ದಾವಣಗೆರೆ:
ನ.12ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಭಾನುವಾರ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಮನೆ, ಮನೆಗೆ ಭೇಟಿ ನೀಡಿ ಮನವೊಲಿಸುತ್ತಿದ್ದರೆ, ಕಾಂಗ್ರೆಸ್-ಬಿಜೆಪಿ ನಾಯಕರು ಪ್ರತಿಷ್ಟೆಯಾಗಿರುವ ಪಾಲಿಕೆಯನ್ನು ಹೇಗಾದರೂ ಮಾಡಿ ತಮ್ಮ ವಶಕ್ಕೆ ಪಡೆಯಬೇಕೆಂಬ ಲೆಕ್ಕಚಾರದೊಂದಿಗೆ ತಂತ್ರ-ಪ್ರತಿತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.
ಭಾನುವಾರ ಬೆಳಿಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿರುವುದರಿಂದ ಒಂದು ವಾರದಿಂದ ಮಹಾನಗರದಲ್ಲಿ
ನಡೆಯುತ್ತಿದ್ದ ಪ್ರಚಾರದ ಭರಾಟೆ, ಘೋಷಣೆಗಳ ಅಬ್ಬರ ಭಾನುವಾರ ಅಷ್ಟಾಗಿ ಕೇಳಿ ಬರಲಿಲ್ಲ. ಆದರೆ, ಅಭ್ಯರ್ಥಿಗಳು ಮತ್ತವರ ಬೆರಳೆಣಿಕೆಯ ಬೆಂಬಲಿಗರು ಮನೆ, ಮನೆಗಳಿಗೆ ಭೇಟಿ ನೀಡಿ, ಮತದಾರರನ್ನು ತಮ್ಮನ್ನೇ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದರೆ, ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಮಹಾನಗರ ಪಾಲಿಕೆಯನ್ನು ಮತ್ತೆ ‘ಕೈ’ ವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿದ್ದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿ ಏನಾದರೂ ಮಾಡಿ ‘ಕಮಲ’ ಅರಳಿಸಬೇಕೆಂಬ ಮಹದಾಸೆಯಿಂದ ಪ್ರತಿ ತಂತ್ರ ರೂಪಿಸುತ್ತಿದೆ. ಇನ್ನೂ ಜೆಡಿಎಸ್ ಸಹ ಕಿಂಗ್ ಮೇಕರ್ ಆಗುವ ಇರಾದೆ ಹೊಂದಿದೆ.
ಒಟ್ಟು 45 ಸ್ಥಾನಗಳ ಹೊಂದಿರುವ ಮಹಾನಗರ ಪಾಲಿಕೆ ಚುನಾವಣಾ ಅಖಾಡದಲ್ಲಿ 85 ಜನ ಪಕ್ಷೇತರರು, 44 ಮಂದಿ ಕಾಂಗ್ರೆಸ್, 45 ಜನ ಬಿಜೆಪಿ, 23 ಜನ ಜೆಡಿಎಸ್, ಆರು ಮಂದಿ ಸಿಪಿಐ, ಮೂವರು ಬಿಎಸ್‍ಪಿ, ಇಬ್ಬರು ಕೆಪಿಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 208 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈಗಾಗಲೇ ಕಳೆದ ಬಾರಿ ಆಡಳಿತ ನಡೆಸಿರುವ ಕಾಂಗ್ರೆಸ್ ಮಹಾನಗರ ಪಾಲಿಕೆಯ ಗದ್ದುಗೆಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ರೂಪಿಸುತ್ತಿರುವ ತಂತ್ರಕ್ಕೆ, ಪ್ರತಿಯಾಗಿ ರಣತಂತ್ರ ರೂಪಿಸಿರುವ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂಬ ಪಣ ತೊಟ್ಟಿದ್ದರೆ, ಇವರಿಬ್ಬರ ಮಧ್ಯೆ ಜೆಡಿಎಸ್ ಈ ಬಾರಿ ಪಾಲಿಕೆಯಲ್ಲಿ ಖಾತೆ ತೆರೆಯಲೇ ಬೇಕೆಂಬ ಸಂಕಲ್ಪ ಮಾಡಿದೆ.
ಪಾಲಿಕೆಯ ಮೂರನೇ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆ ಕಂಡು ಬಂದರೂ, ಈ ಎರಡೂ ಪಕ್ಷಗಳಿಂದಲೂ ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿರುವವು ಕೆಲ ವಾರ್ಡ್‍ಗಳಲ್ಲಿ ಮುಳುವಾಗುವುದಲ್ಲಿ ಯಾವುದೇ ಸಂದೇಹವಿಲ್ಲ. ಇನ್ನೂ ಕೆಲವು ವಾರ್ಡ್‍ಗಳಲ್ಲಿ ಕೈ, ಕಮಲ ಹಾಗೂ ತೆನೆ ಹೊತ್ತ ಮಹಿಳೆಯ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟಿದ್ದರೆ, ಮತ್ತೆ ಕೆಲವಡೆ ಸಿಪಿಐ ಮತ್ತು ಪಕ್ಷೇತರರು ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
45 ವಾರ್ಡ್‍ಗಳ ಪೈಕಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದರೆ, ಮುಸ್ಲಿಂ ಪ್ರಾಬಲ್ಯ ಇರುವ ನಾಲ್ಕೈದು ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ನೇಎ ಹಣಾಹಣಿ ಏರ್ಪಟ್ಟಿದೆ.45ನೇ ವಾರ್ಡ್‍ನಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದ್ದ ಅಭ್ಯರ್ಥಿಯ ನಾಮಪತ್ರ ತಿರಸ್ಕøತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವೆಂಕಟೇಶ್ ಗಾಳೆಪ್ಪಗೆ ಬೆಂಬಲ ಘೋಷಿಸಿದ್ದು, ಕಾಂಗ್ರೆಸ್‍ಗೆ ಮೂರ್ನಾಲ್ಕು ವಾರ್ಡ್‍ಗಳಲ್ಲಿ ಬಂಡಾಯದ ಬಿಸಿ ತಟ್ಟಿದ್ದರೆ, ಬಿಜೆಪಿಗೆ ಆರು ವಾರ್ಡ್‍ಗಳಲ್ಲಿ ಬಂಡಾಯ ಅಭ್ಯರ್ಥಿಗಳೇ ಮುಳುವಾಗುವ ಸಾಧ್ಯತೆ ಹೆಚ್ಚಿದೆ.
ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರುಗಳು ರಾಜ್ಯ ಸರ್ಕಾರದಿಂದ ಅನುದಾನ ತಂದು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳು ನಮ್ಮ ನಾಯಕರು ಮಾಡಿರುವ ಕೆಲಸಕ್ಕೆ ಮತಗಳ ರೂಪದಲ್ಲಿ ಕೂಲಿ ಕೊಡಿ ಎಂಬುದಾಗಿ ಮತದಾರರನ್ನು ಒಲೈಸಲು ಮುಂದಾಗಿದ್ದರೆ. ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ದಾವಣಗೆರೆಯ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಬೇಕಾದರೆ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಹಾನಗರ ಪಾಲಿಕೆ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮತದಾರ ಕೊನೆಯಲ್ಲಿ ಯಾರಿಗೆ ಜೈ ಅನ್ನುತ್ತಾನೋ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
