ತುಮಕೂರು:
ಆರ್.ಸಿ.ಇ.ಪಿ. (Regional Comprehensive Economic Partnership) ಇದೀಗ ಎಲ್ಲೆಡೆ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ. ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೂ ಇದರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ. ಹಾಗಾದರೆ ಈ ಒಪ್ಪಂದ ವಿರೋಧಿಸುತ್ತಿರುವ ಹಿನ್ನೆಲೆಯಾದರೂ ಏನು? ಆರ್ಸಿಇಪಿಯೊಳಗೆ ಇರುವ ಅಂಶಗಳೇನು ಎಂಬ ಬಗ್ಗೆ ಒಂದಷ್ಟು ಅವಲೋಕಿಸುವ ಸಣ್ಣ ಪ್ರಯತ್ನವಿದು.
ಚೀನಾ ಮುಂದಾಳತ್ವದಲ್ಲಿ 16 ರಾಷ್ಟ್ರಗಳು ಮಾಡಿಕೊಂಡಿರುವ ಪ್ರಾದೇಶಿಕ ಸಮಗ್ರ, ಆರ್ಥಿಕ ಸಹಭಾಗಿತ್ವ–ಮುಕ್ತ ವ್ಯಾಪಾರ ಒಪ್ಪಂದದ ಒಡಂಬಡಿಕೆಯೇ ಈ ಆರ್ಸಿಇಪಿ. ಬ್ರೂನಿ, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪೂರ್, ಥೈಲ್ಯಾಂಡ್, ವಿಯೆಟ್ನಾಂ ಒಳಗೊಂಡ ಹತ್ತು ಆಗ್ನೇಯ ಏಷಿಯಾ ರಾಷ್ಟ್ರಗಳು (ASEAN) ಹಾಗೂ ಭಾರತ, ಚೀನಾ, ಜಪಾನ್, ದಕ್ಷಿಣ ಕೋರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಒಳಗೊಂಡ ಆರು ಎಫ್.ಟಿ.ಎ ರಾಷ್ಟ್ರಗಳು ಈ ಆರ್ಸಿಇಪಿ ಒಳಗಿವೆ.
ಮೇಲ್ಕಂಡ ರಾಷ್ಟ್ರಗಳೆಲ್ಲ ಸೇರಿ ಪ್ರಾದೇಶಿಕ ಸಮಗ್ರ ಮುಕ್ತ ವಾಣಿಜ್ಯ ಒಡಂಬಡಿಕೆಯೊಂದನ್ನು ಹುಟ್ಟು ಹಾಕಲು ಕಳೆದ 6 ವರ್ಷಗಳನ್ನು ತೆಗೆದುಕೊಂಡಿವೆ. ಇದಕ್ಕಾಗಿ ಸತತ ಪ್ರಯತ್ನಗಳು ನಡೆದಿವೆ. ಈ ಬಗೆಗಿನ ಆಗುಹೋಗುಗಳನ್ನು ಪರಿಶೀಲಿಸುತ್ತಲೇ ಸುಮಾರು 27 ಸುತ್ತಿನ ಸಭೆಗಳನ್ನು ನಡೆಸಲಾಗಿದೆ. 13 ಸಭೆಗಳು ಈ ಎಲ್ಲ ದೇಶಗಳ ಮಂತ್ರಿಗಳ ಮಟ್ಟದ ಸಭೆಗಳೂ ನಡೆದಿವೆ.
ಮುಕ್ತ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಒಂದು ಒಪ್ಪಂದದ ಚರ್ಚೆ ಮತ್ತು ಮಾತುಕತೆ ಆರಂಭವಾಗಿದ್ದೇ ಕಾಂಬೋಡಿ ಯಾದಲ್ಲಿ. 2012 ರ ನವೆಂಬರ್ ತಿಂಗಳಿನಲ್ಲಿ ASEAN ಶೃಂಗ ಸಭೆ ಅಲ್ಲಿ ನಡೆದಿತ್ತು. ಪ್ರಪಂಚದಲ್ಲಿ ಇದೊಂದು ಶಕ್ತಿಕೇಂದ್ರ ಎಂದೇ ಈಗ ಇದನ್ನು ಗುರುತಿಸಲಾಗಿದೆ. ಇದರ ಸದಸ್ಯ ದೇಶಗಳ ಒಟ್ಟು ಜನಸಂಖ್ಯೆ 3.4 ಬಿಲಿಯನ್ (304 ಕೋಟಿ) ಅಂದರೆ, ಪ್ರಪಂಚದ ಸುಮಾರು ಶೇ.50 ರಷ್ಟು ಜನಸಂಖ್ಯೆಯನ್ನು ಇವು ಹೊಂದಿವೆ. ಈ ರಾಷ್ಟ್ರಗಳ ಒಟ್ಟು ಜಿಡಿಪಿ 49.5 ಟ್ರಿಲಿಯನ್ ಡಾಲರ್. ಇದು ಪ್ರಪಂಚದ ಪ್ರತಿಶತ ಸುಮಾರು ಶೇ.40 ರಷ್ಟು. ಇದರಲ್ಲಿ ಬಲಿಷ್ಠ ರಾಷ್ಟ್ರಗಳಾದ ಚೀನಾ ಹಾಗೂ ಭಾರತದ ಜಿಡಿಪಿ ಅರ್ಧದಷ್ಟಾಗಿರುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಇದು ಪ್ರಪಂಚದ ಅತಿ ದೊಡ್ಡ ವಾಣಿಜ್ಯ ಪ್ರದೇಶವಾಗಲಿದೆ. ಅಲ್ಲದೆ, ವಿಶ್ವದ ಸುಮಾರು ಅರ್ಧದಷ್ಟು ವ್ಯಾಪಾರ ವಹಿವಾಟನ್ನು ಈ ಪ್ರದೇಶವೇ ಹೊಂದಿ ಅಗ್ರಮಾನ್ಯ ವಲಯವಾಗಿ ಮಾರ್ಪಾಟಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.
ಒಂದು ಅಂದಾಜಿನ ಪ್ರಕಾರ 2050ರ ವೇಳೆಗೆ ಈ ಪ್ರದೇಶದ ಒಟ್ಟು ವಹಿವಾಟಿನ ಗಾತ್ರ 250 ಟ್ರಿಲಿಯನ್ ಡಾಲರ್ಗಳಷ್ಟಾಗಲಿದೆ ಎಂಬುದು ಅಂದಾಜು. ಈ ಸದಸ್ಯತ್ವ ರಾಷ್ಟ್ರಗಳು ತಯಾರು ಮಾಡುವ ಸುಮಾರು 95% ಉತ್ಪನ್ನಗಳನ್ನು, ಸುಮಾರು 90% ಆಯಾತ (ಆಮದು) ತೆರಿಗೆ ಇಲ್ಲದೆ ಯಾವುದೇ ರಾಷ್ಟ್ರಗಳಿಗೆ ಮುಕ್ತವಾಗಿ ವ್ಯವಹರಿಸಬಹುದು.
ಇಂತಹ ವ್ಯವಹಾರಕ್ಕೆ ಈ ಒಡಂಬಡಿಕೆ ಅವಕಾಶ ಮಾಡಿಕೊಡುತ್ತದೆ. ನೇರವಾಗಿ ಹೇಳುವುದಾದರೆ ಇದೊಂದು ಭಾರತ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ, ವಾಣಿಜ್ಯ ಒಡಂಬಡಿಕೆಯಷ್ಟೆ. ಈ ಒಡಂಬಡಿಕೆಯ ಸಾಧ್ಯಾಸಾಧ್ಯತೆಗಳನ್ನು ಹಾಗೂ ಮುಂದಿನ ಕಾಲಘಟ್ಟವನ್ನು ಗಮನಿಸುತ್ತಿರುವ ವಾಣಿಜ್ಯ ವಿಶ್ಲೇಷಕರು ಚೀನಾದ ಗೆಲುವು, ಭಾರತದ ಸೋಲು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಚೀನಾವು ಭಾರತದಲ್ಲಿ ಭದ್ರವಾಗಿ ನೆಲೆಯೂರುವ ಅವಕಾಶಕ್ಕಾಗಿ ಹಿಂದಿನಿಂದಲೂ ಪ್ರಯತ್ನಿಸುತ್ತಲೆ ಬಂದಿದೆ. ಈ ಒಡಂಬಡಿಕೆಯನ್ನೆ ಅಸ್ತ್ರವಾಗಿಸಿಕೊಳ್ಳುವ ಅವಕಾಶ ಈಗ ಆ ದೇಶಕ್ಕೆ ಬಂದೊದಗಿದೆ. ತನ್ನ ಪ್ರಾಬಲ್ಯ ಇರುವ ದೇಶಗಳನ್ನು ದಾಳವಾಗಿರಿಸಿಕೊಂಡು ಈ ಒಡಂಬಡಿಕೆ ರೂಪಿಸಲಾಗಿದೆ ಎಂದೆ ಹೇಳಲಾಗುತ್ತಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಭಾರತಕ್ಕೆ ಈ ಒಡಂಬಡಿಕೆ ಜಾರಿಯಾದರೆ ಬಹುದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳಿವೆ.
ಭಾರತ ಇಂದು ವಹಿವಾಟು ಕೊರತೆ (Trade Deficite) ಎದುರಿಸುತ್ತಿದೆ. (ನಮ್ಮ ದೇಶದಿಂದ ಮಾಡಿದ ನಿರ್ಯಾತ ಹಾಗೂ ಪಡೆದ ಆಯಾತ ಇವೆರಡರಲ್ಲಿನ ಕೊರತೆಯನ್ನು ಟ್ರೇಡ್ ಡಿಫಿಸಿಟ್ ಎಂದು ಕರೆಯಲಾಗುತ್ತದೆ.) ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ಮತ್ತಿತರ ತೆರಿಗೆಗಳ ಹೇರಿಕೆಯಿಂದಾಗಿ ಈಗಾಗಲೇ ದೇಶದ ಒಟ್ಟು ಆರ್ಥಿಕ ಉತ್ಪಾದನೆ ಕುಸಿತ ಕಂಡಿದೆ. ಆರ್ಸಿಇಪಿ ಒಡಂಬಡಿಕೆಗೆ ಸಹಿ ಹಾಕಿ ಅದು ಜಾರಿಯಾಗಿದ್ದೆ ಆದಲ್ಲಿ ಈ ವಹಿವಾಟು ಕೊರತೆ ಅದೆನ್ನೆಲ್ಲಿಗೆ ತಲುಪಿಸುತ್ತದೆಯೋ ತಕ್ಷಣಕ್ಕಂತೂ ತಿಳಿಯದು.
2017-18ರ ಲೆಕ್ಕಾಚಾರಗಳ ಪ್ರಕಾರ ಭಾರತವು ಚೀನಾಕ್ಕೆ 13.1 ಬಿಲಿಯನ್ ಡಾಲರ್ಗಳಷ್ಟು ವಹಿವಾಟು ನಿರ್ಯಾತ ಮಾಡಿದೆ. ಮತ್ತೊಂದು ಕಡೆ ಚೀನಾವು ಭಾರತಕ್ಕೆ 73.3 ಬಿಲಿಯನ್ ಡಾಲರ್ ನಿರ್ಯಾತ ಮಾಡಿದೆ. ಇದರಲ್ಲಿ 60 ಬಿಲಿಯನ್ ಡಾಲರ್ಗಳಷ್ಟು ವ್ಯಾಪಾರದ ಕೊರತೆ ಕಂಡುಬರುತ್ತದೆ. ಈಗಿನ ನಿರ್ಬಂಧಗಳು ಕೂಡಿದ್ದರೂ ಈ ಮಟ್ಟದ ಕೊರತೆ ಇದೆ. ಇನ್ನು ಈ ಒಡಂಬಡಿಕೆಯಿಂದ ವಹಿವಾಟು ಮುಕ್ತವಾದಲ್ಲಿ ಇದರ ಕಂದಕ ಅದಿನ್ನೆಷ್ಟು ಆಳವಾದೀತು ಎಂಬುದನ್ನು ಊಹಿಸಿದರೆ ಆತಂಕ ಎದುರಾಗುತ್ತದೆ.
ಇದಷ್ಟೇ ಅಲ್ಲದೆ, ಆರ್ಸಿಇಪಿಯ ಇತರೆ ಒಡಂಬಡಿಕೆ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಜೊತೆ 11.9 ಬಿಲಿಯನ್ ಡಾಲರ್ ಹಾಗೂ ಆಸ್ಟ್ರೇಲಿಯಾ ಜೊತೆ 10.2 ಬಿಲಿಯನ್ ಡಾಲರ್ಗಳ ವ್ಯಾಪಾರದ ಕೊರತೆ ಎದುರಿಸುತ್ತಿದೆ. ಈ ಮುಕ್ತ ನೀತಿಯಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹ ಕೂಡ ಕಡಿಮೆಯಾಗಲಿದೆ. ಏಕಾಏಕಿ ನೀಡುವ ಈ ವಿನಾಯಿತಿಯಿಂದ ಚೀನಾ ಹಾಗೂ ಇತರೆ ರಾಷ್ಟ್ರಗಳ ಪದಾರ್ಥಗಳು ಏಕಾಏಕಿ ನಮ್ಮ ದೇಶದೊಳಗೆ ಲಗ್ಗೆ ಇಡುವ ಸಾಧ್ಯತೆಗಳೆ ಹೆಚ್ಚು.
ಇದರಿಂದಾಗಿ ಭಾರತಕ್ಕೂ ನಿರ್ಯಾತ ಮಾಡುವ ವಲಯಕ್ಕೆ ಒಂದು ಒಳ್ಳೆಯ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಫಾರ್ಮಾಸ್ಯುಟಿಕಲ್ಸ್ ಮತ್ತು ಇನ್ನಿತರ ಪ್ರಬಲ ವಲಯಗಳು ಇದರ ಅನುಕೂಲ ಪಡೆಯಲಿವೆ. ಭಾರತಕ್ಕಿಂತ ಇತರೆ ಎಲ್ಲ ವಲಯಗಳಲ್ಲೂ (ಕೌಶಲ್ಯ, ಬಂಡವಾಳ, ತಂತ್ರಜ್ಞಾನ ಹಾಗೂ ಸರ್ಕಾರದ ಉತ್ತೇಜನ) ಬಲಿಷ್ಠವಾಗಿರುವ ಚೀನಾ ಇದರ ಲಾಭ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಒಡಂಬಡಿಕೆಯಿಂದ ದೂರವಿರಲು ಭಾರತಕ್ಕೆ ಸಾಧ್ಯವಾಗದೆ ಸಹಿ ಹಾಕಿದರೆ ಅನನುಕೂಲತೆಗಳೆ ಹೆಚ್ಚು. ಇದರಿಂದಾಗಿಯೆ ಭಾರತ ಸರ್ಕಾರ ಪೇಚಿಗೆ ಸಿಲುಕಿದೆ. ಇದರನ್ನರಿತು ಸಹಿ ಹಾಕಲು ಹಲವಾರು ಷರತ್ತುಗಳನ್ನು ಮುಂದಿಟ್ಟಿದೆ. ಆದರೆ ಭಾರತದ ಷರತ್ತುಗಳನ್ನು ಕೇಳಲು ಬಹುಪಾಲು ದೇಶಗಳು ತಯಾರಿಲ್ಲ. ಆ ಷರತ್ತುಗಳನ್ನು ತಿರಸ್ಕರಿಸಿವೆ. ನವೆಂಬರ್ 2019 ರ ಒಳಗೆ ಭಾರತವನ್ನು ಈ ಒಡಂಬಡಿಕೆಯಿಂದ ದೂರವಿಟ್ಟಾದರೂ ಸರಿ, ಬೇಗನೆ ಈ ಒಡಂಬಡಿಕೆ ಜಾರಿಯಾಗುವಂತೆ ನೋಡಿಕೊಳ್ಳಲು ಕಾತುರತೆ ತೋರುತ್ತಿವೆ.
ತಮ್ಮ ತಮ್ಮ ದೇಶಗಳ ಪರಿಸ್ಥಿತಿಗೆ ಅನುಗುಣವಾಗಿ ಆಯಾ ದೇಶಗಳ ಚಿಂತೆ, ಆತಂಕಗಳು ಹಾಗೂ ಮುಂದಾಲೋಚನೆಗಳು ಇದ್ದೆ ಇರುತ್ತವೆ. ನಾವು ಭಾರತದ ದೃಷ್ಟಿಯಿಂದ ನೋಡುವುದಾದರೆ ಸದ್ಯದ ಮಟ್ಟಿಗೆ ಈ ಒಡಂಬಡಿಕೆ ಒಂದು ಆಘಾತ ಉಂಟು ಮಾಡುವ ಕರಾಳ ಒಪ್ಪಂದ ಎನ್ನುವುದರಲ್ಲಿ ಯಾವುದೆ ಅಡ್ಡಿಯಿಲ್ಲ. ಭಾರತವಿಂದು ಬಹುದೊಡ್ಡ ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. ಇಲ್ಲಿರುವ ಉತ್ಪಾದಕರ ಪರಿಸ್ಥಿತಿ ಈಗಿನ ಆರ್ಥಿಕ ಹಿಂಜರಿಕೆ ಸಮಯದಲ್ಲಿ ಹೀನಾಯ ಸ್ಥಿತಿಯಲ್ಲಿದೆ.
ಆಟೋಮೋಬೈಲ್ ಕ್ಷೇತ್ರದಿಂದ ಹಿಡಿದು ಎಫ್ಎಂಸಿಜಿ ವಲಯದವರೆಗೆ ಎಲ್ಲ ಕ್ಷೇತ್ರಗಳ ಉದ್ದಿಮೆಗಳ ಮೇಲೆ ಕರಿಮೋಡದ ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಚೀನಾದಂತಹ ಬಲಿಷ್ಠ ರಾಷ್ಟ್ರವನ್ನು ಹಾಗೂ ಇನ್ನಿತರ ದೇಶಗಳ ಬಲಿಷ್ಠ ವಲಯಗಳನ್ನು ಸ್ಪರ್ಧಿಸಿ ಎದುರಿಸುವುದನ್ನು ಬಿಟ್ಟರೆ ಬೇರೆ ದಾರಿಯೇ ಕಾಣದಂತಾಗುತ್ತದೆ. ಕೇಂದ್ರ ಸರ್ಕಾರ ಇಂತಹ ಒಂದು ಒಡಂಬಡಿಕೆಗೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ಇನ್ನೂ ಮುಂದುವರೆದಿದೆ. ಒಂದು ವೇಳೆ ಮುಂದಿನ ಮಾರ್ಗಗಳೆ ಇಲ್ಲದೆ, ಒಪ್ಪಿಕೊಳ್ಳಲೇಬೇಕು ಎಂಬ ನಿರ್ಧಾರ ಕೈಗೊಂಡಿದ್ದೆ ಆದಲ್ಲಿ ಅದರಿಂದ ಉದ್ದಿಮೆಗಳನ್ನು ಉಸಿರುಗಟ್ಟಿಸುವ ಪರಿಸ್ಥಿತಿಗೆ ದೂಡುವ ಸಂಭವವೆ ಹೆಚ್ಚು. ಏಕೆಂದರೆ, ಇಂತಹ ಒಡಂಬಡಿಕೆಗೆ ಸಿಲುಕಿ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಅವರೊಂದಿಗೆ ಸ್ಪರ್ಧಿಸಲು ಸಾಧ್ಯ?
ಈಗಾಗಲೇ ಹಲವು ವಿಧಗಳಲ್ಲಿ ಹೈರಾಣಾಗಿ ಹೋಗಿರುವ ಸಣ್ಣ ಉದ್ದಿಮೆಗಳು ಈ ಒಡಂಬಡಿಕೆಯಿಂದಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ಕೇವಲ ದೊಡ್ಡ ಉದ್ದಿಮೆಗಳಿಗೆ ಮಾತ್ರವೆ ಅನುಕೂಲವಾಗಬಹುದು. ಏಕೆಂದರೆ ಸ್ಪರ್ಧೆಗೆ ಇಳಿಯುವ ಅವಕಾಶ ಇರುವುದು ಅಂತಹವರಿಗೆ ಮಾತ್ರ ಸಾಧ್ಯ.
ನಮ್ಮ ದೇಶ ಕೃಷಿ ಪ್ರಧಾನವಾದ ರಾಷ್ಟ್ರ. ಅಲ್ಲದೆ, ಉತ್ಪಾದನೆಗಿಂತ ಅತಿ ಹೆಚ್ಚು ಕೊಳ್ಳುವ ದೇಶ. (Consuming Country) ಉತ್ಪಾದನೆಗೆ ಉತ್ತೇಜನ ಇಲ್ಲದೆ ಸಣ್ಣ ಸಣ್ಣ ವಸ್ತುಗಳಿಗೂ ಬೇರೆ ದೇಶದ ಉತ್ಪನ್ನಗಳಿಗೆ ಅವಲಂಬಿತ ರಾಗುವುದು ಅನಿವಾರ್ಯ ಎನ್ನಿಸುತ್ತದೆ. ಇದರಿಂದಾಗಿ ನಮ್ಮ ದೇಶದ ಹಣದ ಹೊರ ಹರಿವು ಹೆಚ್ಚಾಗಲಿದ್ದು, ಡಾಲರ್ ಎದುರು ರೂಪಾಯಿ ಕುಸಿತ ಇನ್ನೂ ಹೆಚ್ಚಳವಾಗುವ ಸಾಧ್ಯತೆಯೇ ಹೆಚ್ಚು.
ಇಂತಹ ಪರಿಸ್ಥಿತಿಯಿಂದ ವ್ಯಾಪಾರ ಕೊರತೆಯಲ್ಲಿ ಕಂದಕ ಹೆಚ್ಚಿ ಈ ಕಂದಕ ಯಾವ ಮಟ್ಟಕ್ಕೆ ತಲುಪುತ್ತದೆ ಎಂಬುದನ್ನು ಹೇಳಲಾಗದು. ನವೆಂಬರ್ ತಿಂಗಳಲ್ಲಿ ಸಹಿ ಹಾಕಿದರೆ ಮುಂದಿನ 2 ವರ್ಷಗಳಲ್ಲಿ ಒಡಂಬಡಿಕೆಯ ಕಾರ್ಯಾನುಷ್ಠಾನ ಸಾಧ್ಯವಾಗಲಿದೆ. ಅದೇನೆ ಇದ್ದರೂ ಭಾರತ ಸರ್ಕಾರ ಪ್ರಸ್ತುತ ಎಚ್ಚರಿಕೆಯ ಹೆಜ್ಜೆಯನ್ನೆ ಇಡುತ್ತಿದ್ದರೂ ಸಹ ಒಡಂಬಡಿಕೆಗೆ ಬರುವ ಸಾಧ್ಯತೆಗಳೇ ಹೆಚ್ಚು ಕಾಣುತ್ತಿವೆ. ಆದರೆ ಬಹುಪಾಲು ವಲಯದ ದಿಗ್ಗಜರು, ವಾಣಿಜ್ಯ ಪರಿಣಿತರು ಇದನ್ನು ಖಂಡಿಸುತ್ತಿದ್ದು, ಈ ಪರಿಧಿಯೊಳಗೆ ಆರ್ಎಸ್ಎಸ್, ಸ್ವದೇಶಿ ಜಾಗರಣ ಮಂಚ್, ಕಿಸಾನ್ ಮಜ್ದೂರ್ ಸಂಘ ಹಾಗೂ ಇನ್ನಿತರೆ ರೈತ ಸಂಘಟನೆಗಳೂ ಕೂಡ ಇವೆ ಎಂಬುದು ಇಲ್ಲಿ ಗಮನಾರ್ಹ ಅಂಶ.
ಟಿ ಎನ್ ಮಧುಕರ್
ಸಹ ಸಂಪಾದಕರು ,ಪ್ರಜಾಪ್ರಗತಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ