ಬೆಂಗಳೂರು
ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಅಳವಡಿಸಲಾಗಿರುವ ನಿಲ್ದಾಣಕ್ಕೆ ಪ್ರವೇಶಿಸುವ ಕ್ರಿಮಿನಲ್‌ಗಳ ಪತ್ತೆಯ ಫೇಸ್ ರೆಕಗ್ನಿಷನ್ ಟೆಕ್ನಾಲಜಿ(ಮುಖ ಚರ್ಯೆ ತಂತ್ರಜ್ಞಾನ)ವು ದೇಶದ ಎಲ್ಲ ರೈಲ್ವೆ ನಿಲ್ದಾಣಗಳಲ್ಲೂ ಅನುಷ್ಠಾನ ಗೊಳ್ಳಲಿದೆ.ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಿರುವ ಫೇಸ್ ರೆಕಗ್ನಿಷನ್ ಟೆಕ್ನಾಲಜಿಹಂತ ಹಂತವಾಗಿ ಅಳವಡಿಸಲು ರೈಲ್ವೆ ರಕ್ಷಣಾ ಪಡೆ(ಪ್ರೊಟೆಕ್ಷನ್ ಫೋರ್ಸ್) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಶಂಕಿತ ಉಗ್ರರು, ಹಳೆಯ ಆರೋಪಿಗಳು, ಅಪರಾಧ ಕೃತ್ಯದಲ್ಲಿ ತೊಡಗಿದವರ ಹಿನ್ನೆಲೆ ಹಾಗೂ ಫೋಟೋವನ್ನು ಸಾಫ್ಟ್‌ವೇರ್ ಮೂಲಕ ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್‌ಗೆ ನಿಗದಿಪಡಿಸಿದ ಕೆಲ ಸಿಸಿ ಕ್ಯಾಮರಾಗಳಿಂದ ಸಂಪರ್ಕ ಕಲ್ಪಿಸಲಾಗುತ್ತದೆ.
ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಈಗಾಗಲೇ ಸಂಗ್ರಹಿಸಲ್ಪಟ್ಟಿರುವ ದತ್ತಾಂಶ ವಿಶೇಷವಾಗಿ ಕ್ರೈಮ್ ಆಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್‌ವರ್ಕ್ ಆಂಡ್ ಸಿಸ್ಟಮ್ಸ್ ಜತೆಗೆ ಜೋಡಿಸಲು ಆರ್‌ಪಿಎಫ್ ಉದ್ದೇಶಿಸಿದೆ. ಆ ಮೂಲಕ ಅಪರಾಧಿಗಳು ರೈಲ್ವೆ ನಿಲ್ದಾಣ ಪ್ರವೇಶಿಸುವಾಗ ರಕ್ಷಣಾ ಪಡೆಯನ್ನು ಜಾಗೃತ ಗೊಳಿಸಲು ಉದ್ದೇಶಿಸಲಾಗಿದೆ.
ಸಾಫ್ಟ್‌ವೇರ್‌ಗೆ ತಕ್ಕನಾಗಿ ಸಿಸಿ ಕ್ಯಾಮರಾ ಕೆಲಸ ಮಾಡುತ್ತದೆ. ಕಂಪ್ಯೂಟರ್‌ನಲ್ಲಿ ಮಾಹಿತಿ ಅಳವಡಿಸಿರುವ ಶಂಕಿತ ಉಗ್ರರು, ಹಳೆಯ ಆರೋಪಿಗಳು, ಅಪರಾಧ ಕೃತ್ಯದಲ್ಲಿ ತೊಡಗಿದವರು ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾದ ಈ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೂಡಲೇ ರೈಲ್ವೆ ಎಸ್‌ಪಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂನ ಕಂಪ್ಯೂಟರ್‌ನಲ್ಲಿ ಅವರ ಭಾವಚಿತ್ರ ಜತೆ ಕೆಂಪು ಬಣ್ಣದ ದೀಪ ಉರಿಯುತ್ತದೆ.
ಕಂಟ್ರೋಲ್ ರೂಂನ ಸಿಬ್ಬಂದಿ ಕೂಡಲೇ ಕರ್ತವ್ಯದಲ್ಲಿರುವ ರೈಲ್ವೆ ಪೊಲೀಸರಿಗೆ ಕಂಪ್ಯೂಟರ್‌ನಲ್ಲಿ ಸೆರೆಯಾದ ಆರೋಪಿಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಮಾಹಿತಿ ಆಧರಿಸಿ ಕ್ಷಣ ಮಾತ್ರದಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ.ಮುಂಬೈ 9/11 ದಾಳಿ ನಂತರದಲ್ಲಿ ರೈಲ್ವೆ ನಿಲ್ದಾಣಗಳ ಸುರಕ್ಷತೆ ಹೆಚ್ಚಿಸುವ ಕ್ರಮ ಹಂತ ಹಂತವಾಗಿ ಜಾರಿಯಲ್ಲಿದೆ. ಈಗಾಗಲೇ ಫೇಸ್ ರೆಕಗ್ನಿಷನ್ ಟೆಕ್ನಾಲಜಿ ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಅಳವಡಿಕೆಯಾಗಿದೆ. ಹೀಗೆ ಬೇರೆ ಬೇರೆ ವಿಮಾನ ನಿಲ್ದಾಣಗಳಲ್ಲೂ ಇದರ ಅಳವಡಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








