ದಾವಣಗೆರೆ
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಣಕ್ಕಾಗಿ ರೂಪಿಸಿರುವ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆ, ತೊಂದರೆಗಳಾಗದಂತೆ ಸೌಲಭ್ಯ ತಲುಪಿಸುವುದರ ಜೊತೆಗೆ ನಿಗದಿತ ಸಮಯದೊಳಗೆ ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ದಾವಣಗೆರೆ ಜಿಲ್ಲೆಯ ವಿವಿಧ ಇಲಾಖೆಯ ಪ.ಜಾತಿ ಉಪಯೋಜನೆ, ಗಿರಿಜನ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಅಲೆದಾಡಿಸಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೆಪ್ಟೆಂಬರ್ ಅಂತ್ಯದವರೆಗೆ ಕೃಷಿ ಇಲಾಖೆ ಎಸ್‍ಸಿಪಿ ಯೋಜನೆಯಡಿ ಶೇ. 94.57 ಹಾಗೂ ಟಿಎಸ್‍ಪಿ ಯೋಜನೆಯಡಿ ಶೇ.96.86 ಪ್ರಗತಿ ಸಾಧಿಸಲಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಎಸ್‍ಸಿಪಿ ಶೇ. 51.76 ಮತ್ತು ಟಿಎಸ್‍ಪಿ ಶೇ.79.71, ರೇಷ್ಮೆ ಇಲಾಖೆ ಎಸ್‍ಸಿಪಿ ಶೇ.45, ಟಿಎಸ್‍ಪಿ ಶೇ.71.78, ಆಹಾರ ಇಲಾಖೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಶೇ.100 ಪ್ರಗತಿ ಸಾಧಿಸಲಾಗಿದೆ. ಅನುದಾನ ಬಿಡುಗಡೆಯಾಗದೇ ಇರುವ, ಪ್ರಗತಿ ಕುಂಠಿತವಾಗಿರುವ ಇಲಾಖೆಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಪ್ರಗತಿ ಸಾಧಿಸುವತ್ತ ಗಮನ ಹರಿಸಬೇಕೆಂದು ಹೇಳಿದರು.
ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಅಧಿಕಾರಿ, ಸಿಬ್ಬಂದಿಗಳಿದ್ದು, ಸಾಕಷ್ಟು ವಾರ್ಷಿಕ ಅನುದಾನ ಇದೆ. ಆದರೆ ಜಿಲ್ಲೆಯಲ್ಲಿ ಕೇವಲ 290 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರೇಷ್ಮೆ ಬೆಳೆ ಇದೆ. ಹೀಗಾಗಿ ಪ್ರದೇಶ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು .ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಸೇರಿದಂತೆ ಇತರೆ ಇಲಾಖೆಗಳ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಇರುವ ಸೌಲಭ್ಯಗಳ ಕುರಿತು ಅರ್ಹ ಫಲಾನುಭವಿಗಳಿಗೆ ಮಾಹಿತಿ ಇಲ್ಲ. ಈ ಯೋಜನೆಗಳ ಕುರಿತು ಅಧಿಕಾರಿಗಳು ಸಮರ್ಪಕವಾಗಿ ಪ್ರಚಾರ, ಮಾಹಿತಿ ನೀಡಿಲ್ಲ.
ಇನ್ನು ಮುಂದೆ ಅರ್ಹರಿಗೆ ಈ ಯೋಜನೆಯ ಮಾಹಿತಿ ತಿಳಿಯುವಂತೆ ಕ್ರಮ ವಹಿಸಬೇಕೆಂದರು.ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಮಾತನಾಡಿ, ಎಸ್‍ಸಿಪಿ, ಟಿಎಸ್‍ಪಿ ಯಂತಹ ಸಭೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಾಗೂ ಅರ್ಹರಿಗೆ ಈ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕೆಂದರು.
ಚನ್ನಗಿರಿ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪನವರ ಪರವಾಗಿ ಸಭೆಗೆ ಹಾಜರಾದ ಅವರ ಆಪ್ತ ಸಹಾಯಕರು ಮಾತನಾಡಿ, ಚನ್ನಗಿರಿಯಲ್ಲಿ ಎಸ್‍ಸಿಪಿ ಯೋಜನೆಯಡಿ ಅಡಿಕೆ ಕಾಯಿ ಸುಲಿಯುವ ಯಂತ್ರಕ್ಕೆ ಕೇವಲ 5 ಗುರಿ ನೀಡಲಾಗಿದೆ. ಟಿಎಸ್‍ಪಿ ಅಡಿ ಯಾವುದೇ ಗುರಿ ನೀಡಿಲ್ಲ. ಈ ಭಾಗದಲ್ಲಿ ಅಡಿಕೆ ಸುಲಿಯುವ ಯಂತ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಗುರಿಯ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.
ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಎಸ್‍ಸಿಪಿ/ಟಿಎಸ್‍ಪಿ ಸೇರಿದಂತೆ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಮಾನದಂಡಗಳಲ್ಲಿ ಯಾವುದಾದರೂ ತೊಡಕುಗಳು, ಬದಲಾವಣೆಗಳಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳು ಅ.21 ರಂದು ನಡೆಸುವ ಕೆಡಿಪಿ ಪೂರ್ವಭಾವಿ ಸಭೆಗೆ ಸಲ್ಲಿಸಿದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡುವ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಮಹಾನಗರಪಾಲಿಕೆ ಆಯುಕ್ತರಾದ ಮಂಜುನಾಥ್ ಬಳ್ಳಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








