ಮಕ್ಷಿಕಾಪುರಿಗೆ ಮೋಕ್ಷಕಾಣಿಸಲು ಹೊರಟ ಮಾಂಸದಂಗಡಿ ಮಾಲೀಕರು”

ತಿಪಟೂರು
   ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಗಾದೆಯನ್ನು ಇತಿಹಾಸ ಪ್ರಸಿದ್ಧ ಮಕ್ಷಿಕಾಪುರಿ ಎಂದೆ ಹೆಸರುಗಳಿಸಿರುವ ನೊಣವಿನಕೆರೆ ಈಗ ಗಾದೆಯನ್ನು ಸುಳ್ಳುಮಾಡಲು ಹೊರಟಿದೆ.
   ನೊಣವಿನಕೆರೆಯು ತಾಲ್ಲೂಕಿನಲ್ಲೇ 18 ಕಿ.ಮೀ ಸುತ್ತಳತೆಯನ್ನು ಹೊಂದಿದ್ದು ದೊಡ್ಡಕೆರೆಯಾಗಿದೆ. ಆದರೆ ಇದಕ್ಕೆ ಗ್ರಾಮ ಪಂಚಾಯಿತಿ ಸೇರಿದಂತೆ ಕೋಳಿ ಮತ್ತು ಮಾಂಸದಂಗಡಿ ಮಾಲೀಕರು ಕೆರೆಯ ಸ್ವಚ್ಛಪರಿಸರವನ್ನು ಹಾಳುಮಾಡುವುದಲ್ಲದೆ, ಸಾಂಕ್ರಾಮೀಕ ರೋಗವನ್ನು ಹರಡುವ ಭೀತಿಯನ್ನು ಉಂಟುಮಾಡುತ್ತಿದೆ.
    ಗ್ರಾಮ ಪಂಚಾಯಿತಿಯ ಅನುಮತಿಯಿಲ್ಲ : ಇಲ್ಲಿರುವ ಬಹುತೇಕ ಕೋಳಿ ಅಂಗಡಿಗಳಿಗೆ ಗ್ರಾಮ ಪಂಚಾಯಿತಿಯ ಅನುಮತಿ ಪಡೆಯುವುದು ಮತ್ತು ಅವರು ಕೊಡುವುದು ಕಡ್ಡಾಯ. ಆದರೆ ಇಲ್ಲಿ ಯಾರು ಅನುಮತಿಯನ್ನು ನೀಡಿಲ್ಲ ಮತ್ತು ಅಂಗಡಿಯವರು ಪಡೆದುಕೊಳ್ಳುವ ಗೋಜಿಗೂ ಹೋಗಿಲ್ಲ. ಪಿ.ಡಿ.ಓ ಹೇಳುವಂತೆ ಇಲ್ಲಿರುವ ಕೋಳಿ ಮತ್ತು ಮಾಂಸದಂಗಡಿಯ ಮಾಲೀಕರುಗಳಲ್ಲಿ ಮೂರ್ನಾಲ್ಕು ಜನ ಗ್ರಾಮಪಂಚಾಯಿತಿಯ ಸದಸ್ಯರಾಗಿದ್ದು ಕೋಳಿ ಅಂಗಡಿಗಳ ಮೇಲೆ ಯಾವುದೇ ತರಹದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳದಿರುವುದಕ್ಕೆ ಪರೋಕ್ಷವಾಗಿ ಕಾರಣೀಭೂತರಾಗಿದ್ದಾರೆ.
      ಪವಾನಗಂಗೆ ಮಲಿನವಾಗುವ ಭೀತಿ: ಹೇಮಾವತಿ ನೀರಿನಿಂದ ಸದಾಕಾಲ ಅಂದರೆ ವರ್ಷದಲ್ಲಿ 8 ರಿಂದ 9 ತಿಂಗಳುಗಳ ಕಾಲ ತುಂಬಿರುವ ಈ ಕೆರೆಯು ತಾಲ್ಲೂಕಿನಲ್ಲಿ ಪ್ರಕೃತಿ ಪ್ರಿಯರಿಗೆ ಆಹ್ವಾನವನ್ನು ನೀಡುತ್ತಿರುತ್ತದೆ. ಯಾರೇ ಆಗಲಿ ಇಲ್ಲಿರುವ ಒಂದೂವರೆ ಮೈಲಿ ಏರಿಯಲ್ಲಿ ಹೋಗುವಾಗ ಅದರಲ್ಲೂ ಸೂರ್ಯಾಸ್ತದ ವೇಳೆ ನಿಲ್ಲದೆ ಸುಮ್ಮನೇ ಹೋಗವ ಮಾತೇ ಇಲ್ಲ. ಇಲ್ಲಿನ ಸೂರ್ಯಾಸ್ಥವನ್ನು ವೀಕ್ಷಿಸುವುದೆ ಒಂದು ಚಂದ.
 
     ಆದರೆ ಇಲ್ಲಿ ಕೋಡಿಬಿದ್ದು ಹೊರಡುವ ನೀರು ಇತಿಹಾಸ ಪ್ರಸಿದ್ದವಾದ ಗಂಗಾಧರೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ ಮಲ್ಲಾಘಟ್ಟ ಕೆರೆಯನ್ನು ಸೇರುತ್ತದೆ. ಈ ಕೆರೆಯು ಸುತ್ತಮುತ್ತಲಿನ ಜನರಿಗೆ ಮತ್ತು ಧಾರ್ಮಿಕ ಕ್ಷೇತ್ರವಾಗಿರುವುದಲ್ಲದೆ ಹಲವಾರು ಜನರು ಗಂಗೆಯನ್ನು ಪೂಜಿಸಲು ಮತ್ತು ತಮ್ಮ ದೇವಸ್ಥಾನ ಮತ್ತು ಜಾತ್ರಾ ಸಂದರ್ಭದಲ್ಲಿ ಇಲ್ಲಿನ ನೀರನ್ನೆ ಗಂಗೆ ಎಂದು ತಿಳಿದು ತೆಗೆದುಕೊಂಡು ಹೋಗುವುದೂ ಇದೆ. 
     ಆದರೆ ಇಂತಹ ಪವಿತ್ರಗಂಗೆಯನ್ನು ನೊಣವಿನಕೆರೆಯ ಕೋಳಿ ಅಂಗಡಿಯ ಮಾಲೀಕರು ಇಲ್ಲಸಲ್ಲದ ಕೋಳಿ ತ್ಯಾಜ್ಯವನ್ನು ಸುರಿದು ನೀರನ್ನು ಕಲುಷಿತ ಗೊಳಿಸುವುದಲ್ಲದೆ ಸ್ಥಳದ ಪಾವಿತ್ರ್ಯತೆಯನ್ನು ಹಾಳುಮಾಡುವುದಲ್ಲದೆ ಮಾನವರು ಸೇರಿದಂತೆ ಪಶು, ಪಕ್ಷಿ, ಪ್ರಾಣಿಗಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ.
 
    ಕೋಳಿತ್ಯಾಜ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಚನೆ : ಇಲ್ಲಿ ಮಾಂಸದಂಗಡಿಯ ತ್ಯಾಜ್ಯವನ್ನು ಸುರಿಯುತ್ತಿರುವುದು ಇದೇ ಮೊದಲೇನಲ್ಲ. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇದರ ಬಗ್ಗೆ ಜಿಲ್ಲಾಧಿಕಾರಿಗಳು ತಾಲ್ಲೂಕಿನ ತಹಸೀಲ್ದಾರರಿಗೂ ಸೂಚನೆ ನೀಡಿ ಇದನ್ನು ಪರಿಹರಿಸಲು ತಿಳಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರರೂ ಕೋಳಿ ಅಂಗಡಿಯವರಿಗೆ ನೋಟೀಸ್ ನೀಡಿ ತಮ್ಮ ತಮ್ಮ ಖಾಸಗಿ ಜಮೀನಿನಲ್ಲೇ ತಮ್ಮ ಅಂಗಡಿಯ ತ್ಯಾಜ್ಯವನ್ನು ವಿಸರ್ಜನೆ ಮಾಡಬೇಕೆಂದು ತಿಳಿಸಿದ್ದರು.
    ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡದ ಗ್ರಾ.ಪಂ ಅಧಿಕಾರಿಗಳು : ನೊಣವಿನಕೆರೆ ಪಿ.ಡಿ.ಓ ಆಗಿ 2 ವರ್ಷ ಕಳೆದಿದೆ. ಆದರೆ ಕಾರ್ಯದರ್ಶಿಯಾಗಿ ಬಂದು 6 ವರ್ಷಗಳೂ ಕಳೆದಿದ್ದು ಎಲ್ಲಿ ಯಾವ ರೀತಿ ಅಭಿವೃದ್ಧಿಮಾಡಬೇಕೆಂದು ಇಲ್ಲಿನ ಪಿ.ಡಿ.ಓ ಶಿವನಂಜೇಗೌಡರಿಗೆ ತಿಳಿದಂತೆ ಕಾಣುತ್ತಿಲ್ಲ. ಪ್ರತಿ ಬಾರಿ ಗ್ರಾ.ಪಂ. ಸದಸ್ಯರ ಸಭೆ ಕರೆದಾಗಲೂ ನಿಮ್ಮ ಅಭಿಪ್ರಾಯ ವೇಳೆ ನಿಮ್ಮ ಅಭಿಪ್ರಾಯ ಹೇಳಿ ಎಂದು ಸದಸ್ಯರನ್ನೇ ಕೇಳುತ್ತಾರೆ.
   ಆಗ ಕೋಳಿ ಅಂಗಡಿಗಳ ಮಾಲೀಕರುಗಳಾದ ಸದಸ್ಯರುಗಳು ನಿಮ್ಮಿಷ್ಟವೆಂದು ತಿಳಿಸಿದಾಗ, ಈ ವಿಷಯಬಿಟ್ಟು ಮುಂದೆ ಹೋಗೋಣ ಎಂದು ಪಿ.ಡಿ.ಓ ಬಿಡುತ್ತಾರೆ. ಕೊನೆ ಕೋಳಿ ಅಂಗಡಿಯ ಬಗ್ಗೆ ಸ್ಪಷ್ಟ ನಿಲುವು ತಾಳಲಾಗುತ್ತಿಲ್ಲ. ಸಭೆಯಲ್ಲಿ ಒಮ್ಮತದ ಕೊರತೆಯಿದೆ ಎಂದು ಅಲ್ಲಿಗೆ ಬಿಡುತ್ತಿದ್ದು, ಪಿ.ಡಿ.ಓ ಕೋಳಿ ಅಂಗಡಿಗಳ ಮಾಲೀಕರಿಂದ ಕಮೀಷನ್ ವಸೂಲಿಮಾಡುತ್ತಿದ್ದಾರೆ ಮತ್ತು ಇವರು ಇಲ್ಲಿಂದ ವರ್ಗಾವಣೆ ಆಗುವವರೆಗೂ ಇಲ್ಲಿನ ಕೋಳಿ ಅಂಗಡಿಗಳಿಗೆ ಯಾವುದೇ ಭಯವಿಲ್ಲವೆಂದು ಸಾರ್ವಜನಿಕರು ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.
     ಶೀಘ್ರವಾಗಿ ಈ ಕೋಳಿ ತ್ಯಾಜ್ಯದ ಸಮಸ್ಯೆಯನ್ನು ಬಗೆಹರಿಸಿ ನಮ್ಮ ಕೆರೆಯ ಸ್ವಚ್ಛತೆಯನ್ನು ಕಾಪಾಡಬೇಕೆಂದು ರೈತರು, ಸಾರ್ವಜನಿಕರು, ದೇವಸ್ಥಾನದ ಭಕ್ತರುಗಳು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link