ರಸ್ತೆ ಅಗೆತ: ಏಜೆನ್ಸಿಗಳ ನಿರ್ಲಕ್ಷೃಕ್ಕೆ ಆಕ್ರೋಶ

ತುಮಕೂರು
      “ವಿವಿಧ ಏಜೆನ್ಸಿಗಳು ಅಗತ್ಯ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದ ಬಳಿಕ ಅದನ್ನು ಯಥಾಸ್ಥಿತಿಗೆ ತರುವ ಬಗ್ಗೆ ನಿಸ್ಸೀಮ ನಿರ್ಲಕ್ಷೃ ತಾಳಿದ್ದು, ಇದರಿಂದ ನಾನು ಪ್ರತಿನಿಧಿಸುತ್ತಿರುವ 26 ನೇ ವಾರ್ಡ್‍ನಲ್ಲಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ” ಎಂದು ತುಮಕೂರು ಮಹಾನಗರ ಪಾಲಿಕೆಯ ಬಿಜೆಪಿ ಕಾರ್ಪೊರೇಟರ್ ಎಚ್.ಮಲ್ಲಿಕಾರ್ಜುನಯ್ಯ (26 ನೇ ವಾರ್ಡ್ -ಅಶೋಕನಗರ) ಆಕ್ರೋಶ ವ್ಯಕ್ತಪಡಿಸಿದ್ದಾರೆ.
      ತುಮಕೂರು ನಗರದ ದೋಭಿಘಾಟ್ ರಸ್ತೆಯ ದುಸ್ಥಿತಿ ಹಾಗೂ ದುರವಸ್ಥೆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಏಜೆನ್ಸಿಯವರ ಜೊತೆ ಸ್ಥಳಪರಿಶೀಲನೆ ಮಾಡಿದ ಬಳಿಕ “ಪ್ರಜಾಪ್ರಗತಿ” ಜೊತೆ ಮಾತನಾಡಿದ ಅವರು, “ನೀರು, ಗ್ಯಾಸ್ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆಯುತ್ತಿರುವುದು ಸರಿಯಷ್ಟೇ.
      ಆದರೆ ಅಗೆದ ಬಳಿಕ ನಿಯಮಾನುಸಾರ ಅದನ್ನು ಯಥಾಸ್ಥಿತಿಗೆ (ರೆಸ್ಟೊರೇಷನ್) ತರಬೇಕಿರುವುದು ಸಂಬಂಧಪಟ್ಟ ಏಜೆನ್ಸಿಯ ಜವಾಬ್ದಾರಿ. ಆದರೆ ಏಜೆನ್ಸಿಗಳವರು ಈ ವಿಷಯದಲ್ಲಿ ಉದಾಸೀನ ಮಾಡುತ್ತಿದ್ದಾರೆ. ಪಾಲಿಕೆಯ ಇಂಜಿನಿಯರಿಂಗ್ ವಿಭಾಗದವರೂ ಗಮನ ಹರಿಸುತ್ತಿಲ್ಲ. ಹೀಗಾಗಿ ರಸ್ತೆಗಳು ಹಳ್ಳ-ಗುಂಡಿಗಳಿಂದ ಕೂಡಿದ್ದು, ಮಳೆ ಬಂದಾಗ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
      ದೋಭಿಘಾಟ್ ರಸ್ತೆಯನ್ನೇ ಉದಾಹರಿಸಿದ ಅವರು, “ಈ ರಸ್ತೆಯಲ್ಲಿ ಹಗಲು-ರಾತ್ರಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದೇ ರೀತಿ ಸಾವಿರಾರು ಜನರು ಓಡಾಡುತ್ತಾರೆ. ಆದರೆ ಈಗ ಇಲ್ಲಿ ಯದ್ವಾತದ್ವಾ ಹಳ್ಳ-ಗುಂಡಿಗಳು ಉಂಟಾಗಿರುವುದರಿಂದ ಹೆಜ್ಜೆಹೆಜ್ಜೆಗೂ ತೊಂದರೆ ಉಂಟಾಗುತ್ತಿದೆ. ಅಪಘಾತಗಳುಂಟಾಗಿ, ಅನೇಕ ಜನರು ಗಾಯಗೊಂಡಿರುವ ಪ್ರಸಂಗಗಳೂ ಜರುಗಿವೆ. ಇದಕ್ಕೆ ಯಾರು ಹೊಣೆ?” ಎಂಬ ಪ್ರಶ್ನೆಯನ್ನು ಮುಂದಿಟ್ಟರು.
 “ನಮ್ಮ ವಾರ್ಡ್‍ನ ಎಸ್.ಐ.ಟಿ. ಬಡಾವಣೆಯ ತುಂಬ ಚಿಕ್ಕ ಚಿಕ್ಕ ರಸ್ತೆಗಳೇ ಇವೆ. ಈಗ ಎಲ್ಲ ರಸ್ತೆಗಳನ್ನೂ ಅಗೆಯಲಾಗಿದೆ. ಮೊದಲೇ ಚಿಕ್ಕದಾಗಿರುವ ಈ ರಸ್ತೆಗಳಲ್ಲಿ ಈಗ ಅಗೆತದಿಂದ ಹಳ್ಳ-ಗುಂಡಿಗಳು ಉಂಟಾಗಿರುವುದರಿಂದ ರಸ್ತೆ ಮತ್ತಷ್ಟು ಕಿರಿದಾದಂತಾಗಿವೆ. ಜನ-ವಾಹನ ಸಂಚಾರಕ್ಕೆ ಭಾರಿ ತೊಡಕಾಗುತ್ತಿದೆ” ಎಂದು ಹೇಳಿದರು.
“ರಸ್ತೆ ರೆಸ್ಟೊರೇಷನ್ ವಿಷಯದಲ್ಲಿ ಏಜೆನ್ಸಿಗಳವರು ಯಾರೊಬ್ಬರೂ ಜವಾಬ್ದಾರಿ ಹೊರಲು ತಯಾರಿಲ್ಲ. ಒಬ್ಬರು ಇನ್ನೊಬ್ಬರತ್ತ ಬೊಟ್ಟು ಮಾಡುತ್ತಿದ್ದಾರೆ. ಜೊತೆಗೆ ಪಾಲಿಕೆಯ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ. 24/7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಸುತ್ತಿರುವ ಏಜೆನ್ಸಿಯವರು ಕಾರ್ಮಿಕರ ಕೊರತೆಯ ನೆಪವನ್ನು ಮುಂದಿಡುತ್ತಿದ್ದು, ಅವರಿಗೆ ಸಂಬಂಧಿಸಿದ ಕಾಮಗಾರಿಗಳು ಕುಂಟುತ್ತ ಸಾಗುವಂತಾಗಿದೆ.
       ಪಾಲಿಕೆಯ ಇಂಜಿನಿಯರಿಂಗ್ ಶಾಖೆಯಂತೂ ನಿರ್ಲಿಪ್ತವಾಗಿದೆ. ಈ ಹಿಂದೆ ಐ.ಎ.ಎಸ್. ಅಧಿಕಾರಿ ಟಿ.ಭೂಬಾಲನ್ ಅವರು ಪಾಲಿಕೆಯ ಆಯುಕ್ತರಾಗಿದ್ದಾಗ ಅವರ ಹೆಸರು ಹೇಳಿದರೆ ಏಜೆನ್ಸಿಯವರು ಹಾಗೂ ಪಾಲಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಆದರೆ ಈಗಂತೂ ಯಾರೊಬ್ಬರೂ ಯಾರ ಮಾತನ್ನೂ ಕೇಳದಂತಹ ಪರಿಸ್ಥಿತಿ ತಲೆಯೆತ್ತಿದೆ” ಎಂದು ಎಚ್.ಮಲ್ಲಿಕಾರ್ಜುನಯ್ಯ ವಿಷಾದದಿಂದ ಉದ್ಗರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link