ಖತರ್ನಾಕ್ ಕಾರು ಕಳ್ಳನ ಬಂಧನ ..!

ಬೆಂಗಳೂರು

    ಮನೆ ಮುಂದೆ ನಿಲ್ಲಿಸಿರುವ ಕಾರುಗಳನ್ನು ಗುರುತಿಸಿ ಸ್ಥಳದಲ್ಲಿಯೇ ಅದರ ಕೀ ಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ, ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಅಂತರರಾಜ್ಯ ಕಾರುಗಳ್ಳರು ಆಗ್ನೇಯ ವಿಭಾಗದ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಬಂಧಿತರು ಕಾಲ್ ಗರ್ಲ್‌ಗಳನ್ನು ಕರೆದುಕೊಂಡು ದಂಪತಿಯ ಸೋಗಿನಲ್ಲಿ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.

    ಬಂಧಿತ ಕಳ್ಳರಿಂದ ೧ ಕೋಟಿ ೭೦ ಲಕ್ಷ ಮೌಲ್ಯದ ೧೬ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡು ೧೭ ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಬಂಧಿತ ತಮಿಳುನಾಡಿನ ಮಧುರೈನ ಮಲ್ಲಾರ್ ನಗರದ ಪರಮೇಶ್ವರನ್ (೩೮) ಹಾಗೂ ಚೆನ್ನೈನ ಪಿಳ್ಳೈಯಾರ್ ಕೋಯಿಲ್ ಸ್ಟ್ರೀಟ್‌ನ ಸರ್ದಾಂ ಹುಸೇನ್(೨೮)ನಿಂದ ೪ ಮಾರುತಿ ಬ್ರೀಜಾ, ೫ ಸ್ವಿಫ್ಟ್ ಡಿಸೈರ್, ೨ ಸ್ವಿಫ್ಟ್,೩ ಇನೋವಾ, ೧ ಸಿಯಾಜ್, ೧ ಬಜಾಜ್ ಡಿಸ್ಕವರಿ ಬೈಕ್ ಸೇರಿ ೧ ಕೋಟಿ ೭೦ ಲಕ್ಷ ಮೌಲ್ಯದ ೧೬ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

       ಆರೋಪಿಗಳು ಹಳೇ ಕಳ್ಳರಾಗಿದ್ದು, ಹಿಂದೆ ವಾಹನ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಇಬ್ಬರಲ್ಲಿ ಪ್ರಮುಖ ಆರೋಪಿ ಪರಮೇಶ್ವರನ್ ತಮಿಳುನಾಡಿನಲ್ಲಿ ಬಾಡಿಗೆ ಕಾರು ಪಡೆದು ಕೋಲಾರ, ಚಿತ್ರದುರ್ಗ ಇನ್ನಿತರ ಕಡೆಗಳಿಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಂಡು ಕಾಲ್ ಗರ್ಲ್‌ನ್ನು ಕರೆದುಕೊಂಡು ಬರುತ್ತಿದ್ದ.

      ಇಲ್ಲಿಗೆ ಬಂದ ನಂತರ ಲಾಡ್ಜ್ ಮಾಡಿ ಕಾಲ್‌ಗರ್ಲ್‌ನ್ನು ಜತೆಯಲ್ಲಿಟ್ಟುಕೊಳ್ಳುತ್ತಿದ್ದ. ರಾತ್ರಿವೇಳೆ ಸುತ್ತಾಡುತ್ತ ಮನೆಯ ಮುಂದೆ ನಿಲ್ಲಿಸಿರುವ ಇನ್ನೋವಾ, ಸ್ವಿಫ್ಟ್ ಕಾರುಗಳನ್ನು ಗುರುತಿಸಿ ತಾನು ಜತೆಯಲ್ಲಿ ತಂದಿರುವ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ಹೊಸ ಕೀಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಕಾರು ಕಳವು ಮಾಡುತ್ತಿದ್ದ ನಂತರ ತಾನು ಬಾಡಿಗೆಗೆ ತಂದಿರುವ ಕಾರಿನ ಚಾಲಕನ ಕೈಯಲ್ಲಿ ಕಳವು ಮಾಡಿದ ಕಾರಿನಲ್ಲಿರುವ ನೋಂದಣಿ ಸಂಖ್ಯೆಯನ್ನು ಬದಲಾಯಿಸಿ ಆ ಕಾರನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದ. ಅದನ್ನು ಮತ್ತೊಬ್ಬ ಆರೋಪಿ ಸರ್ದಾಂ ಮೂಲಕ ಮಾರಾಟ ಮಾಡಿಸುತ್ತಿದ್ದ.

ಗೋವಾದಲ್ಲಿ ಮೋಜು

      ಕಾರು ಕಳವು ಮಾಡಿದ ನಂತರ ಲಾಡ್ಜ್ ಖಾಲಿ ಮಾಡಿ ಕಾಲ್ ಗರ್ಲ್‌ನನ್ನು ಜತೆಯಲ್ಲಿ ಕರೆದುಕೊಂಡು ಗೋವಾಗೆ ಪರಾರಿಯಾಗಿ ೩-೪ ದಿನಗಳ ಕಾಲ ಉಳಿದು ಅಲ್ಲಿಂದ ತಮಿಳುನಾಡಿಗೆ ಕಾಲ್‌ಗರ್ಲ್‌ನ್ನು ಕಳುಹಿಸಿ ನಂತರ ಹಿಂದಿರುಗುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಹುಳಿಮಾವುವಿನ ಬಸವಪುರದಲ್ಲಿ ಇಂಡರ್ಸ್ ಟವರ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹರಿಕೃಷ್ಣ ಎಂಬುವರ ಬಜಾಜ್ ಡಿಸ್ಕವರಿ ಬೈಕ್‌ನ್ನು ಕಳೆದ ಆ. ೧೩ ರಂದು ನಿಲ್ಲಿಸಿದ್ದು, ಅದನ್ನು ಕಳವು ಮಾಡಲಾಗಿತ್ತು. ಇದಲ್ಲದೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದಲ್ಲಿ ಕಾರು ಕಳ್ಳತನ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ವಾಸು ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಕಳವು ಕಾರಿನಿಂದ ಪತ್ತೆ

     ತಂಡದಲ್ಲಿದ್ದ ಹುಳಿಮಾವು ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಪ್ಪ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಅನುಮಾನಾಸ್ಪದವಾಗಿ ಬಂದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದು ಕಳವು ಮಾಡಿರುವ ಕಾರು ಎನ್ನುವುದು ಪತ್ತೆಯಾಗಿದ್ದು, ಅದರಲ್ಲಿದ್ದ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

     ಆರೋಪಿಗಳು ಶಿವಮೊಗ್ಗದ ವಿನೋಬ ನಗರ, ಜಯನಗರ, ಚೆನ್ನಪಟ್ಟಣ, ಮದ್ದೂರು, ಕೋಲಾರ ಗ್ರಾಮಾಂತರ, ಗಲ್‌ಪೇಟೆ, ನಗರ, ಶ್ರೀನಿವಾಸಪುರ, ಗೋವಾ, ಮುಳಬಾಗಿಲು, ರಾಮನಗರದ ಐಜೂರು, ಹುಳಿಮಾವು ಸೇರಿ ೧೭ ಕಡೆಗಳಲ್ಲಿ ೧೬ ಕಾರು ಕಳವು, ೧ ಬೈಕ್ ಕಳವು ಮಾಡಿರುವುದು ಪತ್ತೆಯಾಗಿದೆ ಎಂದರು.ಡಿಸಿಪಿ ಇಶಾಪಂತ್ ಅವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link