ಕೊರಟಗೆರೆ
ರಾಜ್ಯದ ರಾಜಧಾನಿ ಬೆಂಗಳೂರು ನಗರಕ್ಕೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದ ಸಮೀಪ ಶೇಖರಣೆ ಮಾಡಿದ್ದ ಮರಳು ಅಡ್ಡೆಯ ಮೇಲೆ ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು ನೇತೃತ್ವದ ತಂಡ ದಾಳಿ ನಡೆಸಿ ನಾಲ್ಕು ಟ್ರ್ಯಾಕ್ಟರ್ ಲೋಡು ಮರಳನ್ನು ವಶಪಡಿಸಿಕೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬೋಮ್ಮಲ ದೇವಿಪುರ ಗ್ರಾಪಂ ವ್ಯಾಪ್ತಿಯ ಆದಿತಿಮ್ಮಪ್ಪ ಸ್ವಾಮಿ ದೇವಾಲಯದ ಅರಣ್ಯ ಪ್ರದೇಶದ ಸಮೀಪದ ಸರಕಾರಿ ಗೋಮಾಳದಲ್ಲಿ ಅಕ್ರಮವಾಗಿ ಶೇಖರಣೆ ಮಾಡಿರುವ ನಾಲ್ಕು ಟ್ರ್ಯಾಕ್ಟರ್ ಲೋಡು ಮರಳಿನ ಮೇಲೆ ಕಂದಾಯ ಇಲಾಖೆ ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಹೊಳವನಹಳ್ಳಿ ಸಮೀಪ ಹರಿಯುವ ಜಯಮಂಗಲಿ ನದಿಯಿಂದ ಪ್ರತಿನಿತ್ಯ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿ, ಅರಣ್ಯ ಪ್ರದೇಶದಲ್ಲಿ 5 ಲೋಡಿನಂತೆ ಅಕ್ರಮವಾಗಿ ಲಾಟು ಮಾಡುತ್ತಾರೆ. ಮಧ್ಯರಾತ್ರಿ 12 ಗಂಟೆಯ ನಂತರ ಶೇಖರಣೆ ಮಾಡಿರುವ ಮರಳನ್ನು ಲಾರಿಗೆ ತುಂಬಿ ಬೆಂಗಳೂರು ನಗರಕ್ಕೆ ಸಾಗಾಣಿಕೆ ಮಾಡುವ ಬೃಹತ್ ಜಾಲವು ಬೆಳಲಕಿಗೆ ಬಂದಿದೆ.
ಕೊರಟಗೆರೆ ತಾಲ್ಲೂಕಿನ ಗಡಿಭಾಗವಾದ ಬೊಮ್ಮಲದೇವಿ ಪುರದ ಮೂಲಕ ಪ್ರತಿದಿನ ಲಾರಿ ಮೂಲಕ ಬೆಂಗಳೂರಿಗೆ ಮರಳು ಸಾಗಾಣಿಕೆ ಆಗುತ್ತಿದೆ. ಅಕ್ರಮವಾಗಿ ನೈಸರ್ಗಿಕ ಸಂಪತ್ತು ಲೂಟಿ ಹೊಡೆಯುವ ದಂಧೆಕೋರರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಕರಣ ದಾಖಲಿಸಬೇಕು. ಗ್ರಾಮಸ್ಥರು ಕೇಳಿದರೆ ಗ್ರಾಮಸ್ಥರ ಮೇಲೆಯೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದ ಖನಿಜ ಸಂಪತ್ತು ಲೂಟಿ ಹೊಡೆಯಲು ಕಂದಾಯ ಇಲಾಖೆ ಬಿಡುವುದಿಲ್ಲ. ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಬೆಂಗಳೂರಿಗೆ ಸಾಗಾಣಿಕೆ ಆಗುವ ಮರಳು ಲಾರಿಯ ಮಾಹಿತಿಯನ್ನು ಗ್ರಾಮಸ್ಥರು ಧೈರ್ಯವಾಗಿ ಕಂದಾಯ ಇಲಾಖೆಗೆ ನೀಡಬಹುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ