ತುಮಕೂರು:
ದೀಪಾವಳಿ ಎಂದರೆ ಪಟಾಕಿಯ ಸದ್ದು ಎಂದೇ ಎಲ್ಲರ ಮನೆ ಮಾತಾಗಿತ್ತು. ದೀಪಾವಳಿ ಹಬ್ಬ ಬರುವುದನ್ನೇ ಮಕ್ಕಳು ಕಾಯುತ್ತಿದ್ದರು. ಹಬ್ಬಕ್ಕೂ ಮುನ್ನವೆ ಪಟಾಕಿಗಳನ್ನು ಖರೀದಿಸುತ್ತಿದ್ದರು. ನಿರಂತರವಾಗಿ ಮೂರು ದಿನಗಳ ಕಾಲ ಪಟಾಕಿಯ ಸದ್ದು ನಗರಗಳಲ್ಲಿ ಮನೆಮಾಡುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಪಟಾಕಿಯ ಆರ್ಭಟ ಕಡಿಮೆಯಾಗುತ್ತಿದೆ. ದೀಪಾವಳಿ ಎಂದರೆ ಕೇವಲ ಪಟಾಕಿಯಲ್ಲ, ಅದೊಂದು ದೀಪದ ಹಬ್ಬ ಎಂಬುದನ್ನು ಹಲವರು ವೈವಿಧ್ಯಮಯವಾಗಿ ನಿರೂಪಿಸುತ್ತಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ವಿಶಿಷ್ಟ ಆಚರಣೆಗಳನ್ನು ಆಚರಿಸುತ್ತಿದ್ದಾರೆ. ಅದೆಷ್ಟೋ ಮನೆಗಳಲ್ಲಿ ಪಟಾಕಿಯ ಸದ್ದು ಕಡಿಮೆಯಾಗಿದೆ. ಮಕ್ಕಳೂ ಸಹ ಹಿಂದಿನಂತೆ ಈಗ ಹಠ ಹಿಡಿಯುತ್ತಿಲ್ಲ. ಇದು ಸಾರ್ವತ್ರಿಕ ಅಲ್ಲದೆ ಹೋದರೂ ಪಟಾಕಿಯ ದುರಂತಗಳು, ಅದರಿಂದಾಗುವ ದುಷ್ಪರಿಣಾಮಗಳ ಅರಿವು ಸಾರ್ವಜನಿಕವಾಗಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿರುವುದರಿಂದ ಪಟಾಕಿಯ ಸದ್ದು ದಿನೇ ದಿನೇ ಅಡಗುತ್ತಿರುವುದನ್ನು ನಗರದಲ್ಲಿ ಕಾಣಬಹುದಾಗಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ನೇತ್ರಾಲಯಗಳು, ಆಸ್ಪತ್ರೆಗಳು ತೆರೆದೇ ಇರುತ್ತಿದ್ದವು. ದಿನದ 24 ಗಂಟೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದವು. ಯಾವ ಸಂದರ್ಭದಲ್ಲಿ ಯಾವ ಮಕ್ಕಳ ಕಣ್ಣಿಗೆ ಹಾನಿಯಾಗುವುದೋ ಎಂಬ ಆತಂಕ ಎದುರಾಗುತ್ತಿತ್ತು. ಕಣ್ಣಿನ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆಯೂ ಅಷ್ಟೇ ಹೆಚ್ಚಾಗಿತ್ತು. ಖಾಸಗಿ ಆಸ್ಪತ್ರೆಗಳು ಮಾತ್ರವಲ್ಲದೆ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗವು ಸಹ ದಿನವಿಡೀ ರಾತ್ರಿ ಹಗಲು ತೆರೆದು ಚಿಕಿತ್ಸೆಗೆ ಸನ್ನದ್ಧವಾಗಿರುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅಂತಹ ದೊಡ್ಡ ಮಟ್ಟದ ಅನಾಹುತಗಳು ಕಂಡುಬರುತ್ತಿಲ್ಲ.
ಬೆಂಗಳೂರು ಮಾತ್ರ ಇದಕ್ಕೆ ತದ್ವಿರುದ್ಧ. ಅಲ್ಲಿ ಪಟಾಕಿಗಳ ಆರ್ಭಟ ನಿಂತಿಲ್ಲ. ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಇಳಿಮುಖವಾಗಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದಾದರೂ ತುಮಕೂರಿನಷ್ಟು ಇಳಿಕೆಯಾಗಿಲ್ಲ. ತುಮಕೂರು ನಗರದಲ್ಲಿ ಕಳೆದ 5-6 ವರ್ಷಗಳ ಹಿಂದೆ ಮೂರ್ನಾಲ್ಕು ಕಡೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು.
ಸರ್ಕಾರಿ ಜೂನಿಯರ್ ಕಾಲೇಜು, ಬಸವೇಶ್ವರ ಮೈದಾನ, ಕೋಡಿ ಬಸವೇಶ್ವರ ದೇವಸ್ಥಾನದ ರಸ್ತೆಯ ಮೈದಾನ ಹೀಗೆ ನಾಲ್ಕೈದು ಕಡೆ ಪಟಾಕಿಗಳ ಅಂಗಡಿಗಳು ಭರ್ಜರಿಯಾಗಿ ತೆರೆಯುತ್ತಿದ್ದವು. ಅಷ್ಟೇ ವಹಿವಾಟು ನಡೆಯುತ್ತಿತ್ತು. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳು ತೆರೆದರೂ ಎಲ್ಲವೂ ಭರ್ಜರಿ ವಹಿವಾಟು ನಡೆಸುತ್ತಿದ್ದವು. ಈಗ ಸೀಮಿತ ಪ್ರದೇಶದ್ಲಲಿ ಒಂದೆರಡು ಅಂಗಡಿಗಳು ತೆರೆದಿದ್ದು, ಅಲ್ಲಿ ಮಾತ್ರ ವಹಿವಾಟು ನಡೆಯುತ್ತಿದೆ.
ತುಮಕೂರು ನಗರದಲ್ಲಿ ಪಟಾಕಿಗಳ ಸದ್ದು ಕಡಿಮೆಯಾಗಲು ಹಲವು ಕಾರಣಗಳಿವೆ. ಮುಖ್ಯವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕೆಂಬ ಜಾಗೃತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಶಾಲೆಗಳಲ್ಲಿ ಈ ಬಗ್ಗೆ ವ್ಯಾಪಕ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ಶಿಕ್ಷಕರ ಹಿತವಚನ ಹೆಚ್ಚು ಪ್ರಭಾವ ಬೀರುತ್ತಿದ್ದು, ಹಠ ಹಿಡಿಯುವುದರಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ಪಟಾಕಿ ಬೇಕೇಬೇಕೆಂದು ಹಿಂದೆ ಹಠ ಹಿಡಿದು ಪಟಾಕಿಗಾಗಿ ಹಂಬಲಿಸುತ್ತಿದ್ದ ಮಕ್ಕಳ ಶೇಕಡಾವಾರು ಪ್ರಮಾಣದ ಸಂಖ್ಯೆ ಅರ್ಧದಷ್ಟು ಇಳಿಮುಖವಾಗಿದೆ.
ಮಾಧ್ಯಮಗಳಲ್ಲಿ ಬರುವ ಮಾಹಿತಿ, ಶಾಲೆಗಳಲ್ಲಿ ನೀಡಲಾಗುತ್ತಿರುವ ಅರಿವು, ಪೋಷಕರ ಎಚ್ಚರಿಕೆ ಇವೆಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ. ಶಾಲಾ ಕಾಲೇಜುಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟು ಮಾಡಬಹುದಾದ ಪಟಾಕಿಗಳನ್ನು ಸಿಡಿಸಬಾರದು ಎಂದು ಸರ್ಕಾರವೇ ಹೇಳಿದೆ. ಇವೆಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದರೆ ಪೋಷಕರಂತೂ ಪಟಾಕಿಯ ಸಹವಾಸವೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿರುವಂತೆ ಕಾಣುತ್ತಿದೆ.
ಇದಕ್ಕೂ ಹಲವಾರು ಕಾರಣಗಳಿವೆ. ಹಿಂದೆಲ್ಲ ಕಡಿಮೆ ದರಕ್ಕೆ ಸಿಗುತ್ತಿದ್ದ ಪಟಾಕಿಗಳು ಈಗ ದುಪ್ಪಟ್ಟಾಗಿವೆ. ಏರುತ್ತಿರುವ ದರ, ಆರ್ಥಿಕ ಹಿಂಜರಿತ, ಕೈನಲ್ಲಿ ಹಣದ ಹರಿವು ಕಡಿಮೆಯಾಗುತ್ತಿರುವುದು, ಪಟಾಕಿಯ ದುಷ್ಪರಿಣಾಮ ಇವೆಲ್ಲವೂ ಪೋಷಕರನ್ನು ಒಮ್ಮೆ ಚಿಂತಿಸುವಂತೆ ಮಾಡಿವೆ. ಹೀಗಾಗಿ ಹಲವು ಪೋಷಕರು ಮಕ್ಕಳಿಗೆ ಪಟಾಕಿ ಕೊಡಿಸಲು ಹಿಂದೇಟು ಹಾಕಿದ ಅನೇಕ ಉದಾಹರಣೆಗಳಿವೆ.ಏನೇ ಇರಲಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಬಹುದಾದ ಪಟಾಕಿಗಳನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ದೀಪಾವಳಿಗೆ ಹೆಚ್ಚು ಒತ್ತು ಕೊಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಬೆಳವಣಿಗೆ.







