ಬೆಂಗಳೂರು
ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕತೆ ತರಲು ಮುಂದಿನ ವರ್ಷದ ಜನವರಿ ೧ ರಿಂದ ನಗದು ರಹಿತ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟ್ರಾಚಾರ ನಿಯಂತ್ರಿಸಿ ನಗದು, ಕಾಗದ ರಹಿತವಾದ ಪದ್ಧತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದರು.
ಎಫ್.ಕೆ.ಸಿ.ಸಿ.ಐ ನಲ್ಲಿ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಉದ್ಯಮಿಗಳ ಹಾಗೂ ಕಾರ್ಮಿಕರ ಸಮಸ್ಯೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಗದು ರಹಿತ ಕಾಗದ ರಹಿತ ವ್ಯವಸ್ಥೆಯನ್ನು ಜಾರಿಗೆ ಬಂದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವುದು ಸುಲಭವಾಗಲಿದೆ ಎಂದರು.
ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು.ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂಬುದು ಸರ್ಕಾರದ ಆದೇಶ. ಆದರೆ ಉತ್ಪಾದನೆಗೆ ಗುಣಮಟ್ಟದ ವಿದ್ಯುತ್, ಅಭಾವವಾಗಿದೆ. ಉತ್ಪಾದನೆ ಹೆಚ್ಚಿದಂತೆ ನಿಗದಿತ ವಿದ್ಯುತ್ ಅನ್ನು ಹೆಚ್ಚು ಮಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಆದರೆ ನಿಗದಿತಗಿಂತ ಹೆಚ್ಚು ವಿದ್ಯುತ್ ಬಳಕೆ ಆದರೆ ಅದಕ್ಕೆ ಹೆಚ್ಚಿನ ದರ ನೀಡಬೇಕಾಗುತ್ತದೆ. ಇದರಿಂದ ಕೈಗಾರಿಕೆಗಳು, ಸಮಸ್ಯೆಗೆ ಸಿಲುಕುತ್ತದೆ. ವಿದೇಶಗಳಲ್ಲಿ ಉತ್ಪಾದನೆಗೆ ನೀಡುವ ಆದ್ಯತೆಯಂತೆ ಇಲ್ಲಿಯೂ ಸಹ ಅದೇ ಆದ್ಯತೆಯನ್ನು ನೀಡಿದರೆ ಕನಿಷ್ಠ ವೇತನ ನಿಗದಿಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೈಗಾರಿಕೆ ಸ್ಥಾಪನೆಗೆ ೫ ವರ್ಷಕ್ಕೆ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಅದನ್ನು ಜೀವನ ಪರ್ಯಂತ ನೀಡಬೇಕು. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ನನಗೂ ಸಹಮತವಿದೆ. ಇದನ್ನು ಸರ್ಕಾರದೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸುತ್ತೇನೆ ಎಂದು ಹೇಳಿದ ಮಣಿವಣ್ಣನ್ ಅವರು ಪ್ರತಿ ತಿಂಗಳು ನಡೆಯುವ ಸಭೆಗಳ ವಿವರಗಳನ್ನು ಇನ್ನು ಮುಂದೆ ಸಾರ್ವಜನಿಕರು ಟ್ವೀಟರ್ ನಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಹೆಚ್ಚು ಹಣ ವಿದೆ. ಆದರೆ ಇದರ ಸದ್ಭಳಕೆ ಆಗುತ್ತಿಲ್ಲ. ಈ ಹಣವನ್ನು ಪಾರದರ್ಶಕವಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಆಗುವುದು ಅತ್ಯವಶ್ಯಕವಾಗಿದೆ.
ಸಾಮಾನ್ಯ ಜನರು ಕೈಗಾರಿಕೆ ಪ್ರದೇಶದಲ್ಲಿ ಕಾರ್ಮಿಕರಿಗಾಗಿ ನಿರ್ಮಿಸಿರುವ ಕ್ಯಾಂಟೀನ್ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪ್ರತ್ಯೇಕ ದೂರುಗಳು ಬಂದಾಗ ಅದನ್ನು ಕೂಲಂಕೂಷವಾಗಿ ತಪಾಸಣೆ ಮಾಡಬೇಕು. ಆದರೆ ಇದೂ ದುರ್ಬಳಕೆ ಆಗುತ್ತಿದ್ದು, ಎಲ್ಲ ವಿಭಾಗಗಳಲ್ಲೂ ತಪಾಸಣೆಗೆ ಮುಂದಾಗುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳಿಗೆ ಉದ್ಯಮಿಗಳು ಮನವಿ ಮಾಡಿದರು.ಸಂವಾದ ಕಾರ್ಯಕ್ರಮದಲ್ಲಿ ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಜನಾರ್ಧನ್, ಲೇಬರ್ ಕಮಿಟಿ ಛೇರ್ಮನ್ ಸುಗುಣ ಹಿರೇಮಠ್, ಹಿರಿಯ ಉಪಾಧ್ಯಕ್ಷ ಪೆರಿಕಲ್ ಸುಂದರ್,ಸೇರಿದಂತೆ ಹಲವು ಉದ್ಯಮಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ