ಸಿದ್ದರಾಮಯ್ಯ ವಿರುದ್ಧ “ಉಗ್ರಗಾಮಿ” ಪದ ಬಳಕೆಗೆ ಸಂಘಟನೆಗಳ ಆಕ್ರೋಶ..!

ಕುರುಬರ ಸಂಘಟನೆಗಳಿಂದ ನಾಳೆ ಪ್ರತಿಭಟನೆ

ತುಮಕೂರು:

      ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಶಿವಣ್ಣ ಅವರು ದೇಶದ್ರೋಹಿ, ಉಗ್ರಗಾಮಿ ಎಂದು ಜರಿದಿರುವುದನ್ನು ಖಂಡಿಸಿರುವ ಕುರುಬರ ಸಮುದಾಯದ ಸಂಘಟನೆಗಳು ಖಂಡಿಸಿದ್ದು, ಈ ಸಂಬಂಧ ಶಿವಣ್ಣ ಅವರ ಬೇಷರತ್ ಕ್ಷಮೆ ಯಾಚನೆಗೆ ಆಗ್ರಹಿಸಿ ಅ.23 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

       ಭಾರತ ರತ್ನ ಗೌರವ ಪ್ರಶಸ್ತಿಯನ್ನು ಸಾವರ್ಕರ್‍ಗೆ ನೀಡಬಾರದೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿರುವ ಮಾಜಿ ಸಚಿವ ಶಿವಣ್ಣ ಸಿದ್ದರಾಮಯ್ಯ ಒಬ್ಬ ದೇಶದ್ರೋಹಿ, ಉಗ್ರಗಾಮಿ ಎಂದು ಜರಿದಿದ್ದಾರೆ. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿ.ಡಿ.ಸಾವರ್ಕರ್ ನ್ಯಾಯಾಲಯದಲ್ಲಿ ಸಾಕ್ಷ್ಯವಿಲ್ಲವೆಂದು ಖುಲಾಸೆಗೊಂಡಿದ್ದರು. ಇಂತಹವರಿಗೆ ಭಾರತರತ್ನ ನೀಡಬಾರದೆಂದು ಸಿದ್ದರಾಮಯ್ಯ ಟೀಕಿಸಿದ್ದರು.

      ಇದು ವಾಸ್ತವ ಕೂಡ. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾವು ಸಮರ್ಥಿಸುತ್ತೇವೆ. ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಬುಧವಾರ ಬೆಳಗ್ಗೆ 11.30 ಗಂಟೆಗೆ ಕಾಳಿದಾಸ ಹಾಸ್ಟೆಲ್‍ನಿಂದ ಟೌನ್‍ಹಾಲ್‍ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಸಂಘಟನೆಗಳ ಒಕ್ಕೂಟದ ಪರವಾಗಿ ಕೆಂಪರಾಜು, ಟಿ.ಆರ್.ಸುರೇಶ್, ಧರ್ಮರಾಜ್, ಟಿ.ಎಂ.ಗರುಡಯ್ಯ, ಟಿ.ಇ.ರಘುರಾಂ, ಎಸ್.ಶಂಕರ್ ತಿಳಿಸಿದ್ದಾರೆ.

       ಡಾ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕೆಂದು ಬೇಡಿಕೊಂಡರೂ ಕೊಡಲಿಲ್ಲ. ಆದರೆ ಗಾಂಧೀಜಿ ಹತ್ಯೆಯ ಪ್ರಕರಣದ ಆರೋಪಿಯಾಗಿದ್ದ ಸಾವರ್ಕರ್‍ಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಹೇಳಿಕೆಯನ್ನು ಟೀಕಿಸುತ್ತ ಶಿವಣ್ಣ ಅವರು ಸಿದ್ದರಾಮಯ್ಯ ಅವರ ಬಗ್ಗೆ ಸಂಸದೀಯ ವ್ಯವಸ್ಥೆಯ ಅರಿವಿಲ್ಲದಂತೆ ಮಾತನಾಡಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಅನುಭವ ಇಲ್ಲದವರಂತೆ ಮಾತನಾಡುತ್ತಿದ್ದಾರೆ.

      ಕಳೆದ ಚುನಾವಣೆಯಲ್ಲಿ ಇವರ ಅಭಿವೃದ್ಧಿಯನ್ನು ನೋಡಿ ಜನ ಮನೆಗೆ ಕಳುಹಿಸಿದ್ದಾರೆ. ಬಿಜೆಪಿಯ ಗಂಜಿ ಕೇಂದ್ರದಲ್ಲಿ ಅಧಿಕಾರಕ್ಕಾಗಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

       ನೈಜವಾಗಿ ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಹಿಂದುತ್ವದ ಅಜೆಂಡಾ ಹಿಡಿದುಕೊಂಡು ದೇಶದ ಜನತೆ ಮತ್ತು ಹಿಂದೂಗಳನ್ನು ಭಾವನಾತ್ಮಕವಾಗಿ ದಿಕ್ಕು ತಪ್ಪಿಸುತ್ತಿದ್ದಾರೆ. ಇದರ ಭಾಗವಾಗಿ ಈಗ ಸಾವರ್ಕರ್‍ಗೆ ಭಾರತ ರತ್ನ ನೀಡುವುದನ್ನು ಮುನ್ನಲೆಗೆ ತಂದಿದ್ದಾರೆ. ಭಾರತ ರತ್ನ ನೀಡಬೇಕೆ ಎಂಬುದನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದೇ ದೇಶದ್ರೋಹ ಕೆಲಸ ಎಂಬಂತೆ ಸೊಗಡು ಶಿವಣ್ಣ ತಲೆಯಲ್ಲಿ ಮಿದುಳಿಲ್ಲದಂತೆ ಮಾತನಾಡುತ್ತಿರುವುದು ಅವರ ಬುದ್ಧಿಮಟ್ಟ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದು ಸಂಘಟನೆಗಳು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap