ಕೆಟ್ಟಿರುವ ಭದ್ರಮ್ಮ ಸರ್ಕಲ್ ಸಿಗ್ನಲ್‍ಲೈಟ್ ರಿಪೇರಿ ಯಾವತ್ತು?

ತುಮಕೂರು

   ನಗರದ ಸಿಗ್ನಲ್ ಲೈಟ್‍ಗಳು ಯಾವಾಗ ಚಾಲನೆಯಲ್ಲಿರುತ್ತವೆ, ಯಾವಾಗ ಕೆಡುತ್ತವೆ ಎಂಬುದನ್ನು ಹೇಳಲಾಗದು. ಹಾಗೇ, ಕೆಟ್ಟ ಲೈಟುಗಳು ಎಷ್ಟು ದಿನಕ್ಕೆ ರಿಪೇರಿಯಾಗಿ ಚಾಲನೆಗೊಳ್ಳುತ್ತವೆ ಎನ್ನುವುದನ್ನೂ ಹೇಳಲಾಗದು.ಸಿಗ್ನಲ್ ಲೈಟ್ ನಿರ್ವಹಣೆ ಹೊಣೆ ನಗರ ಪಾಲಿಕೆ ಹಾಗೂ ಟ್ರಾಫಿಕ್ ಪೊಲೀಸರಿಗೆ ಸೇರಿದೆ. ಪೊಲೀಸರು ಸಿಗ್ನಲ್‍ಲೈಟ್‍ಗಳನ್ನು ಚಾಲನೆ ಮಾಡಿ, ನಿಯಂತ್ರಣ ಮಾಡುತ್ತಾರೆ. ಅವುಗಳು ಕೆಟ್ಟರೆ ರಿಪೇರಿ ಮಾಡುವ, ಹೊಸ ಉಪಕರಣ ಅಳವಡಿಸುವ ಜವಾಬ್ದಾರಿ ನಗರ ಪಾಲಿಕೆಯದ್ದಾಗಿದೆ.

   ಆದರೆ ಈ ಎರಡೂ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಆಗಾಗ ಸಿಗ್ನಲ್‍ಲೈಟ್‍ಗಳಲ್ಲಿ ಸಮಸ್ಯೆ ಉಂಟಾಗಿ ಸಂಚಾರ ನಿಯಂತ್ರಣ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಭದ್ರಮ್ಮ ಕಲ್ಯಾಣ ಮಂಟಪ ವೃತ್ತದ ಸಿಗ್ನಲ್‍ಲೈಟ್ ಕೆಟ್ಟು ಎರಡು ತಿಂಗಳ ಮೇಲಾಗಿದೆ. ದುರಸ್ಥಿ ಮಾಡುವ ಪ್ರಯತ್ನವಾಗಿಲ್ಲ.

    ಟ್ರಾಫಿಕ್ ಪೊಲೀಸರು ದಿನವಿಡೀ ವೃತ್ತದಲ್ಲಿ ನಿಂತು ಸಂಚಾರ ನಿಯಂತ್ರಣ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲಿ ಎಲೆಕ್ಟ್ರಿಕ್ ಬೋರ್ಡ್ ಕೆಟ್ಟಿದ್ದು ಅದನ್ನು ನಗರಪಾಲಿಕೆ ನೇಮಿಸಿರುವ ಏಜೆನ್ಸಿಯವರು ರಿಪೇರಿ ಮಾಡಬೇಕಾಗಿತ್ತು, ಮಾಡಿಲ್ಲ. ಕಾರಣ, ಸರ್ಕಲ್ ಪಕ್ಕದ ರಾಧಾಕೃಷ್ಣ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.

      ಕೆಲಸ ಮುಗಿದ ಮೇಲೆ ರಿಪೇರಿ ಮಾಡಿಸಿದರಾಯಿತು ಎಂದು ನಗರಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರಸ್ತೆ ಕಾಮಗಾರಿ ಮುಗಿಯಲು ಇನ್ನೂ ಎಷ್ಟು ದಿನ ಬೇಕೋ, ಅಲ್ಲಿಯವರೆಗೂ ಸಂಚಾರ ನಿಯಂತ್ರಣ ಮಾಡುವುದು ಹೇಗೆ ಎಂದು ಹೆಸರು ಬಯಸದ ಟ್ರಾಫಿಕ್ ಪೊಲೀಸ್ ಅಧಿಕಾರಿ ಹೇಳುತ್ತಾರೆ.

      ಬಿ. ಹೆಚ್. ರಸ್ತೆಯಲ್ಲಿರುವ ಭದ್ರಮ್ಮ ವೃತ್ತದಲ್ಲಿ ವಾಹನಗಳ ಒತ್ತಡ ಜಾಸ್ತಿ, ಆಂಬುಲೆನ್ಸ್, ವಿವಿಐಪಿಗಳ ವಾಹನಗಳು ಈ ವೃತ್ತದ ಮೂಲಕ ಸಾಗುತ್ತವೆ, ಆ ವೇಳೆ ಇತರೆ ವಾಹನಗಳನ್ನು ತಡೆದು ಮಾರ್ಗ ತೆರವು ಮಾಡಿಕೊಡಬೇಕಾಗುತ್ತದೆ. ಜೊತೆಗೆ ಇಲ್ಲಿ ಧೂಳು, ಹೊಗೆ ವಿಪರೀತ. ಇದರಲ್ಲಿ ಟ್ರಾಫಿಕ್ ಪೊಲೀಸರು ಉಸಿರುಕಟ್ಟಿ ಕಾರ್ಯನಿರ್ವಹಿಸಬೇಕಾಗಿದೆ. ಇಲ್ಲಿ ಕೆಟ್ಟರುವ ಸಿಗ್ನಲ್ ಲೈಟ್ ರಿಪೇರಿ ಮಾಡಿಸಿಕೊಡಿ ಎಂದು ನಗರಪಾಲಿಕೆ ಅಧಿಕಾರಿಗಳನ್ನು ಕೇಳಿಕೊಂಡರೂ ಅವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲವು ಸಲ ಟ್ರಾಫಿಕ್ ಪೊಲೀಸರೇ ಸ್ವಂತ ಹಣದಲ್ಲಿ ಸಿಗ್ನಲ್‍ಲೈಟಿನ ಲೈಟು, ಬ್ಯಾಟರಿಗಳನ್ನು ತಂದು ಜೋಡಿಸಿದ್ದಾರೆ ಎಂದು ಹೇಳುತ್ತಾರೆ.

     ಬಟವಾಡಿ ವೃತ್ತದಲ್ಲಿ ಹೊಸದಾಗಿ ಸಿಗ್ನಲ್ ಲೈಟ್ ಅಳವಡಿಸಲಾಗಿದ್ದು ಕಾರ್ಯನಿರ್ವಹಿಸುತ್ತಿದೆ. ಶಿರಾಗೇಟ್‍ನ ಕನಕ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಸಿದ್ದರೂ ಚಾಲನೆ ಮಾಡಿಲ್ಲ. ಕೋಡಿ ವೃತ್ತದಲ್ಲಿನ ಸಿಗ್ನಲ್ ಲೈಟ್ ಆಗಾಗ ಕೆಡುತ್ತಲೇ ಇರುತ್ತದೆ. ಸಂಚಾರ ಒತ್ತಡ ಜಾಸ್ತಿ ಎನ್ನುವ ಕಾರಣಕ್ಕಾಗಿ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಸಂಬಂಧಿಸಿದ ಇಲಾಖೆಗಳು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಹೇಗೆ?

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link