ಅಯ್ಯೋ… ಈ ಪ್ರಕರಣ ಮುಗಿದರೆ ಸಾಕಾಗಿತ್ತು !

ತುಮಕೂರು:

      ಯಾರನ್ನು ಕೇಳಿದರೂ ಈ ಮಾತುಗಳು ಹೊರಬರುತ್ತವೆ. ರಾಮಜನ್ಮಭೂಮಿ, ಬಾಬರಿ ಮಸೀದಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾರಲ್ಲೂ ಆವೇಶಭರಿತ ಮಾತುಗಳಿಲ್ಲ. ಪರ ವಿರೋಧದ ಚರ್ಚೆಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತೀರ್ಪು ಏನೇ ಇರಲಿ, ಅದನ್ನು ಒಪ್ಪುತ್ತೇವೆ, ಪಾಲಿಸುತ್ತೇವೆ ಎಂಬ ಮಾತುಗಳು ಎಲ್ಲ ವಲಯದಿಂದ ಎದುರಾಗುತ್ತಿದೆ.

       ಕಳೆದ ಹತ್ತು ವರ್ಷಗಳ ಹಿಂದಿನ ಕಾಲಕ್ಕೂ ಈಗಿನ ಸನ್ನಿವೇಶಕ್ಕೂ ಸಾಕಷ್ಟು ಬದಲಾವಣೆ ಕಂಡಿದ್ದೇವೆ. ಆಗಿನ ವಾತಾವರಣವೇ ಬೇರೆ, ಈಗಿನ ವಾತಾವರಣವೇ ಬೇರೆ. ಆ ಸ್ಥಳ ವಿವಾದವನ್ನೇ ಮುಂದಿಟ್ಟುಕೊಂಡು ನಾವ್ಯಾಕೆ ಹೋರಾಡಬೇಕು. ನಮಗೀಗ ಮುಖ್ಯವಾಗಿ ಬೇಕಿರುವುದು ಬದುಕು. ಈ ರಾಷ್ಟ್ರದಲ್ಲಿ ಎಲ್ಲರೂ ಸಮಾನವಾಗಿ ಬದುಕಬೇಕು. ಪರಸ್ಪರ ಪ್ರೀತಿಸಬೇಕು. ಹೀಗಿರುವಾಗ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಂಡು ಸಾಮಾಜಿಕ ಸ್ವಾಸ್ತ್ಯವನ್ನು ಹಾಳಮಾಡಬೇಕೆ ಎಂಬ ಪ್ರಶ್ನೆಗಳು ಎದುರಾಗುತ್ತಿವೆ.

      ಅಯೋಧ್ಯ ಪ್ರಕರಣದ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಒಂದೆರಡು ದಿನ ರಾಷ್ಟ್ರಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಇದಕ್ಕೂ ಮುನ್ನ ತೀರ್ಪು ಬರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸಭೆಗಳೂ ನಡೆದಿದ್ದವು. ಕೆಲವು ಪ್ರಜ್ಞಾವಂತರು, ಮುಖಂಡರುಗಳು ಸಭೆ ನಡೆಸಿ ತೀರ್ಪನ್ನು ಸ್ವಾಗತಿಸುವ ಬಗ್ಗೆ ತಿಳಿಹೇಳಿದ್ದರು. ಬೆಂಗಳೂರಿನಲ್ಲಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ.ಗೋಪಾಲಗೌಡ ಸೇರಿದಂತೆ ಹಲವು ಸಾಹಿತಿಗಳು, ಪ್ರಜ್ಞಾವಂತರು ಸಭೆ ನಡೆಸಿ ಸುಪ್ರೀಂಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಸ್ವಾಗತಿಸಬೇಕೆಂದು ಕರೆ ಕೊಟ್ಟಿದ್ದರು.

     ಇದೇ ರೀತಿ ಜಿಲ್ಲಾವಾರು, ತಾಲ್ಲೂಕುವಾರು ಸಭೆಗಳು ನಡೆದಿದ್ದವು. ಇದಕ್ಕಿಂತಲೂ ಹೆಚ್ಚಾಗಿ ಈಗ ಜನರ ಮನಸ್ಸಿನಲ್ಲಿ ಹಿಂದೆ ಇದ್ದ ಭಾವನಾತ್ಮಕ ಭಾವನೆಗಳು , ಹೋರಾಟದ ಕಿಚ್ಚು ಅಥವಾ ಟೀಕಾತ್ಮಕ ಮಾತುಗಳು ಇಲ್ಲವಾಗಿವೆ. ಬದಲಾಗಿ ಬದುಕು ಮುಖ್ಯ ಎನ್ನುವಂತಹ ಮಾತುಗಳು ಮುನ್ನಲೆಗೆ ಬಂದಿವೆ. ಇದಕ್ಕೆ ಪೂರಕವಾಗಿ ಸರ್ಕಾರಗಳು ಕೈಗೊಂಡ ಕ್ರಮ, ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪಿನ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದೇ ಆದಲ್ಲಿ ಕೈಗೊಳ್ಳುವ ಕ್ರಮಗಳು ಇತ್ಯಾದಿಗಳನ್ನ ಇದಕ್ಕೆ ಪೂರಕವಾಗಿಯೇ ಕೆಲಸ ಮಾಡಿವೆ.

       ಅಯೋಧ್ಯಾ ತೀರ್ಪನ್ನು ಎಲ್ಲರೂ ಸ್ವಾಗತಿಸುವ ಮನಸ್ಥಿತಿಗೆ ಬಂದಿದ್ದು, ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಬೇಕು ಎಂಬ ನಿಲುವಿಗೆ ಅನೇಕರು ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಸಂಘಟನೆಗಳು ವಿರೋಧ ವ್ಯಕ್ತಪಡಿಸದೆ ಸಹಮತ ವ್ಯಕ್ತಪಡಿಸುತ್ತಿರುವುದು ಮತ್ತೊಂದು ಮಹತ್ವದ ಬೆಳವಣಿಗೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link