ಅಭಿವೃದ್ಧಿಗಾಗಿ ಹೋರಾಟಗಾರರಿಗೆ ಮತ ನೀಡಿ

ದಾವಣಗೆರೆ

    ಅಭಿವೃದ್ಧಿಯ ದೃಷ್ಟಿಯಿಂದ ಪಾಲಿಕೆ ಚುನಾವಣೆಯಲ್ಲಿ ಮತದಾರರು, ಜನರ ಸಮಸ್ಯೆಯ ಬಗ್ಗೆ ಪಾಲಿಕೆಯಲ್ಲಿ ಸಮಗ್ರ ಚರ್ಚೆ ನಡೆಸಿ, ಹೋರಾಟ ಮಡುವ ಸಾಮರ್ಥ್ಯ ಇರುವ ಭಾರತ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮನವಿ ಮಾಡಿದರು.

   ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಹೇಗಿರಬೇಕೆಂಬ ಪರಿಕಲ್ಪನೆಯನ್ನೇ ಕೊಟ್ಟಿದ್ದು ಭಾರತ ಕಮ್ಯೂನಿಷ್ಟ್ ಪಕ್ಷ. ಕಾಮ್ರೇಡ್ ಪಂಪಾಪತಿ ಮತ್ತು ಎಚ್.ಕೆ.ರಾಮಚಂದ್ರಪ್ಪನವರು ರೂಪಿಸಿದ ಪರಿಕಲ್ಪನೆಯಿಂದ ದಾವಣಗೆರೆ ಸುಂದರ ನಗರವಾಗಿ ಅಭಿವೃದ್ಧಿಯಾಗಿದೆ. ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕಾದರೆ, 3, 17, 19, 28, 30 ಮತ್ತು 31ನೇ ವಾರ್ಡ್ಗಳಲ್ಲಿ ಸ್ಪರ್ಧಿಸಿರುವ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಕೋರಿದರು.

   ಮುಖ್ಯಮಂತ್ರಿಗಳ ಆಡಿಯೊ ಸೋರಿಕೆ, ಮತ ಹಾಕಿದ ಮತದಾರರನ್ನು ಮರೆತು ಹಣ ಮತ್ತು ಅಧಿಕಾರಕ್ಕಾಗಿ, ಪಕ್ಷವನ್ನು ಬಿಟ್ಟು ಪಕ್ಷಾಂತರ ಮಾಡುವುದು ಸೇರಿದಂತೆ ಹಲವು ರೀತಿಯ ಅನೈತಿಕ ರಾಜಕಾರಣ ನಡೆಯುತ್ತಿರುವ ಸಂದರ್ಭದಲ್ಲಿ ಯಾವದೇ ಕಾರಣಕ್ಕೂ ನಮ್ಮವರು ಅನೈತಿಕ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಗ್ರಾಮೀಣ ಪ್ರದೇಶದ ಜನತೆ ಜಿಲ್ಲಾ ಕೇಂದ್ರಗಳಿಗೆ ವಲಸೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲರಿಗೂ ವಸತಿ, ಶುದ್ಧ ಕುಡಿಯುವ ನೀರು ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದ್ದು, ನಮ್ಮ ಪಕ್ಷದಿಂದ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದರೆ, ಮುಂದಿನ ದಾವಣಗೆರೆ ಹೇಗಿರಬೇಕೆಂಬ ಪರಿಕಲ್ಪನೆ ಇಟ್ಟುಕೊಂಡು ಸುಂದರ ನಗರ ಕಟ್ಟಲು ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದರು.

      ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಕಾಂಗ್ರೆಸ್-ಬಿಜೆಪಿಯವರು ಕಳೆದ ಹತ್ತು ವರ್ಷಗಳಿಂದ ನಿವೇಶನ, ವಸತಿ ಕೊಡುತ್ತೇವೆಂದು ಹೇಳಿ ಜನರಲ್ಲಿ ಆಸೆ ಹುಟ್ಟಿಸಿದ ಕಾರಣ ಜನರು ಅದಕ್ಕಾಗಿ ಅರ್ಜಿ ಸಲ್ಲಿಸಲು, ಆದಾಯ ಮತ್ತು ಜಾತಿ ಪ್ರಮಾಣಪತ್ರ ಮಾಡಿಸಲು ಅಲೆದಲೆದು ಹಣ ಕಳೆದುಕೊಂಡಿದ್ದಾರೆಯೇ ಹೊರತು, ಯರಿಗೂ ಸಹ ವಸತಿ ಸೌಲಭ್ಯ ದೊರೆತಿಲ್ಲ. ಅದರೆ, ಈ ಪಾಲಿಕೆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದರೆ, ವಸತಿ ಸೌಲಭ್ಯ ಕಲ್ಪಿಸಲು ಪಾಲಿಕೆಯ ಒಳಗೂ ಮತ್ತು ಹೊರಗೂ ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.

     ನಮ್ಮ ಕಮ್ಯೂನಿಷ್ಟ್ ಪಕ್ಷ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರತಿ ದಿನವೂ ಶುದ್ಧ ಕುಡಿಯುವ ನೀರು ಪೂರೈಸುತಿತ್ತು. ಆದರೆ, ಈಗ ವಾರಕ್ಕೊಮ್ಮೆ ನೀರು ಕೊಟ್ಟರೂ ಶುದ್ಧ ನೀರು ಪೂರೈಸುತ್ತಿಲ್ಲ. ನಾವು ಹಿಂದೆ ಹಾಕಿದ್ದ ಮರಗಳ ಮಾರಣ ಹೋಮ ನಡೆಸಿ, ಪರಿಸರ ಹಾಳು ಮಾಡಲಾಗುತ್ತಿದೆ. ಅಲ್ಲದೇ, ನಗರದಲ್ಲಿ ಹಂದಿ, ನಾಯಿ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ನಗರದಿಂದ ಸ್ಥಳಾಂತರ ಮಾಡಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ, ಈಗಿನ ಪಾಲಿಕೆ ಸದಸ್ಯರಿಗೆ ಅವರ ವ್ಯವಹರ ನೋಡಿಕೊಳ್ಳಲೇ ಪುರುಸೊತ್ತಿಲ್ಲ ಎಂದು ಆರೋಪಿಸಿದರು.

     ಪಾಲಿಕೆಯ 3ನೇ ವಾರ್ಡ್ನಿಂದ ಕಟ್ಟಡ ಕಾರ್ಮೀಕರ ಹೋರಾಟದ ಹಿನ್ನೆಲೆ ಇರುವ ಸೈಯದ್ ಮರ್ದಾನ್ ಸಾಬ್, 17ನೇ ವಾರ್ಡ್ನಿಂದ ಸಾಮಾಜಿಕ ಚಟುವಟಿಕೆಯಲ್ಲಿ ಕ್ರಿಯಾಶಿಲರಾಗಿರುವ ಎಂ.ಜಿ.ಶ್ರೀಕಾಂತ್, 19ನೇ ವಾರ್ಡ್ನಿಂದ ಕೃಷಿ ಕಾರ್ಮಿಕರ ಮತ್ತು ಉದ್ಯೋಗ ಖಾತ್ರಿ ಕಾರ್ಮಿಕರ ಸಮಸ್ಯೆಗಳಿಗಾಗಿ ಹೋರಾಟ ನಡೆಸಿರುವ ರಂಗನಾಥ್, 28ನೇ ವಾರ್ಡ್ನಿಂದ ಹಲವು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿರುವ ಎಚ್.ಜಿ.ಉಮೇಶ್, 30ನೇ ವಾರ್ಡ್ನಿಂದ ಸಿಪಿಐ ಹೋರಾಟಗಳಲ್ಲಿ ಸಕ್ರಿಯರಾಗಿರುವ ಮಂಜುಳಾ, 31ನೇ ವಾರ್ಡ್ನಿಂದ ಪಕ್ಷಸಂಘಟನೆ ಮತ್ತು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆವರಗೆರೆ ವಾಸು ಅವರನ್ನು ಕಣಕ್ಕಿಳಿಸಿದ್ದು, ಮತದಾರರು ಈ ಆರು ಜನ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮನವಿ ಮಾಡಿದರು.

   ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಎನ್.ಟಿ.ಬಸವರಾಜ್, ಎಚ್.ರಾಮಪ್ಪ, ಎಂ.ಬಿ.ಶಾರದಮ್ಮ, ವಿಶಾಲಾಕ್ಷಿ ಮೃತ್ಯುಂಜಯ, ಲೋಕಿಕೆರೆ ಅಂಜಿನಪ್ಪ, ಸರೋಜಮ್ಮ, ಹನುಮಂತಪ್ಪ, ಸುರೇಶ್, ತಿಪ್ಪೇಶಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link