ತುಮಕೂರು
ಜಿಲ್ಲಾ ವ್ಯಾಪ್ತಿಯಲ್ಲಿ ತೆರೆದ ವಿಫಲ ಹಾಗೂ ಅನುಪಯುಕ್ತ ಕೊಳವೆಬಾವಿಗಳಲ್ಲಿ ಚಿಕ್ಕಮಕ್ಕಳು ಬಿದ್ದು ಸಂಭವಿಸುವ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ದೃಷ್ಟಿಯಿಂದ ಕೊಳವೆಬಾವಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಕಳೆದ ಶುಕ್ರವಾರ ನ.8ರಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತೆರೆದ ವಿಫಲ ಹಾಗೂ ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಆಯೋಜಿಸಲಾಗಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಕೃಷಿ ಜಮೀನುಗಳಲ್ಲಿ ಅಥವಾ ಖಾಸಗಿಯಾಗಿ ಕೊರೆದಿರುವ ತೆರೆದ ವಿಫಲ ಹಾಗೂ ಅನುಪಯುಕ್ತ ಕೊಳವೆಬಾವಿಗಳನ್ನು ಕೇಸಿಂಗ್ ಪೈಪು ಇದ್ದಲ್ಲಿ ಮುಚ್ಚಳ ಹಾಕಿ ಭದ್ರವಾಗಿ ಮುಚ್ಚಬೇಕು. ಇಲ್ಲದಿದ್ದರೆ ಕೊಳವೆಬಾವಿಯನ್ನು ಸಂಪೂರ್ಣವಾಗಿ ತಳಭಾಗದಿಂದ ನೆಲಮಟ್ಟದವರೆಗೆ ಕಲ್ಲು, ಮಣ್ಣು ಹಾಕಿ ಮುಚ್ಚಬೇಕು ಎಂದು ಅವರು ತಿಳಿಸಿದರು.
ತೆರೆದ ಅಸುರಕ್ಷಿತ ಕೊಳವೆಬಾವಿಗಳನ್ನು ಸಮರ್ಪಕವಾಗಿ ಮುಚ್ಚಲು ನಿರ್ಲಕ್ಷ್ಯತೆ ತೋರಿಸುವವರ ಮೇಲೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವಿಡಿಯೋ ಸಂವಾದ ಸಭೆಯಲ್ಲಿ ಅನಧಿಕೃತ ರಿಗ್ ವಾಹನಗಳ ಮೇಲೆ ಕ್ರಮ ಜರುಗಿಸಲು ಸಕ್ಷಮ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಹಾಯಕ ಆಯುಕ್ತರು, ಎಲ್ಲಾ ತಾಲ್ಲೂಕಿನ ತಹಶಿಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ನೀರು ಸರಬರಾಜು ಇಲಾಖೆ, ಪೌರಾಯುಕ್ತರು/ಮುಖ್ಯಾಧಿಕಾರಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ