ಪಾಲಿಕೆ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನ

ದಾವಣಗೆರೆ

    ಮೂಲಭೂತ ಸೌಕರ್ಯ ಕಲ್ಪಿಸದೇ ಸಂಪೂರ್ಣವಾಗಿ ಕಡೆಗಣಿಸಿರುವ ಮಹಾನಗರ ಪಾಲಿಕೆಯ ಕ್ರಮ ವಿರೋಧಿಸಿ, ಮತದಾನ ಬಹಿಷ್ಕರಿಸಲು ಪಾಲಿಕೆ ವ್ಯಾಪ್ತಿಯ 43ನೇ ವಾರ್ಡ್‍ನ ಹೊಸ ಕುಂದುವಾಡದ ನಾಗರೀಕರು ತೀರ್ಮಾನಿಸಿದ್ದಾರೆ.

    ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸ ಕುಂದುವಾಡದ ರಾಘವೇಂದ್ರ, ಹೊಸ ಕುಂದುವಾಡವು ನಗರಸಭೆ ಆಡಳಿತದಲ್ಲಿ ಹತ್ತು ವರ್ಷ ಮತ್ತು ಪಾಲಿಕೆ ಆಡಳಿತದಲ್ಲಿ ಹತ್ತು ವರ್ಷ ಸೇರಿ ಒಟ್ಟು 20 ವರ್ಷಗಳ ಕಾಲ ದಾವಣಗೆರೆ ಸ್ಥಳೀಯ ಸಂಸ್ಥೆಯ ಆಡಳಿತದ ವ್ಯಾಪ್ತಿಯಲ್ಲಿ ಇದ್ದರೂ, ಇಲ್ಲಿಯ ನಾಗರೀಕರಿಂದ ತೆರಿಗೆ ವಸೂಲಿ ಮಾಡಿರುವ ಮಹಾನಗರ ಪಾಲಿಕೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸದೇ ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ವಿರೋಧಿಸಿ, ನ.12ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

   ಇಡೀ ದಾವಣಗೆರೆ ಮಹಾನಗರಕ್ಕೆ ನೀರು ಪೂರೈಸುವ ಕುಂದುವಾಡ ಕೆರೆ ಕೂಗಳತೆಯ ದೂರದಲ್ಲಿದ್ದರೂ 15 ದಿನಗಳಿಗೊಮ್ಮೆ ಪಾಲಿಕೆ ಕುಡಿಯುವ ನೀರು ಪೂರೈಸುತ್ತಿದೆ. ಇಲ್ಲಿಯ ಜನತೆ ದಾವಣಗೆರೆಗೆ ಬರಲು ಬಸ್ ಸೌಕರ್ಯಗಳಿಲ್ಲ. ಹೀಗಾಗಿ ಇಲ್ಲಿಂದ ನಗರಕ್ಕೆ ಬರುವ ದಿನಗೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಬರಬೇಕಾಗಿದೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ. ಉತ್ತಮ ರಸ್ತೆಗಳಿಲ್ಲ. ಬೀದಿ ದೀಪದ ವ್ಯವಸ್ಥೆ ಇಲ್ಲ.

    ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಹೊಸ ಕುಂದುವಾಡದ ಜನತೆ ಸಂಕಷ್ಟದಲ್ಲಿ ಬದುಕುತ್ತಿದ್ದಾರೆಂದು ಆರೋಪಿಸಿದರು.ಇನ್ನೂ ಈ ಭಾಗದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದ ಮಳೆಗಾಲದಲ್ಲಿ ದೊಡ್ಡ ಮಳೆ ಸುರಿದಾಗಲೆಲ್ಲಾ ಮನೆಗಳಿಗೆ ನೀರು ನುಗುತ್ತದೆ. ನಮ್ಮ ವಾರ್ಡ್‍ನಿಂದ ಆಯ್ಕೆಯಾದ ಪಾಲಿಕೆ ಸದಸ್ಯರು ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಅನುದಾನ ತರುವುದಿರಲಿ. ಇನ್ನೊಂದು ಚುನಾವಣೆ ಬರುವ ವರಗೆ ನಮ್ಮ ಕಡೆ ತಿರಿಗಿಯೇ ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    43ನೇ ವಾರ್ಡ್‍ನಲ್ಲಿ ಒಟ್ಟು 6 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಹೊಸ ಕುಂದುವಾಡದಲ್ಲಿ 2500ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ, ಅತೀ ಹೆಚ್ಚು ಮತದಾರರಿರುವ ಶಾಮನೂರಿನವರೇ ಈ ವರೆಗೂ ವಾರ್ಡ್ ಅನ್ನು ಪ್ರತಿನಿಧಿಸಿ ಆಯ್ಕೆಯಾಗುತ್ತಾ ಬಂದಿದ್ದಾರೆ. ನಮ್ಮ ಭಾಗದ ಸಮಸ್ಯೆಯನ್ನು ಪಾಲಿಕೆ ಸದಸ್ಯರ ಬಳಿಗೆ ತೋಡಿಕೊಳ್ಳಲು ಹೋದರೆ, ಅವರು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

     ಈ ಎಲ್ಲಾ ಸಮಸ್ಯೆಗಳಿಂದ ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದ ಅವರು, ಹೊಸ ಕುಂದುವಾಡಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಪಾಲಿಕೆ ಸದಸ್ಯರು ಈ ಭಾಗದಲ್ಲಿ ಜನಸಂಪರ್ಕ ಕಚೇರಿ ಆರಂಭಿಸಿ, ವಾರಕ್ಕೆ ಎರಡು ಬಾರಿಯಾದರೂ ಭೇಟಿ ನೀಡಿ, ಜನರ ಸಂಕಷ್ಟಗಳನ್ನು ಆಲಿಸಬೇಕು. ಹೊಸ ಕುಂದುವಾಡವನ್ನೇ ಪ್ರತ್ಯೇಕ ವಾರ್ಡ್ ಅನ್ನಾಗಿ ಘೋಷಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

     ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರು ಲಿಖಿತ ಭರವಸೆ ನೀಡಿದರೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವಂತೆ ಮತದಾರರ ಮನವೊಲಿಸಲು ನಾವು ಸಹ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಹೊಸ ಕುಂದುವಾಡದ ದೇವಣ್ಣರ ಬಸವರಾಜಪ್ಪ, ಜಿಗಳಿ ಹನುಮಂತಪ್ಪ, ಸುರೇಶ್.ಜಿ, ರವೀಂದ್ರ, ಮಂಜುನಾಥ್, ಶ್ರೀನಿವಾಸ್, ಪ್ರವೀಣ, ಹಾಲೇಶ್, ಯಲ್ಲಪ್ಪ, ಚಿರಂಜೀವಿ, ಶಿವಕುಮಾರ್, ರುದ್ರೇಶ್, ಅಜೇಯ, ಅಣ್ಣಪ್ಪ, ಸಂಜು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link