ಗಾಂಧೀಜಿ ವಿಷಯದಲ್ಲಿ ಉಡಾಫೆ ಮಾತು ಸಹಿಸಲು ಸಾಧ್ಯವಿಲ್ಲ :ಸಂತೋಷ್ ಹೆಗ್ಡೆ

ಬೆಂಗಳೂರು

    ಮಕ್ಕಳಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಬದುಕು, ಬರಹ, ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿನ ಹಾರ್ವರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಗಾಂಧೀಜಿ ಅವರ 150 ನೇ ಜನ್ಮ ದಿನವನ್ನು ಅತ್ಯಂತ ವಿನೂತ ಮತ್ತು ವಿಭಿನ್ನವಾಗಿ ಆಚರಿಸಲಾಯಿತು.

    ಗಾಂಧೀಜಿ ಅವರ ಭಿನ್ನ ವಿಭಿನ್ನ 150 ವೇಷ ಮತ್ತು ಪೋಷಾಕಿನಲ್ಲಿ ಮಕ್ಕಳು ಕಂಗೊಳಿಸಿದವು. ಪ್ರತಿಯೊಂದು ಮಗುವೂ ಒಂದೊಂದು ಗಾಂಧಿ ತತ್ವ ಪ್ರಸ್ತುತಪಡಿಸಿ ಗಮನ ಸೆಳೆಯಿತು.

    ಕನ್ನಡ ರಾಜ್ಯೋತ್ಸವ ಹಾಗೂ ಗಾಂಧೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹಗ್ಡೆ, ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ನಿಜವಾದ ಸ್ವಾತಂತ್ರ್ಯ ಪ್ರಜೆಗಳಿಗೆ ಇನ್ನೂ ಲಭಿಸಿಲ್ಲ. ರಾಜಮಹಾರಾಜರ ಕಾಲದಲ್ಲಿದ್ದ ಸಿಂಹಾಸನಗಳೆಂಬ ಪಳೆಯುಳಿಕೆಗಳ ಮೇಲೆ ಈಗ ರಾಜಕಾರಣಿಗಳು ವಿರಾಜಮಾನರಾಗಿದ್ದು, ಕೆಲವೇ ಕೆಲವು ರಾಜಕಾರಣಿಗಳು ಅರಸೊತ್ತಿಗೆಯ ಸುಖ, ಸಂಪತ್ತಿನಲ್ಲಿ ತೇಲಾಡುತ್ತಿದ್ದಾರೆ ಎಂದರು.

   ರಾಜಕಾರಣಿಗಳಿಗೆ ಈಗ ಎಲ್ಲಾ ರೀತಿಯ ಸೌಲಭ್ಯಗಳಿವೆ. ಜನ ಎಷ್ಟೇ ತೊಂದರೆಯಲ್ಲಿದ್ದರೂ ರಾಜಕಾಣಿಗಳು ಯಾವುದೇ ಮುಜುಗರವಿಲ್ಲದೇ ಜಿರೋ ಟ್ರಾಫಿಕ್ ನಲ್ಲಿ ಸಂಚರಿಸುತ್ತಾರೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಎನ್ನುವ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ನಾವೀಗ ಪ್ರಜಾ ಪ್ರಭುತ್ವದ ಆಶಯವನ್ನು ಸಾಕಾರಗೊಳಿಸಲು ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಸಂತೋಷ್ ಹೆಗ್ಡೆ ಕರೆ ನೀಡಿದರು.

    ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಕುಸಿತವಾಗಿದ್ದು, ಪ್ರಜಾಪ್ರಭುತ್ವವನ್ನು ಬದಲಾವಣೆ ಮಾಡುವ ಅಗತ್ಯ ಇದೀಗ ಎದರಾಗಿದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸ್ವಾಗತಿಸುವ ಸಂಪ್ರದಾಯದ ಯುಗದಲ್ಲಿ ನಾವಿದ್ದೇವೆ. ಏಕೆ ಹೀಗೆ ಎಂದು ಕೇಳಿದರೆ ಮಹಾತ್ಮಾ ಗಾಂಧೀಜಿ ಸಹ ಜೈಲಿ ಹೋಗಿ ಬಂದಿದ್ದರು ಎಂದು ಮಹಾತ್ಮನನ್ನು ಉದಾಹರಿಸುತ್ತಾರೆ. ಇಂತಹ ಉಡಾಫೆ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ನಾವು ಸಮಾಜಕ್ಕೆ ಯಾವ ಸಂದೇಶ ನೀಡುತ್ತೇವೆ ಎಂದು ಪ್ರಶ್ನಿಸಿದರು.

   ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯೂ ಸಹ ಹಾಳಾಗಿದೆ. ಸಂಸತ್ ಕಲಾಪದಲ್ಲಿ ಗಲಾಟೆ, ಸಭಾತ್ಯಾಗಕ್ಕೆ ಪ್ರಧಾನ ಆದ್ಯತೆ ದೊರೆಯುತ್ತಿದೆ. ಸದನ ಸೇರುತ್ತಿದ್ದಂತೆ ಗದ್ದಲ ಉಂಟಾಗುತ್ತದೆ. ಒಬ್ಬರು ಮತ್ತೊಬ್ಬರು ಮೇಲೆ ಆರೋಪ, ಪ್ರತ್ಯಾರೋಪ ಮಾಡುತ್ತಾರೆ. ಪ್ರತಿದಿನ ಸದನ ನಡೆಸಲು ಹತ್ತು ಕೋಟಿ ರೂ. ರೂ ವೆಚ್ಚವಾಗುತ್ತದೆ. ಸಾರ್ವಜನಿಕರ ಹಣದ ಕಿಮ್ಮತ್ತು ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಹತ್ತು ನಿಮಿಷಗಳಲ್ಲಿ ಹದಿನೈದು, ಹದಿನಾರು ಮಸೂದೆಗಳು ಅಂಗೀಕಾರಗೊಳ್ಳುತ್ತವೆ. ಚರ್ಚೆಗಳೇ ನಡೆಯುವುದಿಲ್ಲ. ಹೀಗೆ ರಚನೆಯಾದ ಕಾನೂನುಗಳು ಸಮಾಜಕ್ಕೆ ಹೇಗೆ ಉಪಯೋಗವಾಗುತ್ತದೆ ಎಂದು ಪ್ರಶ್ನಿಸಿದರು.

    ಕಳೆದ 1951ರಲ್ಲಿ ಜೀಪು ಹಣಗರಣ ಬಯಲಿಗೆ ಬಂದಾಗ ಭ್ರಷ್ಟಾಚಾರದ ಮೊತ್ತ 51 ಸಾವಿರ ರೂ. ಬಳಿಕ ದಿನದಿಂದ ದಿನಕ್ಕೆ ಲಂಚದ ಮೊತ್ತ ಹೆಚ್ಚಾಗುತ್ತಲೇ ಬಂದಿದೆ. ಇತ್ತೀಚಿನ ಕಾಮನ್ ವೆಲ್ತ್ ಹಗರಣ 71 ಸಾವಿರ ಕೋಟಿ ರೂ, 2 ಜಿ. ಹಗರಣ 1.76 ಲಕ್ಷ ರೂ, ಬಳಿಕ ಕೋಲ್ಗೇಟ್ ಹಣಗರಣ ನಡೆದಿತ್ತು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಗರಣ ನಡೆಯುತ್ತಿರುವುದು ತುಂಬಾ ನೋವು ತರಿಸಿದೆ. ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಬಗ್ಗೆ ಕಳಕಳಿ ಇರುವವರು ರಾಜಕೀಯಕ್ಕೆ ಬರಬೇಕು. ದುರಾಸೆಯನ್ನು ತೊರೆದು, ಮೌಲ್ಯ ಮಾನವೀಯ ಮೌಲ್ಯವನ್ನು ನೆಲೆಗೊಳಿಸುವವರು ನಮಗೆ ಅಗತ್ಯವಿದ್ದಾರೆ ಎಂದು ಸಂತೋಷ್ ಹೆಗ್ಡೆ ಪ್ರತಿಪಾದಿಸಿದರು.

    ಹಾರ್ವರ್ಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಡಾ, ಗಂಗಣ್ಣ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಇಡೀ ಜಗತ್ತಿಗೆ ಸಲ್ಲುವ ಮಹಾನ್ ನಾಯಕ. ಆದರೆ ಇಂತಹ ದೈತ್ಯ ಶಕ್ತಿಯನ್ನು ನಾವು ಮರೆಯುತ್ತಿದ್ದೇವೆ. ಮಕ್ಕಳಲ್ಲಿ ಗಾಂಧೀಜಿ ಬಗ್ಗೆ ಅರಿವು ಮತ್ತು ಪ್ರಜ್ಞೆ ಮೂಡಿಸುವ ಉದ್ದೇಶದಿಂಧ ಮಕ್ಕಳ ಮೂಲಕ ಸಮಾಜಕ್ಕೆ ಗಾಂಧೀಜಿ ಸಂದೇಶ ರವಾನಿಸುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಗೋಪಿನಾಥ್, ನಿವೃತ್ತ ಪ್ರಾಧ್ಯಾಪಕ ರಾಜಶೇಖರಯ್ಯ, ಸಾಮಾಜಿಕ ಕಾರ್ಯಕರ್ತ ಡಾ. ನಾಗರಾಜ್ ಮತ್ತಿತರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link