ದಾವಣಗೆರೆ:
ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡೆಸಿರುವ ಹಲ್ಲೆ ಖಂಡಿಸಿ, ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್ ಮಾಡಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಜಿಲ್ಲಾ ಘಟಕದ ನೇತೃತ್ವದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು.
ನಗರದ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದ ಸೇವೆ ಸ್ಥಗಿತಗೊಳಿಸಿ, ಬಾಪೂಜಿ ಆಸ್ಪತ್ರೆಯ ಆವರಣದಲ್ಲಿ ಐಎಂಎ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಮಾಯಿಸಿದ ವೈದ್ಯರು, ಮಿಂಟೊ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಕರವೇ ಕಾರ್ಯಕರ್ತರ ದೌರ್ಜನ್ಯ ಖಂಡಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಬಳಿಕ ನಿಯೋಗದ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಣೇಶ ಇಡಗುಂಜಿ, ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ರೋಗಿಗಳ ಪ್ರಾಣ ಕಾಪಾಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಭಯದಲ್ಲೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನ ಮಿಂಟೋ ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಕಾರ್ಯಕರ್ತರು ಹಲ್ಲೆ ನಡೆಸಿ ದೌರ್ಜನ್ಯ ದೌರ್ಜನ್ಯ ಎಸಗಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸರ್ಕಾರವು ವೈದ್ಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆಯಾಚಿಸಬೇಕು ಹಾಗೂ ಹಲ್ಲೆ ನಡೆಸಿರುವ ಕರವೇ ಕಾರ್ಯಕರ್ತರನ್ನು ಬಂಧಿಸಿ, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೋಗಿಗಳ ಸಂಬಂಧಿಗಳಿಗೆ ರೋಗಿಗಳ ಬಳಿ ಹೆಚ್ಚು ಹೊತ್ತು ನಿಲ್ಲಲು, ಕಾಲ ಕಳೆಯಲು ಅವಕಾಶ ನೀಡಿದರೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರಿಗೆ ಮತ್ತು ವೈದ್ಯಕೀಯ ಸಂಬಂಧಿಗಳಿಗೆ ಸಾಕಷ್ಟು ತೊಂಡರೆಯಾಗಲಿದೆ. ಆದ್ದರಿಂದ ರಾಜ್ಯಾದ್ಯಂತ ರೋಗಿ ಕಡೆಯ ಇಬ್ಬರಿಗೆ ಮಾತ್ರವೇ ವಾರ್ಡ್‍ಗೆ ಬರಲು ನಿಯಮ ವಿಧಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವ, ದೌರ್ಜನ್ಯ ಎಸಗುವ, ಆಸ್ಪತ್ರೆಗಳಆಸ್ತಿಪಾಸ್ತಿ ಹಾನಿಗೀಡು ಮಾಡುವವರನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ವೈದ್ಯರು ಭಯಮುಕ್ತರಾಗಿ ಕಾರ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ವೈದ್ಯರಾದ ಡಾ.ಬಿ.ಎಸ್.ನಾಗಪ್ರಕಾಶ, ಡಾ.ಸುಬೋಧ ಶೆಟ್ಟಿ, ಡಾ.ಪ್ರವೀಣ ಅಣ್ವೇಕರ್, ಡಾ.ರವಿ, ಡಾ.ಪ್ರತ್ಯಕ್ಷ, ಡಾ.ಕಿರಣ್ ಹೆಗಡೆ ಸೇರಿದಂತೆ ಹಿರಿ-ಕಿರಿಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
