ಪಾಲಿಕೆಯಲ್ಲಿ ಶಾಸಕರ ಸಭೆ..!

ತುಮಕೂರು
   “ತುಮಕೂರು ನಗರದಲ್ಲಿ ಕೈಗೊಳ್ಳುತ್ತಿರುವ ಸ್ಮಾರ್ಟ್‍ಸಿಟಿ ಯೋಜನೆಗಳು ವರ್ತಮಾನಕ್ಕೆ ಸ್ಪಂದಿಸುವಂತಿರಬೇಕೇ ವಿನಃ, ಇನ್ನು ನೂರು ವರ್ಷಗಳ ಬಳಿಕ ಅನುಕೂಲಕ್ಕೆ ಬರಲಿದೆ ಎಂಬಂತಾಗಬಾರದು” ಎಂದು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. 
     ಸೋಮವಾರ ಬೆಳಗ್ಗೆ ತುಮಕೂರು ನಗರದ ತುಮಕೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಬಗ್ಗೆ ಪರಾಮರ್ಶೆ ನಡೆಸಿ ಅವರು ಮಾತನಾಡುತ್ತಿದ್ದರು. 
    “ನಗರದ ಗ್ರಂಥಾಲಯ, ಬಸ್ ನಿಲ್ದಾಣ ಆಧುನೀಕರಣ ಆಗಬೇಕು ಎಂಬುದು ಒಪ್ಪಬೇಕಾದ ಸಂಗತಿ. ಆದರೆ ಅದು ಈ ಹೊತ್ತಿಗೆ ಅನುಕೂಲವಾಗುವಂತೆ ಇರಬೇಕು. ಅದನ್ನು ಬಿಟ್ಟು ಮುಂದೆ ಯಾವಾಗಲೋ ಅನುಕೂಲವಾಗುತ್ತದೆಂದು ತುಮಕೂರು ನಗರದ ವರ್ತಮಾನದ ಮಟ್ಟಕ್ಕೆ ಮೀರಿ, ಭಾರತೀಯ ವಿಜ್ಞಾನ ಸಂಸ್ಥೆಗೆ ಅನುಕೂಲವಾಗುವಂತಹ ಗ್ರಂಥಾಲಯ ರೂಪಿಸುವ ಯೋಜನೆ ಹಾಕಿಕೊಂಡು, ಅದಕ್ಕಾಗಿ ಹಲವು ಕೋಟಿ ರೂ.ಗಳ ಅಂದಾಜು ರೂಪಿಸುವುದು ಅವಾಸ್ತವಿಕವೆನಿಸುತ್ತದೆ. ಅದರ ಬದಲು ವರ್ತಮಾನಕ್ಕೆ ಹೊಂದುವ ಹಾಗೂ ಈ ತಕ್ಷಣಕ್ಕೆ ಬಳಕೆಯಾಗುವ ಯೋಜನೆ ರೂಪಿಸಬೇಕು. ಉಳಿದ ಹಣವನ್ನು ತುಮಕೂರು ನಗರದ ಇನ್ನಷ್ಟು ಸ್ಮಾರ್ಟ್‍ರಸ್ತೆ, ಚರಂಡಿ ನಿರ್ಮಾಣದಂತಹ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಬಹುದು” ಎಂದು ಅವರು ಹೇಳಿದರು.
 “ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರದಲ್ಲಿ ನಡೆಯುವ ಯಾವುದೇ ಕಾಮಗಾರಿ ಬಗ್ಗೆ ಮೊದಲು ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಿ ಚರ್ಚಿಸಿ” ಎಂದು ತುಮಕೂರು ಸ್ಮಾರ್ಟ್‍ಸಿಟಿ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  “ಸ್ಮಾರ್ಟ್‍ಸಿಟಿ ಯೋಜನೆಯಡಿ ಎಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಇಲ್ಲದಿರುವುದೇ ಇಂದಿನ ಎಲ್ಲ ಗೊಂದಲಗಳಿಗೆ, ಸಮಸ್ಯೆಗಳಿಗೆ ಕಾರಣವಾಗಿದೆ. ನಗರದ ಸಾರ್ವಜನಿಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡಿದ್ದರೆ ಇಂದಿನ ಗೊಂದಲ, ಅಪಸ್ವರಕ್ಕೆ ಎಡೆಯೇ ಇರುತ್ತಿರಲಿಲ್ಲ” ಎಂಬ ಅನಿಸಿಕೆ ವ್ಯಕ್ತಪಡಿಸಿದರು. 
   “ಸ್ಮಾರ್ಟ್‍ಸಿಟಿ ಯೋಜನೆಗಳನ್ನು ಎಲ್ಲೋ ಕುಳಿತುಕೊಂಡು ರೂಪಿಸಿದಂತಿದೆ. ನಿಮ್ಮಿಂದ ನಿಮಗಾಗಿ ರೂಪಿಸಿದಂತಿದೆಯೇ ವಿನಃ, ಜನರಿಂದ ಜನರಿಗಾಗಿ ರೂಪಿಸಿದಂತೆ ಇಲ್ಲ. ಅದರಿಂದಲೇ ಸ್ಮಾರ್ಟ್‍ಸಿಟಿ ಯೋಜನೆಗಳ ಬಗ್ಗೆ ಸಾರ್ವಜನಿಕವಾಗಿ ಸದಭಿಪ್ರಾಯ ವ್ಯಕ್ತಗೊಳ್ಳುತ್ತಿಲ್ಲ” ಎಂದು ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನುದ್ದೇಶಿಸಿ ಶಾಸಕರು ಅಸಮಾಧಾನದಿಂದ ಉದ್ಗರಿಸಿದರು. 
ಯೋಜನೆ ವಿರೋಧ ಭಾಸ
    ತುಮಕೂರು ನಗರದಲ್ಲಿ ಬೆಸ್ಕಾಂ ಮತ್ತು ಸ್ಮಾರ್ಟ್‍ಸಿಟಿ ಯೋಜನೆಯ ನಡುವೆ ಬೀದಿ ದೀಪ ವಿಷಯದಲ್ಲಿ ವಿರೋಧಾ ಇರುವುದು ಸಭೆಯಲ್ಲಿ ಚರ್ಚೆಗೆ ಬಂತು.
     ಪ್ರಸ್ತುತ ಬೆಸ್ಕಾಂ ವತಿಯಿಂದ ನಗರದಲ್ಲಿ  ಕೋಟ್ಯಂತರ ರೂ. ವೆಚ್ಚದಲ್ಲಿ ಭೂಗತ (ಅಂಡರ್‍ಗ್ರೌಂಡ್) ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆ ಯೋಜನೆ ಪ್ರಕಾರ ನಗರದಲ್ಲಿ ಈಗಿರುವ ಸುಮಾರು 3,000 ಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ತೆಗೆದುಹಾಕಲಾಗುವುದು. ಕಾರಣ ವಿದ್ಯುತ್ ಲೈನ್ ಭೂಗತವಾಗಿರುತ್ತದೆ. ಎಲ್ಲೆಲ್ಲಿ ಬೀದಿ ದೀಪ ಅವಶ್ಯವೋ ಅಂತಹ ಸ್ಥಳದಲ್ಲಿ ಭೂಮಿಯೊಳಗಿನ ಕೇಬಲ್‍ನಿಂದ ವಿದ್ಯುತ್ ಸಂಪರ್ಕ ಪಡೆದು ಆಯಾ ಕಂಬಗಳ ಬೀದಿದೀಪಕ್ಕೆ ಬಳಸಿಕೊಳ್ಳಬಹುದು. 
    ಆದರೆ ನಗರದ ಬೀದಿದೀಪಗಳ ವಿಷಯದಲ್ಲಿ ಸ್ಮಾರ್ಟ್‍ಸಿಟಿ ಕಂಪನಿ ರೂಪಿಸಿರುವ ಯೋಜನೆ ಇದಕ್ಕೆ ವಿರೋಧ ಭಾಸದಂತಿದೆ. ಸ್ಮಾರ್ಟ್‍ಸಿಟಿ ಕಂಪನಿಯು ನಗರದಲ್ಲಿ 40,000 ಎಲ್.ಇ.ಡಿ. ಬೀದಿದೀಪಗಳನ್ನು ಅಳವಡಿಸಲು ಹಲವು ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಹಾಲಿ ಇರುವ ವಿದ್ಯುತ್‍ಕಂಬಗಳನ್ನು ಬಳಸಿಕೊಂಡೇ ಅವುಗಳಿಗೆ ಬೀದಿದೀಪಗಳನ್ನು ಅಳವಡಿಸಲುದ್ದೇಶಿಸಲಾಗಿದೆ. ಇಲ್ಲಿ ಹೊಸ ಕಂಬಗಳ ಯೋಜನೆಯಿಲ್ಲ. ಕೇವಲ ಬೀದಿದೀಪಗಳುಳ್ಳ ಕ್ಲಾಂಪ್ ಅಳವಡಿಕೆಯಷ್ಟೇ ಇದರ ಉದ್ದೇಶವಾಗಿದೆ.
    ಒಂದು ಕಡೆ ಬೆಸ್ಕಾಂ ನಗರದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವು ಮಾಡಲು ಯೋಜನೆ ಅನುಷ್ಥಾನಗೊಳಿಸುತ್ತಿದ್ದರೆ, ಇತ್ತ ಸ್ಮಾರ್ಟ್‍ಸಿಟಿ ಕಂಪನಿಯು ಹಾಲಿ ಇರುವ ವಿದ್ಯುತ್ ಕಂಬಗಳಿಗೇ ಎಲ್.ಇ.ಡಿ. ಬೀದಿದೀಪ ಅಳವಡಿಸಲು ಹೊರಟಿರುವುದು ಹೇಗೆ ಸಾಧ್ಯ ? ಎಂಬುದು ಸಹ ಸಭೆಯಲ್ಲಿ ಚರ್ಚೆಗೊಂಡಿತು.
       ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳ ಸಂದರ್ಭದಲ್ಲಿ ಒಳಚರಂಡಿ ಯೋಜನೆ ಮತ್ತು ಕುಡಿಯುವ ನೀರಿನ ಪೈಪ್‍ಲೈನ್‍ಗಳಿಗೆ ಹಾನಿಯಾಗುತ್ತಿರುವುದು, ಬಿ.ಎಚ್.ರಸ್ತೆ ಸೇರಿ ವಿವಿಧೆಡೆ ಕಾಂಕ್ರಿಟ್ ತೊಟ್ಟಿಗಳನ್ನು ನಿರ್ಮಿಸುತ್ತಿದ್ದು ಇವುಗಳಿಗೆ ಒಂದರಿಂದ ಇನ್ನೊಂದಕ್ಕೆ ಸಂಪರ್ಕ ನೀಡುವಾಗ ರಸ್ತೆಗೆ ಹಾನಿಯಾಗುವ ಸಂಭವ ಇರುವುದು ಮೊದಲಾದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
      ಈ ಸಭೆಯಲ್ಲಿ ಪಾಲಿಕೆಯ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಪ್ರಭಾರ ಆಯುಕ್ತ ಸಿ.ಎಲ್. ಶಿವಕುಮಾರ್, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸೈಯದ್ ನಯಾಜ್, ಲಕ್ಷ್ಮೀನರಸಿಂಹರಾಜು, ಮಂಜುಳ ಆದರ್ಶ್, ವಿ.ಎಸ್.ಗಿರಿಜಾ, ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್, ಉಪ ಆಯುಕ್ತ (ಕಂದಾಯ) ಯೋಗಾನಂದ್, ಸ್ಮಾರ್ಟ್‍ಸಿಟಿ ಕಂಪನಿಯ ಎಕ್ಸಿಕ್ಯುಟೀವ್ ಇಂಜಿನಿಯರ್ ಬಸವರಾಜಗೌಡ ಹಾಗೂ ಸಲಹೆಗಾರ ಪವನ್‍ಕುಮಾರ್ ಸೈನಿ, ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್‍ಗಳು ಮತ್ತು ಇತರೆ ಅಧಿಕಾರಿಗಳು, ಬೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್‍ಗೋವಿಂದಪ್ಪ, ಎಕ್ಸಿಕ್ಯುಟೀವ್ ಇಂಜಿನಿಯರ್ ಸೈಯದ್, ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಯ ಎ.ಇ.ಇ. ಚಂದ್ರ ಶೇಖರ್, ರಾಷ್ಟ್ರೀಯ ಹೆದ್ದಾರಿ ವಿ`Áಗದ ಎ.ಇ.ಇ. ಚಿದಾನಂದ ಸ್ವಾಮಿ ಮೊದಲಾದ ಹಿರಿಯ-ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 
ಸದಸ್ಯರ ಅಸಮಾಧಾನ
     ಪಾಲಿಕೆಯ ಮೊದಲನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಈ ಸಭೆ ನಡೆಯುತ್ತಿದ್ದರೆ, ಪಾಲಿಕೆಯ ನೆಲಮಹಡಿಯಲ್ಲಿ ಸೇರಿದ್ದ ಪಾಲಿಕೆಯ ಅನೇಕ ಸದಸ್ಯರುಗಳು “ಸಭೆಗೆ ಸದಸ್ಯರಾದ ನಮ್ಮನ್ನು ಆಹ್ವಾನಿಸಿಲ್ಲ” ಎಂಬ ಅಸಮಾಧಾನವನ್ನು ಹೊರಹಾಕಿದರು. “ಸದಸ್ಯರು ಅನುಭವಿಸುತ್ತಿರುವ ಕಷ್ಟ ಸದಸ್ಯರಿಗೆ ಗೊತ್ತು. ಜನರಿಗೆ ನಾವು ಉತ್ತರ ಕೊಡಬೇಕು. ಹೀಗಿರುವಾಗ ನಮ್ಮನ್ನೇ ಆಹ್ವಾನಿಸದಿರುವುದು ಸರಿಯಲ್ಲ. ಸ್ಮಾರ್ಟ್‍ಸಿಟಿ ಕೆಲಸ ಕಾರ್ಯಗಳ ಬಗ್ಗೆ ನಮಗೆ ಮಾಹಿತಿ ಬೇಡವೇ?” ಎಂದು ಅನೇಕ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link