ಹೊಳಲ್ಕೆರೆ :ರಸ್ತೆ ಮಧ್ಯೆದಲ್ಲೆ ನಡೆಯುವ ವಾರದ ಸಂತೆ..!

ಹೊಳಲ್ಕೆರೆ:

       ಪಟ್ಟಣದಲ್ಲಿ ನಡೆಯುವ ಭಾನುವಾರದ ಸಂತೆ ಬಸ್ ನಿಲ್ದಾಣದ ಮುಂದೆ ಹಾದು ಹೋಗುವ ರಾಜ್ಯ ಹೆದ್ದಾರಿ ಮದ್ಯದಲ್ಲೆ ನಡೆಯುತ್ತಿರುವುದರಿಂದ ವಾಹನ ಸಂಚಾರ ಚಾಲಕರು ಭೀತಿ ಭಯದಿಂದ ವಾಹನಗಳನ್ನು ಚಾಲನೆ ಮಾಡಬೇಕಾಗಿದೆ. ಒಂದು ಸ್ವಲ್ಪ ಯಾಮಾರಿದರೆ ಅಪಘಾತ ಸಂಭವಿಸುವುದರಲ್ಲಿ ಯಾವುದೇ ಸಂಶಯವೇಇಲ್ಲದಂತಾಗಿದೆ.

      ಈ ಸಂತೆಗೆ ಪಟ್ಟಣ ಪಂಚಾಯಿತಿ ಹಿಂದೆ ಇದ್ದ ಪುರಸಭೆ ಖಾಯಂ ಸ್ಥಳವನ್ನು ನಿಗದಿಪಡಿಸುವುದರಿಂದ ಅಂಗಡಿ ಮುಂಗಟ್ಟುಗಳು ಭಾನುವಾರ ಸಂತೆಯಲ್ಲಿ ತಮ್ಮ ವ್ಯಾಪಾರಗಳನ್ನು ನಿರ್ವಹಿಸಲು ಸರಿಯಾದ ಸ್ಥಳವಿಲ್ಲದೆ ಅನಿವಾರ್ಯವಾಗಿ ರಸ್ತೆಯಲ್ಲೇ ಸಂತೆ ವ್ಯಾಪಾರ ಮಾಡುತ್ತಿದ್ದಾರೆ.

      ಭಾನುವಾರ ಸಂತೆಗೆ ತಾಲ್ಲುಕು ಮತ್ತೀತರೆ ದೂರದ ಗ್ರಾಮಗಳಿಂದ ಸಂತೆಯಲ್ಲಿ ಕೊಳ್ಳುವುದು ಕೊಡುವುದಕ್ಕೋಸ್ಕರ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಈ ಸಂತೆಯ ವ್ಯವಸ್ಥೆ ಪಟ್ಟಣ ಪಂಚಾಯಿತಿಗೆ ಸೇರಿದೆ. ಪಟ್ಟಣ ಪಂಚಾಯಿತಿ ತನ್ನ ನಿವೇಶನದಲ್ಲಿ ಸಂತೆ ನಡೆಯದಿದ್ದರು ಪ್ರತಿವರ್ಷ ಲಕ್ಷಾಂತರ ರೂಪಾಯಿ ತೆರೆಯನ್ನು ವಸೂಲು ಮಾಡುವುದು ಮಾತ್ರ ನಿಂತಿಲ್ಲ.

      ವರ್ಷಕ್ಕೆ ಸಾಕಷ್ಟು ಆದಾಯ ಈ ಸಂತೆಯಲ್ಲಿ ಪಟ್ಟಣ ಪಂಚಾಯಿತಿ ಖಜಾನೆಗೆ ಜಮಾ ಆದರು ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಈ ಬಗ್ಗೆ ಎಳ್ಳೆಷ್ಟು ಕಾಳಜಿ ಇಲ್ಲ. ಸಂತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ವೃಧ್ದರು ಮತ್ತು ಮಕ್ಕಳು ತರಕಾರಿ ಮತ್ತೀತರೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಂತೆಗೆ ಬರುವುದು ಅನಿವಾರ್ಯವಾಗಿದೆ.

       ರಸ್ತೆಯ ಮದ್ಯದಲ್ಲಿ ಸಂತೆ ನಡೆಯುವುದರಿಂದ ಬಸ್ಸುಗಳು, ಲಾರಿಗಳು, ಕಾರು, ದ್ವೀಚಕ್ರವಾಹನಗಳು, ರೈತರ ಎತ್ತಿನ ಗಾಡಿಗಳು, ದನಕರುಗಳು, ಕುರಿ ಮೇಕೆಗಳು, ಈ ರಸ್ತೆಯಲ್ಲೇ ಮುಂದಕ್ಕೆ ಸಂಚರಿಸಬೇಕು. ಇಂತಹ ವಾತಾವರಣದಲ್ಲಿ ವ್ಯಾಪರಸ್ಥರಿಗೂ ಮತ್ತು ಕೊಳ್ಳುವವರಿಗೂ ಎಲ್ಲಿ ವಾಹನಗಳಿಂದ ಅಪಾಯ ಸಂಭವಿಸುತ್ತದೆಯೋ ಎಂಬ ಭೀತಿಯಲ್ಲಿಯೇ ಇಡೀ ದಿನ ಚಿಂತಿಸುತ್ತಾರೆ.

        ಈ ಬಗ್ಗೆ ರಸ್ತೆ ಸಂಚಾರ ನಿಯಂತ್ರಣ ಮಾಡುವಲ್ಲಿ ಪೋಲೀಸರಾಗಲಿ ಅಥವಾ ಪ.ಪಂ.ಯ ಸಿಬ್ಬಂದಿಯಾಗಲಿ ಸಂತೆ ಕಡೆ ತಲೆ ಹಾಕುತ್ತಿಲ್ಲ. ಈ ಸಂತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಕಿರಿಕಿರಿಯಾಗುತ್ತದೆ. ಈ ಸಂತೆ ನೂರಾರು ವರ್ಷಗಳಿಂದ ಪಟ್ಟಣದಲ್ಲಿ ಪ್ರತಿಭಾನುವಾರ ನಡೆಯುತ್ತಿದ್ದು ಸಂತೆಗೆ ಬೇಕಾದ ಅಗತ್ಯ ಜಾಗವನ್ನು ಎಲ್ಲಿಯೂ ನಿಗದಿ ಮಾಡಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಬರೀ ಶುಲ್ಕ ವಸೂಲಿ ಮಾಡುವುದರಲ್ಲಿ ಇಷ್ಟು ವರ್ಷಗಳು ತಪ್ಪಿಲ್ಲ.

        ಮಳೆಗಾಲದಲ್ಲಿ ಈ ಸಂತೆಗೆ ತಮಗೆ ಬೇಕಾದ ಅವಶ್ಯಕ ವಸ್ತುಗಳನ್ನು ಕೊಳ್ಳಲು ಹೋಗುವ ವ್ಯಾಪಾರಸ್ಥರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಸಂತೆಗೆ ಬೇಕಾಗುವ ಶಾಶ್ವತ ಜಾಗವನ್ನು ನಿಗದಿ ಮಾಡುವಲ್ಲಿ ಪಟ್ಟಣ ಪಂಚಾಯಿತಿ(ಪುರಸಭೆ), ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೀನಾಮೇಷ ಮಾಡುತ್ತಿರುವುದರಿಂದ ನಾಗರೀಕರಿಗೆ ಮತ್ತು ವ್ಯಾಪರಸ್ಥರು ಸಂತೆ ದಿನ ತಾವು ಅನುಭವಿಸುವ ಯಾತನೆಯನ್ನು ವ್ಯಕ್ತಪಡಿಸಿ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ ಈ ಪಟ್ಟಣದಲ್ಲಿ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap