ಬೆಂಗಳೂರು
ರಾಜ್ಯಾದ್ಯಂತ ತಲಾ 10 ಕೋಟಿ ರೂ ವೆಚ್ಚದಲ್ಲಿ ಒಟ್ಟು 100 ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.ಈ ಸಂಬಂಧ ಸಮಾಜ ಕಲ್ಯಾಣ,ಲೋಕೋಪಯೋಗಿ ಖಾತೆಗಳನ್ನು ಹೊಂದಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನೀಡಿರುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳ ಕೊರತೆಯಾಗಿದ್ದು ಪರಿಶಿಷ್ಟ ಜಾತಿ,ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಪ್ರವೇಶಾವಕಾಶ ಸಿಗದೆ ಪರದಾಡುವಂತಾಗಿದೆ.ಹೀಗಾಗಿ ತಕ್ಷಣವೇ ನೂರು ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ನೆರವು ನೀಡುವಂತೆ ಗೋವಿಂದ ಕಾರಜೋಳ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ತಲಾ 10 ಕೋಟಿ ರೂ ವೆಚ್ಚದಲ್ಲಿ ಒಂದು ಹಾಸ್ಟೆಲ್ ನಿರ್ಮಾಣವಾಗಬೇಕಿದ್ದು ಒಟ್ಟು ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ನೂರು ಹಾಸ್ಟೆಲ್‌ಗಳನ್ನು ಆರಂಭಿಸಬೇಕಿದೆ ಎಂದು ತಮ್ಮ ಪ್ರಸ್ತಾವದಲ್ಲಿ ಗೋವಿಂದ ಕಾರಜೋಳ್ ತಿಳಿಸಿದ್ದಾರೆ.ರಾಜ್ಯಾದ್ಯಂತ ನೂರು ಕಡೆ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು ಎಂದು ಹೇಳಿರುವ ಪ್ರಸ್ತಾವನೆ,ಅದೇ ಕಾಲಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಲಭ್ಯವಿರುವ ನೂರು ಸ್ಥಳಗಳ ಕುರಿತೂ ಮಾಹಿತಿ ನೀಡಲಾಗಿದೆ.
ಇಂತಹ ಸ್ಥಳಗಳಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಲಭ್ಯವಿದ್ದು ಹೀಗೆ ಜಾಗ ಲಭ್ಯವಿರುವ ಸ್ಥಳಗಳಲ್ಲಿ ಹಾಸ್ಟೆಲ್ ನಿರ್ಮಾಣ ಮಾಡೋಣ.ನಂತರ ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಡೆ ಜಾಗ ಗುರುತಿಸಿದ ನಂತರ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಗೋವಿಂದ ಕಾರಜೋಳ್ ಅವರು ಕೇಂದ್ರ ಸಚಿವರಿಗೆ ವಿವರಿಸಿದ್ದಾರೆ.
ಹೀಗೆ ನೂರು ಹಾಸ್ಟೆಲ್‌ಗಳು ನಿರ್ಮಾಣವಾದರೆ ಪರಿಶಿಷ್ಟ ಜಾತಿ,ಪಂಗಡದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಧ್ಯದ ಸಮಸ್ಯೆ ತಹಬಂದಿಗೆ ಬರಲಿದೆ ಎಂದು ಅವರು ವಿವರ ನೀಡಿದ್ದು,ಹೀಗೆ ಹಾಸ್ಟೆಲ್ ನಿರ್ಮಿಸುವ ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
