ತಾಕತ್ತಿದ್ದರೆ ಕಾಂಗ್ರೆಸ್‌ನವರು ಉಪಚುನಾವಣೆ ಎದುರಿಸಲಿ : ಸಿ ಎಂ

ಬೆಂಗಳೂರು

     ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅಂದಿನ ಸ್ಪೀಕರ್ ರಮೇಶ್‌ಕುಮಾರ್ ಷಡ್ಯಂತ್ರ ಮಾಡಿ ಶಾಸಕರನ್ನು ಅನರ್ಹಗೊಳಿಸಿದರು. ಅವರ ಹುಳಕನ್ನು ಮುಚ್ಚಿಕೊಳ್ಳಲು ಈಗ ಬೇರೆ ಏನನ್ನೋ ಹೇಳುತ್ತಿದ್ದಾರೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಅನರ್ಹ ಶಾಸಕರ ರಾಜೀನಾಮೆಗೂ, ನಮಗೂ ಸಂಬಂಧ ಇಲ್ಲ.

       ತಾಕತ್ತಿದ್ದರೆ ಕಾಂಗ್ರೆಸ್‌ನವರು ಉಪಚುನಾವಣೆ ಎದುರಿಸಲಿ. ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದರು. ಅನರ್ಹ ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ಕಾರಣ. ಈ ಹಿಂದೆ ಧರ್ಮಸ್ಥಳದ ಶಾಂತಿವನದಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಮಾತನಾಡಿರುವುದನ್ನು ಮರೆತು ಬಿಟ್ಟಿದ್ದಾರೆ ಎಂದು ಟೀಕಿಸಿದರು.

      ಡಾರ್ಲ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆಯಿಂದ ಶಾಸಕರು ರಾಜೀನಾಮೆ ನೀಡಿದರು. ನಮಗೆ ಶಾಸಕರಾಗಿ ಮುಂದುವರೆಯಲು ಇಷ್ಟ ಇಲ್ಲ ಎಂದು ಸುಪ್ರೀಂ ಕೋರ್ಟ್ನ ಮೊರೆ ಹೋಗಿದ್ದಾರೆ. ಹೀಗಿರುವಾಗ ಅನರ್ಹ ಶಾಸಕರ ರಾಜೀನಾಮೆಗೂ, ಬಿಜೆಪಿಗೂ ತಳಕು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಏನನ್ನೋ ಹೇಳುತ್ತಿದ್ದಾರೆ.

     ಆಡಿಯೋ ವಿಚಾರದಲ್ಲಿ ಕಾಂಗ್ರೆಸ್‌ನವರ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಗೊಂದಲ ಸೃಷ್ಠಿಸಲು ಕಾಂಗ್ರೆಸ್ ಸಂಚು ನಡೆಸಿದೆ ಎಂದು ಹರಿಹಾಯ್ದರು. ರಾಜೀನಾಮೆ ಕೊಟ್ಟಿರುವವರ ಜತೆ ಸಿದ್ದರಾಮಯ್ಯನವರೇ ಮಾತನಾಡಲಿ ಸತ್ಯ ಗೊತ್ತಾಗುತ್ತದೆ. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸುಪ್ರೀಂ ಕೋರ್ಟ್ ಆಡಿಯೋ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು. ಸಿದ್ದರಾಮಯ್ಯನವರೇ ಇನ್ನು ಮೂರೂವರೆ ವರ್ಷ ವಿಪಕ್ಷ ನಾಯಕರಾಗಿರುವುದು ಶತ ಸಿದ್ದ. ಕಾಂಗ್ರೆಸ್ ಪಕ್ಷ ಖಾಯಂ ವಿಪಕ್ಷ ಸ್ಥಾನದಲ್ಲೇ ಇರುತ್ತದೆ.

    ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ. ಲೋಕಸಭೆಯಲ್ಲಿ ಒಂದು ಸ್ಥಾನ ಗೆದ್ದಿದ್ದೀರಿ. ಅದು ಹೇಗೆ ವಿಪಕ್ಷ ಸ್ಥಾನದಲ್ಲಿ ಕುಳಿತಿದ್ದೀರಿ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು. ಉಪಚುನಾವಣೆ ಬರುತ್ತಿದೆ. ತಾಕತ್ತಿದ್ದರೆ ಎದುರಿಸಿ ಯಡಿಯೂರಪ್ಪ ಸವಾಲು ಹಾಕಿದರು. ಅನರ್ಹ ಶಾಸಕರಿಗೂ ನಮಗೂ ಸಂಬAಧ ಇಲ್ಲ. ಅವರು ಯಾವ ಪಕ್ಷ ಸೇರುತ್ತಾರೋ ಗೊತ್ತಿಲ್ಲ. ಪಕ್ಷೇತರರಾಗಿ ಚುನಾವಣೆಗೆ ನಿಲ್ಲುತ್ತಾರೋ ಅದೂ ಗೊತ್ತಿಲ್ಲ.

    ಹೀಗಿರುವಾಗ ಸುಪ್ರೀಂ ಕೋರ್ಟ್ನಲ್ಲಿ ಗೊಂದಲ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಹರಿಹಾಯ್ದರು. ಆಡಿಯೋ ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದವರು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ನಮ್ಮ ಸಭೆಯಲ್ಲಿ ನಡೆದ ಚರ್ಚೆಯೇ ಬೇರೆ. ಆಡಿಯೋ ಮಾಡಿದವರು ಯಾರು ಎನ್ನುವ ಪ್ರಶ್ನೆ ಉದ್ಭವಿಸಲ್ಲ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಗೊಂದಲ ಸೃಷ್ಠಿಸುತ್ತಿದೆ ಎಂದು ಟೀಕಿಸಿದರು.

      ಆಡಿಯೋ ಸೋರಿಕೆಯಿಂದ ಡ್ಯಾಮೇಜ್ ಏನೂ ಆಗಲ್ಲ. ಕಾಂಗ್ರೆಸ್ ಪಕ್ಷ ಈಗಾಗಲೇ ನೆಲಕಚ್ಚಿದೆ. ರಮೇಶ್‌ಕುಮಾರ್ ಮತ್ತು ಸಿದ್ದರಾಮಯ್ಯ ಕೈಜೋಡಿಸಿ ಶಾಸಕರ ಅನರ್ಹ ಮಾಡಿರುವ ಕುತಂತ್ರ ಎಲ್ಲರಿಗೂ ಗೊತ್ತಿದೆ ಎಂದರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡಬೇಕು. ಆಡಿಯೋ ವಿಚಾರದಲ್ಲಿ ತಿರುಚಿ ಹೇಳಿಕೆ ನೀಡಬಾರದು ಎಂದರು. ಅತಿವೃಷ್ಠಿಯ ಅಂಕಿ ಅಂಶಗಳ ಬಗ್ಗೆಯೂ ಮಾಹಿತಿ ನೀಡಿದರೆ ಇದು ಸರಿಯಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮುಖ್ಯ ಕಾರ್ಯದರ್ಶಿಗಳನ್ನೇ ಕೇಳಲಿ, ಅಂಕಿ-ಅAಶ ಗೊತ್ತಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link