ತುರುವೇಕೆರೆ
ಕನ್ನಡ ರಾಜ್ಯೋತ್ಸವ ಆಚರಣೆಗೆ ತಾಲ್ಲೂಕಿನ ಕನ್ನಡ ಪರ ಸಂಘಟನೆಗಳ ಸಹಕಾರವೂ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯೊಂದಿಗೆ ಈ ಬಾರಿ ನಾಡಹಬ್ಬವನ್ನು ಅದ್ದೂರಿಯಿಂದ ಆಚರಿಸೋಣ ಎಂದು ಶಾಸಕ ಮಸಾಲ ಜಯರಾಂ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿ ಹಾಗೂ ಅನೇಕ ಸಂಘಸಂಸ್ಥೆಗಳ ಸಹಯೋಗದಲ್ಲಿ ನವೆಂಬರ್ ಒಂದರಂದು ನಡೆಯುವ ನಾಡಹಬ್ಬಕ್ಕೆ ಇಲಾಖಾಧಿಕಾರಿಗಳಿಗೆ ವಹಿಸಿರುವ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕರೆ ನೀಡಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಮುಂಭಾಗ ನಾಡಹಬ್ಬವನ್ನು ಆಚರಿಸಲು ತೀರ್ಮಾನಿಸಲಾಯಿತು. ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ದಂಡಾಧಿಕಾರಿ ನಯಿಂಉನ್ನೀಸಾ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸಂದೇಶ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎ.ಎಸ್.ಮಸಾಲಜಯರಾಂ ವಹಿಸಲಿದ್ದು, ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಕಳ್ಳನಕೆರೆ ಶಿವಾನಂದ್, ಕುರಿಬಾಂಡ್ ಖ್ಯಾತಿಯ ಚಿಕ್ಕಬೀರನಕೆರೆ ಕುರಿಬಾಂಡ್ ರಂಗ, ವರದಿಗಾರ ಹೊಸಳ್ಳಿ ಪಾಂಡುರಂಗಯ್ಯ, ತಮಟೆ ಕಲಾವಿದ ತುರುವೇಕೆರೆ ರಮೇಶ್, ಸೋಮನ ಕುಣಿತ ದುಂಡ ಲೋಕೇಶ್, ಶಿಕ್ಷಕ ಅಶೋಕ್, ಕುಸ್ತಿಪಟು ಶಾಂತರಾಜ್ ಅರಸ್, ತೊಗಲುಬೊಂಬೆ ಶಿವಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸಾಧಕರಿಗೆ ಸನ್ಮಾನ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಆಯ್ದ ಮಕ್ಕಳಿಗೆ ಬಹುಮಾನ ವಿತರಣೆ, ಲಘು ಉಪಹಾರ, ಸಿಹಿ ಹಂಚಿಕೆ ಸೇರಿದಂತೆ ಜವಾಬ್ದಾರಿ ವಹಿಸಿಕೊಂಡ ಆಯಾ ಇಲಾಖಾಧಿಕಾರಿಗಳು ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಅಂದು ಎಲ್ಲರೂ ಪಾಲ್ಗೊಂಡು ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಸೂಚಿಸಲಾಯಿತು.
ಕಾರ್ಯಕ್ರಮದಂದು ಅನೇಕ ಇಲಾಖಾಧಿಕಾರಿಗಳು ಗೈರುಹಾಜರಾಗುವ ಬಗ್ಗೆ ಶಾಸಕರ ಗಮನಕ್ಕೆ ತಂದ ಸಂದರ್ಭದಲ್ಲಿ ಶಾಸಕರು ಮಾತನಾಡಿ, ನಮ್ಮ ನಾಡಹಬ್ಬ ಕಾರ್ಯಕ್ರಮಕ್ಕೆ ಶಿಕ್ಷಕರಾದಿಯಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಾಗುವಂತೆ ಸೂಚಿಸುವುದು ಹಾಗೂ ಗೈರುಹಾಜರಾದವರ ಬಗ್ಗೆ ತಹಸೀಲ್ದಾರ್ ಹಾಗೂ ಬಿಇಓ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಖಡಕ್ಕಾಗಿ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಯಿಂಉನ್ನೀಸ, ಪ.ಪಂ.ಸದಸ್ಯರಾದ ರವಿಕುಮಾರ್, ಅಂಜನ್ಕುಮಾರ್, ಪ್ರಭಾಕರ್, ಚಿದಾನಂದ್, ಕ.ಸಾ.ಪ. ಅಧ್ಯಕ್ಷ ನಂ.ರಾಜು, ಬಿಜೆಪಿ ಅಧ್ಯಕ್ಷ ದುಂಡ ರೇಣುಕಯ್ಯ, ರೈತಸಂಘದ ಅಧ್ಯಕ್ಷ ಶ್ರೀನಿವಾಸ್, ಜಿ.ಪಂ.ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ರಾಮಣ್ಣ, ಬಿಎಮ್ಎಸ್ ಉಮೇಶ್, ಎಡಗೀಹಳ್ಳಿ ವಿಶ್ವಣ್ಣ, ದೊಡ್ಡನರಸೇಗೌಡ, ನೌಕರರ ಸಂಘದ ಪ್ರಹ್ಲಾದ್, ಮುಖ್ಯಾಧಿಕಾರಿ ಮಂಜುಳಾದೇವಿ, ವಿವಿಧ ಇಲಾಖಾಧಿಕಾರಿಗಳಾದ ಗುರುಸಿದ್ದಪ್ಪ, ರೇಖಾ, ದೀಪಾಲಿ, ಪ್ರದೀಪ್ಕುಮಾರ್, ಬಿಇಓ ರಂಗಧಾಮಯ್ಯ, ಚಿದಾನಂದ್, ಆರೋಗ್ಯ ಕ್ಷೇತ್ರಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಗೂ ಇತರೆ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ