಭೂಮಿಯನ್ನು ನಾಲ್ಕಾರು ವರ್ಷಗಳ ಹಿಂದೆಯೇ ನೀಡಿ ಆಕೆ ಹೆಸರಿಗೆ ಖಾತೆ ಪಹಣಿ ಮಾಡಿಕೊಡಲಾಗಿದೆ ಎಂದು ಗೊತ್ತಾಗಿದೆ.
ಸದರಿ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಿದ್ದು ಸರ್ಕಾರ ನೀಡುವ ಪಂಪು ಮೋಟಾರ್‍ಗಳನ್ನು ಉಚಿತವಾಗಿ ಪಡೆದಿರುತ್ತಾರೆ ಹಾಗೂ ಆ ಭೂಮಿಯಲ್ಲಿ ಬ್ಯಾಂಕುಗಳಲ್ಲಿ ಸಾಲವನ್ನು ಸಹ ಪಡೆದಿರುತ್ತಾರೆ. ಅದೇ ಭೂಮಿಯಲ್ಲ್ಲಿ ಶೇಂಗಾ, ತೊಗರಿ, ಹಳಸಂದೆ, ಜೋಳ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿರುತ್ತಾರೆ.
ಆಂಧ್ರರಾಜ್ಯದ ಮಡಕಶಿರಾ ತಾಲ್ಲೂಕಿನ ಹರೇಸಂದ್ರ ಗ್ರಾಮದ ಮಹಿಳೆ ಚೌಡಮ್ಮ (ಈಕೆಯು ನಾಗಲಾಪುರ ಗ್ರಾಮದ ಹೆಣ್ಣು ಮಗಳಾಗಿರುತ್ತಾಳೆ.) ಸರ್ಕಾರದ ಲೆಕ್ಕದಲ್ಲಿ 3.20 ಎಕರೆ ಜಮೀನು ಒತ್ತುವರಿ ಸೇರಿದಂತೆ ಏಳೆಂಟು ಎಕರೆ ಜಮೀನು ಸ್ವಾಧೀನದಲ್ಲಿದೆ. ಸದರಿ ಭೂಮಿಯಲ್ಲಿ ಎರಡು ಗೋಕಟ್ಟೆಗಳ ದುರಸ್ಥಿ ನೆಪದಲ್ಲಿ ಹಲವಾರು ಬಾರಿ ಸರ್ಕಾರದಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ.
ಮೂರ್ನಾಲ್ಕು ಕೃಷಿಹೊಂಡಾಗಳನ್ನು ತೆಗೆಸಿ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಸಾವಿರಾರು ಲೋಡುಗಳಷ್ಟು ಸದರಿ ಗೋಮಾಳದಿಂದ ಮಣ್ಣನ್ನು ಹೊರಗಡೆ ಸಾಗಿಸಲಾಗಿದ್ದು ಅರಣ್ಯದ ತುಂಬಾ ಗುಂಡಿಗಳನ್ನು ತೋಡಲಾಗಿದೆ. ಈ ಅರಣ್ಯ ಭೂಮಿಯಲ್ಲಿನ ನೀಲಗಿರಿ ಮರಗಳನ್ನು ಕಳೆದ ಒಂದು ವಾರದಿಂದ ಮನಸೋ ಇಚ್ಛೆ ಕಡಿದು ಹಾಳು ಮಾಡುತ್ತಿರುವುದಲ್ಲದೆಯೇ ನಾಗಲಾಪುರ ಗ್ರಾಮದ ಬಹುತೇಕ ಅನುಕೂಲಸ್ಥರ ಕುಟುಂಬಗಳವರೇ ಟ್ರ್ಯಾಕ್ಟರ್‍ಗಳ ಮೂಲಕ ಉಳುಮೆ ಮಾಡಿಕೊಳ್ಳುತ್ತಿರುತ್ತಾರೆ.
ಸದರಿ ಅರಣ್ಯ ಭೂಮಿಯಲ್ಲಿ ಕಳೆದ ಹದಿನೈದು ವರ್ಷಗಳ ಹಿಂದೆಯೇ ಈ ಗ್ರಾಮದ ಬಡವರಿಗೆ ದೀನ ದಲಿತರಿಗೆ ಅನುಕೂಲಕ್ಕೆಂದು ಐದು ಎಕರೆ ಭೂಮಿಯಲ್ಲಿ ಸರ್ಕಾರದಿಂದ ಉಚಿತವಾಗಿ ನಿವೇಶನ ನೀಡಲಿಕ್ಕೆಂದು ಅಲಿನೇಷನ್ ಮಾಡಿದ್ದು ಸದರಿ ಫಾರ್ಮೇಷನ್ ಮಾಡಲು ಬೇಡತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿಗಳವರು ಅಧ್ಯಕ್ಷ- ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಎರಡು ಬಾರಿ ಲಕ್ಷಾಂತರ ರೂಪಾಯಿಗಳ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಇದೀಗ ಎಂಟತ್ತು ರೈತರು ನೀಲಗಿರಿ ಕಡಿದು ನಾಶ ಮಾಡಿ ಉಳುಮೆ ಮಾಡುತ್ತಿರುತ್ತಾರಾದರೂ ಸಂಬಂಧಿಸಿದ ಇಲಾಖಾಧಿಕಾರಿಗಳವರು ಮಾತ್ರ ಕಣ್ಣಿದ್ದು ಕುರುಡರಂತೆ ಜಾಣ ಮೌನರಾಗಿರುವುದು ಎಷ್ಟು ಸರಿ? ಇದೇ ನಾಗಲಾಪುರ ಗ್ರಾಮದ ರಾಮರೆಡ್ಡಿ ಎನ್ನುವವರಿಗೆ ಒಂದು ಎಕರೆ ಭೂಮಿಗೆ ಸಾಗುವಳಿ ನೀಡಿದ್ದಾರೆಂಬುದು, ವೆಂಕಟರವಣಪ್ಪನಿಗೆ ಒಂದು ಎಕರೆ ಸಾಗುವಳಿ ನೀಡಿರುತ್ತಾರೆಂಬುದು, ಲಕ್ಷ್ಮಯ್ಯನಿಗೆ ಒಂದು ಪಾಯಿಂಟ್ ಹತ್ತು ಎಕರೆ ಸಾಗುವಳಿ, ತಿಪ್ಪಣ್ಣನಿಗೆ ಎರಡು ಎಕರೆಗೆ ಸಾಗುವಳಿ ನೀಡಿದ್ದಾರೆಂಬುದು ಈ ಗ್ರಾಮಸ್ಥರುಗಳ ಹೇಳಿಕೆಯಾಗಿರುತ್ತದೆ.
ಸದರಿಯವರಿಗೆ ನಮಗೂ ಸರ್ಕಾರ ಸಾಗುವಳಿ ನೀಡಲೆಂದು ಈ ಕೆಳಕಂಡಂತೆ ಕೆಲವಾರು ರೈತರುಗಳಾದ ತಿಪ್ಪಣ್ಣ, ಯಂಜಪ್ಪ, ಹನುಂತರಾಯಪ್ಪ, ಜಯಮ್ಮ, ಸೇರಿದಂತೆ ಹತ್ತು ಹಲವಾರು ನೀಲಗಿರಿ ಮರಗಳನ್ನು ಕಡಿದು ನಾಶಪಡಿಸುವುದರ ಜೊತೆಗೆ ಅರಣ್ಯ ಭೂಮಿಯನ್ನು ಯಾವುದೆ ಅಧಿಕಾರಿಗಳ ಭಯವಿಲ್ಲದೆಯೇ ಅಕ್ರಮವಾಗಿ ಉಳುಮೆ ಮಾಡುತ್ತಿರುತ್ತಾರೆ. ಸದರಿ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿರವರು, ಮಧುಗಿರಿ ತಾಲ್ಲೂಕಿನ ಉಪವಿಭಾಗಾಧಿಕಾರಿರವರು ತಹಸೀಲ್ದಾರ್‍ರವರು ಅರಣ್ಯ ಇಲಾಖೆಯ ಡಿ.ಆರ್.ಎಫ್ ಹಾಗೂ ಆರ್.ಎಫ್.ಓ ರವರು ಯಾವ ಕ್ರಮ ಕೈಗೊಳ್ಳಲು ಮುಂದಾಗುವರು ಎಂದು ಗ್ರಾಮಸ್ಥರು ಕೇಳಿದ್ದಾರೆ.
ಗ್ರಾಮಸ್ಥರ ದೂರಿನ ಸುರಿಮಳೆ ಹಿನ್ನಲೆಯಿಂದ ಉಪತಹಸೀಲ್ದಾರ್ ವೇಣುಗೋಪಾಲ್, ಫಾರೆಸ್ಟ್ ಗಾರ್ಡ್ ಕೇಶವ್, ಅರಣ್ಯ ವೀಕ್ಷಕ ಶ್ರೀಧರ್ ಹಾಗೂ ಗ್ರಾಮಲೆಕ್ಕಿಗರು ಅ. 18 ರಂದು ಸ್ಥಳಕ್ಕೆ ಭೇಟಿ ನೀಡಿದ್ದರು.ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವವರ ಹೆಸರುಗಳನ್ನು ಲಿಖಿತ ವರದಿಯನ್ನು ಕ್ರಮಕ್ಕಾಗಿ ತಹಸೀಲ್ದಾರರಿಗೆ ನೀಡುವುದಾಗಿ ತಿಳಿಸಿದರು. ಕರ್ನಾಟಕ ಭೂಕಾಯ್ದೆಯ ಅಧಿನಿಯಮ 192 ಎ ಪ್ರಕರಣ ದಾಖಲಿಸುವುದಾಗಿ ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ