ರೈತರ ಹಿತ ಕಾಯಲು ವಿಫಲವಾದ ಸರ್ಕಾರ..!

ತುಮಕೂರು
 
    ರೈತರ ಹಿತ ಕಾಯಬೇಕಾದ ಸರ್ಕಾರಗಳು ರೈತರ ಪ್ರಾಣ ತೆಗೆಯುವ ಹುನ್ನಾರ ಮಾಡುತ್ತಿವೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರಕ್ಕೆ ಸಹಿ ಹಾಕಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯು ಖಂಡನಾರ್ಹ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ಆಗ್ರಹಿಸಿದರು.
     ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ದೇಶ ಕಾಯಬೇಕಾದ ಸರ್ಕಾರಗಳು, ರೈತರ ಹೆಸರಲ್ಲಿ ಆಣೆ ಪ್ರಮಾಣ ಮಾಡಿ ರೈತರ ಹಿತ ಕಾಪಾಡುವುದು ತಮ್ಮ ಮುಖ್ಯ ಪ್ರಣಾಳಿಕೆ ಎಂದು ಹೇಳಿಕೊಳ್ಳುತ್ತಾ, ಆಡಳಿತ ಚುಕ್ಕಾಣಿ ಹಿಡಿದಿರುವ ಕೇಂದ್ರ ಸರ್ಕಾರ ದೇಶೀಯ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಿದಾರರ ಮೇಲೆ ಗದಾ ಪ್ರಹಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
      ಆರ್‍ಸಿಇಪಿ ಒಪ್ಪಂದವು ಸಂಪೂರ್ಣ ರೈತ ವಿರೋಧಿಯಾಗಿದ್ದು, ಇಂದು ವಿವಿಧ ಕಾರಣಗಳಿಂದ ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪರಿಸ್ಥಿತಿ ಇದೆ. ಆದರೆ ಇದೀಗ ಆರ್‍ಸಿಇಪಿ ಒಪ್ಪಂದ ಜಾರಿಯಾದರೆ ಪ್ರತಿ ಸೆಕೆಂಡ್‍ಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಾವುದೋ ದೇಶದವರು ತಮ್ಮ ಉತ್ಪನ್ನವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾನೆ. ಹಾಲಿನ ಉತ್ಪನ್ನವನ್ನು ಕೂಡ ನಮ್ಮ ದೇಶದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
       ಈ ಹಿಂದೆ ಬ್ರಿಟೀಷರು ನಮ್ಮ ದೇಶವನ್ನು ಆಳಿ ನಮ್ಮ ಸಂಪತ್ತನ್ನು ಲೂಟಿ ಮಾಡಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರವೇ ದೇಶದ ಸಂಪತ್ತನ್ನು ಇತರೆ ದೇಶಗಳಿಗೆ ಬಿಟ್ಟುಕೊಡುವುದಕ್ಕೆ ಹುನ್ನಾರ ಮಾಡಿದ್ದಾರೆ ಇದರಿಂದ ನಮ್ಮ ದೇಶದ ರೈತರಿಗೆ ತುಂಬಲಾರದ ನಷ್ಟ ಉಂಟಾಗಲಿದ್ದು, ಕೇಂದ್ರ ಸರ್ಕಾರವು ಎಚ್ಚೆತ್ತುಕೊಂಡು ಈ ಒಪ್ಪಂದಕ್ಕೆ ಸಹಿ ಹಾಕಬಾರದು. ಒಂದು ವೇಳೆ ಸಹಿ ಹಾಕಿದ್ದಲ್ಲಿ ಮುಂದೆ ಆಗಲಿರುವ ಅನಾಹುತಗಳಿಗೆ ಪ್ರಧಾನಿ ಮೋದಿಯವರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.
      ಜಿಲ್ಲಾ ಗೌರವಾಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ, ನಮ್ಮ ರಾಜ್ಯದಲ್ಲಿ ಹಾಲಿನ ಉತ್ಪನ್ನ ಚೆನ್ನಾಗಿದ್ದು, ಇದೀಗ ಹಐನುಗಾರಿಕೆಯನ್ನೇ ತಡೆಗಟ್ಟಿ ಎಲ್ಲಿಂದಲೋ ಬಂದ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಇಲ್ಲಿನ ರೈತರ ಜೀವ ಹಿಂಡುವ ಕೆಲಸ ಮಾಡಲು ಮುಂದಾಗಿದ್ದಾರೆ. ರೈತರ ಹಾಗೂ ದೇಶದ ಜನರ ಅಭಿಪ್ರಾಯ ಪಡೆಯದೆ ಇಂತಹ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದು ದೇಶಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
      ಪ್ರತಿಭಟನಾ ನಂತರ ಅಪರ ಜಿಲ್ಲಾಧಿಕಾರಿ ಎಂ.ಎನ್.ಚನ್ನಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಪ್ರಧಾನಿಗಳಿಗೆ ಮನವಿ ಪತ್ರ ಕಳುಹಿಸಿ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಕುಣಿಗಲ್ ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಕೀರ್ತಿ, ಶಿರಾ  ತಾಲ್ಲೂಕು ಅಧ್ಯಕ್ಷ ಸಣ್ಣಧ್ಯಾಮೇಗೌಡ, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಪುಟ್ಟರಾಜು ಸೇರಿದಂತೆ ಇನ್ನಿತರ ಪದಾಧಿಕಾರಿಗಳಾದ ಯಳವಳ್ಳಿ, ವೆಂಕಟೇಶ್, ಮಹಾಂತೇಶ್, ನಾಗೇಶ್, ನಾಗರಾಜು, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link