ಚಿಕ್ಕನಾಯಕನಹಳ್ಳಿ
ಪಟ್ಟಣದಲ್ಲಿ ವಾಸವಿರುವ ಅಲೆಮಾರಿಗಳು, ಸುಡುಗಾಡು ಸಿದ್ದರ ಗುಂಡುತೋಪುಗಳಲ್ಲಿ ಕೆಲ ಮಕ್ಕಳಿಗೆ ಡೆಂಗ್ಯೂರೋಗ ಪತ್ತೆಯಾಗಿದೆ ಹಾಗೂ ಇಲ್ಲಿ ಅನೈರ್ಮಲ್ಯ ಹೆಚ್ಚಾಗಿ ಹಲವು ಜನ ಜ್ವರದಿಂದ ನರಳುತ್ತಿದ್ದುದು ದಿನನಿತ್ಯ ಆಸ್ಪತ್ರೆಗೆ ಅಲೆಯು ತ್ತಿದ್ದಾರೆ.ಸುಡುಗಾಡು ಸಿದ್ದರು, ದಕ್ಕಲಿಗರು ಪಟ್ಟಣದ ಮಾರುತಿ ಬಡಾವಣೆ ಬಳಿಯ ಗಾಂಧಿನಗರ ಹಾಗೂ ಕೇದಿಗೆಹಳ್ಳಿ ಸಮೀಪದ ಗುಂಡುತೋಪಿನಲ್ಲಿ ವಾಸ ಮಾಡುತ್ತಿದ್ದಾರೆ. ಗಾಂಧಿನಗರದಲ್ಲಿ ವಾಸ ಮಾಡುತ್ತಿರುವ ದಕ್ಕಲಿಗರ ಕೀರ್ತಿ(16), ರೂಪ(15), ಲಲಿತ(8) ಇವರಿಗೆ ಡೆಂಗ್ಯೂರೋಗ ಪತ್ತೆಯಾಗಿದೆ. ಪ್ಲೇಟ್ಲೆಟ್ಸ್ ಹದಿನೈದು ಸಾವಿರಕ್ಕೆ ಇಳಿದಿದೆ, ಇದು ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿ.
ಕೇದಿಗೆಹಳ್ಳಿ ಸಮೀಪ ವಾಸವಿರುವ ಸುಡುಗಾಡು ಸಿದ್ದರ ವೆಂಕಟೇಶಯ್ಯ ಎಂಬುವರ ಮಗಳು ಗಂಗಮ್ಮ(23) ಎನ್ನುವವರಿಗೆ ಈಗಾಗಲೇ ಡೆಂಗ್ಯೂ ರೋಗ ಪತ್ತೆಯಾಗಿದ್ದು, ಅವರು ಚಿಕಿತ್ಸೆಗಾಗಿ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆ, ತುಮಕೂರು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಂದಿದ್ದಾರೆ ಹಾಗೂ ನರಸಮ್ಮ(16), ಶಿವಮ್ಮ(25) ಮತ್ತು ಇಲ್ಲಿನ ಕೆಲವರು ಜ್ವರ, ಶೀತಜ್ವರದಿಂದ ಬಳಲುತ್ತಿದ್ದಾರೆ.
ಡೆಂಗ್ಯೂರೋಗ ಬಾಧಿತೆ ಗಂಗಮ್ಮ ಪತ್ರಿಕೆಯೊಂದಿಗೆ ಮಾತನಾಡಿ, ನಾವು ವಾಸ ಮಾಡುತ್ತಿರುವ ಜಾಗದಲ್ಲಿ ಸ್ವಚ್ಛತೆ ಇಲ್ಲದೆ, ಅನೈರ್ಮಲ್ಯ ಹೆಚ್ಚಾಗಿ ನಮಗೆ ರೋಗ ಕಾಣಿಸಿಕೊಂಡಿದೆ. ನನಗೆ ಜ್ವರ ತಗುಲಿದ ತಕ್ಷಣ ಚಿ.ನಾ.ಹಳ್ಳಿ ಸರ್ಕಾರಿ ಆಸ್ಪತ್ರೆಗೆ ತೋರಿಸಿದೆ. ಅಲ್ಲಿ ರೋಗ ವಾಸಿಯಾಗದೆ ಖಾಸಗಿ ಆಸ್ಪತ್ರೆಗೆ ತೋರಿಸಿದಾಗ ಪರೀಕ್ಷೆ ಮಾಡಿ ಡೆಂಗ್ಯೂ ರೋಗ ತಗುಲಿರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ತಕ್ಷಣ ತುಮಕೂರು ಆಸ್ಪತ್ರೆಗೆ ತೋರಿಸಿದೆವು, ಅಲ್ಲಿನ ವೈದ್ಯರು ಪುನಃ ಚಿ.ನಾ.ಹಳ್ಳಿ ಆಸ್ಪತ್ರೆಗೆ ಬರೆದುಕೊಟ್ಟರು, ಈಗ ಚಿಕಿತ್ಸೆ ಪಡೆಯುತ್ತಿದ್ದೇನೆ.
ತುಮಕೂರಿಗೆ ತೋರಿಸುವ ಮೊದಲು ನನಗೆ 80 ಸಾವಿರ ಬಿಳಿರಕ್ತಕಣವಿತ್ತು, ಈಗ ಸುಧಾರಿಸಿಕೊಂಡಿದ್ದೇನೆ ಹಾಗೂ ನಾವು ವಾಸವಿರುವ ಕೇದಿಗೆಹಳ್ಳಿಪಾಳ್ಯದ ಕೆಲವರಿಗೆ ಈಗಲೂ ಜ್ವರ ಕಾಣಿಸಿಕೊಂಡಿದೆ. ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಸೂಕ್ತ ಔಷಧಗಳು ಇಲ್ಲ, ನಮಗೆ ಇಲ್ಲಿಯೇ ದೊರೆತರೆ ಅನುಕೂಲವಾಗುತ್ತದೆ ಎಂದರು.
ಶಾಂತರಾಜು ಮಾತನಾಡಿ, ದಕ್ಕಲಿಗರ ಕಾಲೋನಿಗಳಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ. ಹಾಗಾಗಿಯೇ ಇಲ್ಲಿ ರೋಗಗಳು ಉಲ್ಭಣಿ ಸುತ್ತಿರುವುದು. ಪುರಸಭೆಯವರಿಗೆ ಸ್ವಚ್ಛತೆ ಮಾಡಲು ತಿಳಿಸಿದರೂ ಯಾವ ಅಧಿಕಾರಿಗಳೂ ಇತ್ತ ಗಮನ ಹರಿಸುತ್ತಿಲ್ಲ ಎಂದು ದೂರಿದ ಅವರು, ಆರೋಗ್ಯ ಇಲಾಖೆಯವರು ನಮ್ಮ ಕಾಲೋನಿಯಲ್ಲಿನ ಎಲ್ಲಾ ಜನರ ರಕ್ತ ಪರೀಕ್ಷೆ ಮಾಡುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ