ದಾವಣಗೆರೆ
ಜಿಲ್ಲೆಯಲ್ಲಿ ನವಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಮತ್ತು ವಿಭಿನ್ನವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಏರ್ಪಡಿಸಿದ್ದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ.1 ರಿಂದ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧವಾಗಿದ್ದು, ರಾಜ್ಯೋತ್ಸವದಲ್ಲಿ ಪ್ಲಾಸ್ಟಿಕ್ ಧ್ವಜ ಹಾಗೂ ಫ್ಲೆಕ್ಸ್‍ಗಳನ್ನು ಬಳಸುವಂತಿಲ್ಲ. ಅಕಸ್ಮಾತ್ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ, ದಂಡ ವಿಧಿಸುವುದರ ಜೊತೆಗೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಕನ್ನಡಪರ ಹೋರಾಟಗಾರ ಕೆ.ಜಿ.ಶಿವಕುಮಾರ್ ಮಾತನಾಡಿ, ಕನ್ನಡಪರ ಸಂಘಟನೆಗಳು ತಮ್ಮ ಕಚೇರಿಗಳಲ್ಲಿ ಕನ್ನಡ ಧ್ವಜಾರೋಹಣ ಮಾಡಬೇಕಾಗಿದೆ. ಆದ್ದರಿಂದ ಕನ್ನಡಮ್ಮ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯನ್ನು ಅಂದು ಬೆಳಿಗ್ಗೆ 8.30ಕ್ಕೆ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸಮ್ಮತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯ್ತಿ ವತಿಯಿಂದ ಈ ಬಾರಿ ಸ್ವಚ್ಛ ಭಾರತ್ ಮಿಷನ್ ಕುರಿತು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಲಕಾರ್ಮಿಕ ಪದ್ದತಿ ನಿಷೇಧ ಮತ್ತು ಪೋಷಣ್ ಅಭಿಯಾನದ ಚಿತ್ರಣ ಬಿಂಬಿಸುವ ಸ್ತಬ್ದಚಿತ್ರಗಳನ್ನು ಕ್ರಿಯಾತ್ಮಕವಾಗಿ ಸಿದ್ದಪಡಿಸಿ ಪ್ರದರ್ಶಿಸಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಅತ್ಯುತ್ತಮ ಕಲಾತಂಡಗಳ ಪ್ರದರ್ಶನಕ್ಕೆ ಸಿದ್ಧತೆ ನಡೆಸಬೇಕೆಂದು ಹೇಳಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ ಮಾತನಾಡಿ, ಶಿಷ್ಟಾಚಾರದಂತೆ ಕನ್ನಡ ರಾಜ್ಯೋತ್ಸವದ ಆಹ್ವಾನ ಪತ್ರಿಕೆ ಮುದ್ರಿಸಿ ವಿತರಿಸಲಾಗುವುದು. ನ.1 ರಂದು ಮೆರವಣಿಗೆ ನಂತರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕನ್ನಡ ಧ್ವಜಾರೋಹಣ ನೆರವೇರಿಸುವರು. ಬಳಿಕ ಶಾಲಾ ಮಕ್ಕಳು ಅತ್ಯುತ್ತಮವಾದ ಒಂದು ಅಥವಾ ಎರಡು ನೃತ್ಯ ರೂಪಕಗಳನ್ನು ಪ್ರದರ್ಶಿಸಲಿದ್ದಾರೆ ಹಾಗೂ ಸಂಜೆ ಜಯದೇವ ವೃತ್ತದಲ್ಲಿರುವ ಶಿವಯೋಗಿ ಬಯಲುಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಕಳೆದ ಬಾರಿ ನವೆಂಬರ್ ತಿಂಗಳಿನಲ್ಲಿ ಪರಭಾಷ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್ ಮೇಲೆ ಕನ್ನಡಪರ ಸಂಘನಟೆಗಳ ಒಕ್ಕೂಟದಿಂದ ದಾಳಿ ನಡೆಸಿ, ಪ್ರತಿಭಟಿಸಲಾಗಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡದೇ ತಿಂಗಳಾದ್ಯಂತ ಎಲ್ಲಾ ಚಿತ್ರಮಂದಿರಗಳು ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವಂತೆ ಆದೇಶ ನೀಡಬೇಕು ಹಾಗೂ ಅನ್ಯ ಭಾಷೆಗಳ ನಾಮಫಲಕಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಜನಮನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್ ಮಾತನಾಡಿ, ಚಲನಚಿತ್ರ ಮಂದಿರಗಳಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡ ಚಿತ್ರಗಳನ್ನು ಹಾಗೂ ಇನ್ನು ಮುಂದೆ ಎಲ್ಲೆಡೆ ಕಡ್ಡಾಯವಾಗಿ ಕನ್ನಡ ನಾಮಫಲಕ ಪ್ರದರ್ಶಿಸಲು ಜಿಲ್ಲಾಧಿಕಾರಿಗಳು ಆದೇಶಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎಸ್. ರಾಮೇಗೌಡ, ಸ.ರಂ.ಗಂಗಪ್ಪ, ಕಿ.ಮಂಜನಾಯ್ಕ, ಡಿ.ಪರಮೇಶ್ವರಪ್ಪ, ಪ್ರವೀಣ್, ರಾಜುನಾಯ್ಕ, ಎಸ್.ಕೆ.ಕುಲಕರ್ಣಿ, ಶಿವಾನಂದಯ್ಯ ಹೆಚ್.ಎಂ, ಮಂಜುನಾಥ ಬಾಳೆಕಾಯಿ, ಜಗದೀಶ್ ಎಸ್.ಪಿ, ಕೆ.ಬಿ.ರುದ್ರೇಶ್, ನಾರಾಯಣಮೂರ್ತಿ, ಮಂಜುನಾಥ್ ಎಸ್, ಎನ್.ರವಿಕುಮಾರ್, ಗೋಪಾಲಗೌಡ, ಟಿ.ಮಂಜುನಾಥಗೌಡ, ಸುಧಾಕರ್, ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ, ಎಸ್‍ಎಲ್‍ಎಓ ರೇಷ್ಮಾ ಹಾನಗಲ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಡಿಪಿಐ ಪರಮೇಶ್ವರಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ