ಚಿತ್ರದುರ್ಗ:
ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲುರವರನ್ನು ಮುತ್ತಿಗೆ ಹಾಕಿ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ ನೆರವು ನೀಡುವಲ್ಲಿ ಕಾಳಜಿ ವಹಿಸದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಧುಪಾಲೇಗೌಡ ಸೇರಿದಂತೆ ಎಂಟು ಮಂದಿಯನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಕೆಡಿಪಿ ಸಭೆಗೆ ಆಗಮಿಸಿದ ಶ್ರೀರಾಮುಲುರವರನ್ನು ಜಿ.ಪಂ.ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಮಾಡುತ್ತಿದ್ದಂತೆ ಜೇನುನೊಣಗಳಂತೆ ಮುತ್ತಿಕೊಂಡ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟವಾಯಿತು. ಅಹವಾಲು ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಮೀಪಕ್ಕೆ ಬಂದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಪ್ರತಿಭಟನಾಕಾರರು ಧಿಕ್ಕಾರಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಶ್ರೀರಾಮುಲು ಅಭಿಮಾನಿಗಳು ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮಾತಿನ ಜಟಾಪಟಿ ನಡೆಸಿ ನಂತರ ಸಚಿವರಿಗೆ ಜೈಕಾರ ಹಾಕಿದರು.ಬಿಗಿ ಭದ್ರತೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲುರವರನ್ನು ಪೊಲೀಸರು ಜಿ.ಪಂ.ಕೆಡಿಪಿ.ಸಭೆಗೆ ಕರೆದೊಯ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ