ಕೊರಟಗೆರೆ
ಸಾರಿಗೆ ಇಲಾಖೆಗೆ ಕಳೆದ ನಾಲ್ಕು ತಿಂಗಳಿಂದ ಕಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಇನ್‌ಸ್ಪೆಕ್ಟರ್ ಇಲ್ಲದಿರುವುದು, ಖಾಸಗಿ ಮತ್ತು ಸರಕಾರಿ ಬಸ್ಸಿನ ಚಾಲಕರನ್ನು ಹೇಳುವವರು-ಕೇಳುವವರು ಇಲ್ಲವಾಗಿದೆ. ವಾಹನಗಳಿಗೆ ವೇಗದ ಮಿತಿಯು ಇಲ್ಲವಾಗಿ ಅವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿರುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಕಡಿವಾಣವೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಗಡ-ಮಧುಗಿರಿ-ಕೊರಟಗೆರೆಯ ಜೆಟ್ಟಿಅಗ್ರಹಾರದ ಮೂಲಕ ತುಮಕೂರಿಗೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನವು ಅಪಘಾತ ನಡೆಯುತ್ತಿವೆ. ಸಾರಿಗೆ ಇಲಾಖೆಗೆ ಅಪಘಾತ ಆಗುತ್ತಿರುವ ಬಗ್ಗೆ ಕಾಳಜಿ ಮತ್ತು ಸಾರಿಗೆ ನಿಯಮದ ಬಗ್ಗೆ ಬಸ್ಸಿನ ಚಾಲಕರಿಗೆ ಅರಿವು ಮೂಡಿಸದ ಪರಿಣಾಮ ಜೆಟ್ಟಿಅಗ್ರಹಾರ ಗ್ರಾಮದ ನಾಗರಿಕರೆ ಖಾಸಗಿ ಮತ್ತು ಸರಕಾರಿ ಬಸ್ಸಿನ ಚಾಲಕರಿಗೆ ಸಾರಿಗೆ ನಿಯಮದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮಧುಗಿರಿ ಸಾರಿಗೆ ಇಲಾಖೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಇನ್‌ಸ್ಪೆಕ್ಟರ್ ವರ್ಗಾವಣೆಯಾಗಿ ಮೂರು ತಿಂಗಳು ಕಳೆದಿದೆ. ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಆರ್‌ಟಿಓ ಮತ್ತು ಇನ್‌ಸ್ಪೆಕ್ಟರ್ ವಾರಕ್ಕೆರಡು ದಿನ ಮಾತ್ರ ಬರುತ್ತಾರೆ. ಇನ್ನೂ ಅಪಘಾತದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಸಮಯವು ಎಲ್ಲಿದೆ? ಪ್ರತಿದಿನವು ಬದಲಾಗುವ ಇನ್‌ಸ್ಪೆಕ್ಟರ್‌ಯಿಂದ ದಿನಕ್ಕೊಂದು ಸಾರಿಗೆ ನಿಯಮ ರೂಪಿಸಿ ಈಗಾಗಲೆ ಸಾಕಷ್ಟು ಕಿರಿಕಿರಿ ಉಂಟಾಗಿದೆ.
ಖಾಸಗಿ ಮತ್ತು ಸರಕಾರಿ ಬಸ್ಸಿನಲ್ಲಿಯೂ 80 ರಿಂದ 100 ಜನ ಪ್ರಯಾಣಿಕರನ್ನು ಕುರಿಗಳ ರೀತಿ ತುಂಬುತ್ತಾರೆ. ಕಿಟಕಿ ಮತ್ತು ಬಾಗಿಲು ಹಾಕದೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ಪರಿಶೀಲನೆ ನಡೆಸಬೇಕಾದ ಸಾರಿಗೆ ಅಧಿಕಾರಿವರ್ಗ ಕಚೇರಿಗೆ ಸೀಮಿತವಾಗಿದೆ. ಅಪಘಾತಕ್ಕೆ ಕಡಿವಾಣ ಹಾಕದೆ ನಿರ್ಲಕ್ಷ ವಹಿಸಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ದೀಪಾವಳಿ ಹಬ್ಬದ ಮಾರನೆಯ ದಿನವಾದ ಬುಧವಾರ ಜೆಟ್ಟಿಅಗ್ರಹಾರ ಗ್ರಾಮದಲ್ಲಿ ಚಾಲಕನ ನಿರ್ಲಕ್ಷದಿಂದ ನಡೆದ ಭೀಕರ ಅಪಘಾತದಲ್ಲಿ 5 ಜನ ಮೃತಪಟ್ಟು, 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದೆ. ಅಪಘಾತ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆಗೆ ಪತ್ರ ಬರೆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ