ಮಡಿವಾಳರನ್ನು ಎಸ್ಸಿಗೆ ಸೇರಿಸಲು ಧ್ವನಿಗೂಡಿಸುವೆ :ವೈ.ದೇವೇಂದ್ರಪ್ಪ

ದಾವಣಗೆರೆ

  ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಿಮ್ಮ ಜತೆ ನಾನೂ ಧ್ವನಿಗೂಡಿಸುತ್ತೇನೆ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಭರವಸೆ ನೀಡಿದರು.

   ನಗರದ ತ್ರಿಶೂಲ್ ಕಲಾ ಭವನದಲ್ಲಿ ಭಾನುವಾರ ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ನಡೆದ ಮಡಿವಾಳ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬುದಾಗಿ ಹಲವು ಬಾರಿ ನೀವು ಹೋರಾಟ ಮಾಡಿದ್ದೀರಿ. ಈಗ ನಿಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಪ್ರಸ್ತಾಪಿಸಲು ನಿಯೋಗ ಹೋಗೋಣ ಎಂದು ಸಲಹೆ ನೀಡಿದರು.

    ಬಡವರು ಮತ್ತು ಶ್ರೀಮಂತರು ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳು ಓದುವುದು ಒಂದೇ ಪುಸ್ತಕ. ಆದ್ದರಿಂದ ಶ್ರಿಮಂತರಷ್ಟೇ ಪ್ರತಿಭಾನ್ವಿತರಾಗಿ ಹೊರಹೊಮ್ಮಿ ಸಾಧನೆ ಮಾಡಲಾಗುವುದಿಲ್ಲ. ಶ್ರಮ ವಹಿಸಿದರೆ ಬಡವರು ಸಹ ಸಾಧನೆ ಮಾಡಬಹುದು. ಆದ್ದರಿಂದ ಬಡವರು ಎಂಬ ಕೀಳಿರಿಮೆಯನ್ನು ತೊಡೆದು ಹಾಕಿ ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ಸಾಧನೆಯತ್ತ ದಾಪುಗಾಲು ಹಾಕಬೇಕೆಂದು ಕಿವಿಮಾತು ಹೇಳಿದರು.

    ಮಡಿವಾಳ ಸಮಾಜ ಸೇರಿದಂತೆ ಯಾವುದೇ ಸಮುದಾಯದ ಪೋಷಕರಿಗೆ ಎಷ್ಟೇ ಕಷ್ಟ-ಕಾರ್ಪಣ್ಯಗಳು ಬಂದರೂ, ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸದೇ, ಪರಿಪೂರ್ಣ ಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಎಂ.ಉಮಾಪತಿ ಮಾತನಾಡಿ, ನಮ್ಮ ಸಮುದಾಯಕ್ಕೆ ಸಹಾಯ ಮಾಡುವ ಮನಸ್ಸು ಯಾವ ರಾಜಕಾರಣಿಗಳಿಗೂ ಇಲ್ಲವಾಗಿದೆ. ಹಸಿವಿನಿಂದ ಯಾರು ಮಲಗಬಾರದೆಂಬ ಕಾರಣಕ್ಕೆ ಎರಡು ಹೊತ್ತು ಊಟ ಮಾಡುವಂತೆ ಅಕ್ಕಿ ಕೊಟ್ಟ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸಹ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸುವ ಪ್ರಸ್ತಾವಕ್ಕೆ ನೋಡೋಣ, ಮಾಡೋಣ ಎಂದರೇ ಹೊರತು, ಸಹಾಯ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಡಿವಾಳರ ಸಂಘದ ರಾಜ್ಯ ಅಧ್ಯಕ್ಷ ನಂಜಪ್ಪ ಮಾತನಾಡಿ, ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಒಂದು ಏಕ ಸದಸ್ಯ ಸಮಿತಿ ಮಾಡಿ ಮಡಿವಾಳ ಸಮಾಜದ ಬಗ್ಗೆ ಅಧ್ಯಯನ ಮಾಡಿಸಿದ್ದರು. ಆದರೆ, ನಮ್ಮ ದುರಾದೃಷ್ಟವೋ, ಏನೋ ಆ ವರದಿ ಬರುವ ಹೊತ್ತಿಗೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಜಗದೀಶ ಶೆಟ್ಟರ್ ಸಿಎಂ ಆಗಿದ್ದರು. ಹಾಗಾಗಿ ಸಮಾಜವನ್ನು ಎಸ್‍ಸಿಗೆ ಸೇರಿಸಲು ಆಗಲಿಲ್ಲ. ನಂತರದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಸರ್ಕಾರದಿಂದಲೇ ಮಡಿವಾಳ ಮಾಚಿದೇವ ಜಯಂತಿ ಘೋಷಿಸಿದರು. ಅಲ್ಲಿವರೆಗೆ ನಮ್ಮ ಕುಲ ಗುರುವಿನ ಜಯಂತಿ ಸಹ ಇರಲಿಲ್ಲ ಎಂದು ವಿಷಾದಿಸಿದರು.

     ಈಗ ಮತ್ತೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮಡಿವಾಳ ಸಮುದಾಯದವರನ್ನು ಸೇರಿಸುವುದಾಗಿ ಅವರು ಹಿಂದೆ ಹೇಳಿದ ಮಾತನ್ನು ಮತ್ತೆ ನೆನಪಿಸೋಣ. ಎಸ್‍ಸಿಗೆ ಎಲ್ಲ ಸೌಲಭ್ಯ ಸಿಗುತ್ತದೆ. ಎಲ್ಲರೂ ಸೌಲಭ್ಯ ಪಡೆದಿರುವುದರಿಂದ ಹಲವು ಕಡೆ ಸೌಲಭ್ಯ ಪಡೆಯಲು ಫಲಾನುಭವಿಗಳೇ ಇಲ್ಲ. ಆದರೂ ನಾವು ಸೇರುವುದಕ್ಕೆ ವಿರೋಧಿಸುತ್ತಿರುವ ಕೆಲವರ ವರ್ತನೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

     ಇದೇ ಸಂದರ್ಭದಲ್ಲಿ ಉಮಾಪತಿ, ಕೊಟ್ರಪ್ಪ, ಗುರುನಂಜಪ್ಪ, ನಾಗರಾಜಪ್ಪ, ಶೇಖರಪ್ಪ, ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಅಥಣಿ ಜಂಜರವಾಡ ಬಸವ ಕುಟೀರದ ಬಸವರಾಜೇಂದ್ರ ಶರಣರು ಸಾನ್ನಿಧ್ಯ ವಹಿಸಿದ್ದರು.

     ಕಾರ್ಯಕ್ರಮದಲ್ಲಿ ಇನ್‍ಸ್ಪೆಕ್ಟರ್ ಗುರುರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ. ಬಸವರಾಜ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಜಿನಪ್ಪ, ಧ್ರುವಕುಮಾರ, ಸಮಾಜದ ಮುಖಂಡರಾದ ಡಾ.ರವಿಕುಮಾರ್, ಅಮರನಾಥ್, ಸುರೇಶ್ ಮಡಿವಾಳ, ರಮೇಶ, ಧನಂಜಯ, ನಾಗರಾಜ್, ಬಸವರಾಜಪ್ಪ, ರಾಮಚಂದ್ರಪ್ಪ, ಡಾ.ಭೀಮಪ್ಪ, ರಾಮಪ್ಪ, ನಾಗಮ್ಮ, ಅನ್ನಪೂರ್ಣಮ್ಮ, ಪ್ರಕಾಶ್, ಭೀಮಣ್ಣ, ರಂಗನಾಥ, ಅಂಜಿನಪ್ಪ, ಗುಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link