ಚಿತ್ರದುರ್ಗ: 
ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಪ್ರವಾದಿ ಮಹಮದ್ ಪೈಗಂಬರ್‍ರವರ ಆದರ್ಶದಂತೆ ಎಲ್ಲಾ ಜಾತಿ ಧರ್ಮದವರು ಪ್ರೀತಿ, ವಿಶ್ವಾಸ, ಸಹಭಾಳ್ವೆಯಿಂದ ಜೀವಿಸಿದರೆ ಯಾವ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್ ಪಾಷ ತಿಳಿಸಿದರು.
ಸಂತೆಹೊಂಡದ ಸಮೀಪವಿರುವ ಜಟಕಾ ಸ್ಟಾಂಡ್‍ನಲ್ಲಿ ಭಾನುವಾರ ನಡೆದ ಈದ್-ಮಿಲಾದ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತ ಇಸ್ಲಾಂ ಧರ್ಮ ದೊಡ್ಡ ಧರ್ಮ. ಇಸ್ಲಾಂ ಎಂದರೆ ಶಾಂತಿ ಎಂದರ್ಥ. ಹಿಂಸೆ ಭಯೋತ್ಪಾದನೆಯಲ್ಲಿ ಯಾರು ತೊಡಗುತ್ತಾರೋ ಅಂಹವರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎನ್ನುವುದನ್ನು ಮೊದಲು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಅಯೋಧ್ಯೆ ಹಾಗೂ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ದೇಶದ ಜನ ಸ್ವಾಗತಿಸಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಮಾತನಾಡಿ ಇಸ್ಲಾಂ ಧರ್ಮದ ಕೊನೆಯ ಪ್ರವಾದಿಯಾಗಿ ಆಗಮಿಸಿದ ಶಾಂತಿ ಧೂತ ಮಹಮದ್ ಪೈಗಂಬರ್ ಖುರಾನ್ ಮೂಲಕ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಖುರಾನ್‍ನಲ್ಲಿರುವ ಅಂಶಗಳನ್ನು ತಿಳಿದುಕೊಂಡು ಶಾಂತಿಯಿಂದ ನಡೆಯಬೇಕು ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಭಕ್ಷ್ ಮಾತನಾಡುತ್ತ ಮಹಮದ್ ಪೈಗಂಬರ್ ನೀಡಿರುವ ಪವಿತ್ರ ಗ್ರಂಥ ಖುರಾನ್‍ನಲ್ಲಿ ಎಲ್ಲಾ ವಿಚಾರಗಳು ಅಡಕವಾಗಿವೆ. ಖುರಾನ್‍ನಲ್ಲಿರುವ ವಿಚಾರದಂತೆ ಪ್ರತಿಯೊಬ್ಬರು ಜೀವಿಸಿದಾಗ ಶಾಂತಿ, ಸೌಹಾರ್ಧತೆ ನೆಲೆಸುತ್ತದೆ ಎಂದು ತಿಳಿಸಿದರು.
ಈದ್-ಮಿಲಾದ್ ಆಚರಣೆಯ ದಿವ್ಯ ಸಾನಿಧ್ಯ ವಹಿಸಿದ್ದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿ ಮಾತನಾಡಿ ಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆ ಶಾಂತಿಗೆ ಹೆಸರುವಾಸಿಯಾದುದು. ಇಸ್ಲಾಂ ಧರ್ಮ ಎಂದರೆ ಶಾಂತಿ ಪರಿಪಾಲಕರು ಎಂದರ್ಥ. ಪ್ರವಾದಿ ಮಹಮದ್ ಪೈಗಂಬರ್‍ರವರ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಎಲ್ಲಿಯೂ ಕೋಮುಗಲಭೆ ಗಲಾಟೆಗೆ ಅವಕಾಶವಿರುವುದಿಲ್ಲ. ಎಲ್ಲಾ ವಿಚಾರಗಳು ಖುರಾನ್‍ನಲ್ಲಿ ಒಳಗೊಂಡಿದೆ ಎಂದು ನುಡಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಎ.ಜಾಕೀರ್ ಹುಸೇನ್, ನಗರಸಭೆ ಸದಸ್ಯ ಜೈನುಲ್ಲಾಬ್ದಿನ್, ಜುನೈದ್ ಸಖಾಫಿ ಸಾಹೇಬ್ ಇವರುಗಳು ಮಾತನಾಡಿದರು.ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾಧ್ಯಕ್ಷ ಗಣೇಶ್, ಡಾ.ಅಂಬರೀಶ್, ಹೆಚ್.ಎಸ್.ಖಾನ್, ಟಿ.ಎಂ.ಕೆ.ಮನ್ಸೂರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








